ಸಿನಿವಾಣಿ

ಹಾಡುಗಳ ಕಂಪೋಸಿಂಗ್ ಮುಗೀತು; ಚಿತ್ರೀಕರಣ ಶುರುವಾಗದೊಂದೇ ಬಾಕಿ

`ಡಾರ್ಲಿಂಗ್' ಕೃಷ್ಣ ಅಭಿನಯದ `ಶ್ರೀಕೃಷ್ಣ@ಜಿಮೇಲ್ ಡಾಟ್‍ಕಾಮ್' ಚಿತ್ರದ ಹಾಡುಗಳ ಕಂಪೋಸಿಂಗ್ ಜೂನ್ 18ರಂದು ಪ್ರಾರಂಭವಾಗಿತ್ತು. ಅರ್ಜುನ್ ಜನ್ಯ ಅವರ ಸ್ಟುಡಿಯೋದಲ್ಲಿ ಹಾಡುಗಳ ಕಂಪೋಸಿಂಗ್ ಜತೆಗೆ ಚಿತ್ರದ ಮುಹೂರ್ತ ಸರಳವಾಗಿ ಮುಗಿದಿತ್ತು. ಈಗ ಆ ಹಾಡುಗಳ ಕಂಪೋಸಿಂಗ್ ಕೆಲಸ ಸದ್ದಿಲ್ಲದೆ ಮುಗಿದಿದೆ.

`ಶ್ರೀಕೃಷ್ಣ@ಜಿಮೇಲ್ ಡಾಟ್‍ಕಾಮ್' ಚಿತ್ರದಲ್ಲಿ ನಾಲ್ಕು ಸುಮಧುರ ಹಾಡುಗಳಿದ್ದು, ಆ ಹಾಡುಗಳೇ ಚಿತ್ರದ ಜೀವಾಳ ಎಂದು ನಿರ್ದೇಶಕ ನಾಗಶೇಖರ್ ಹೇಳಿಕೊಂಡಿದ್ದರು. ಕವಿರಾಜ್ ಆ ನಾಲ್ಕೂ ಹಾಡುಗಳನನ್ನು ಬರೆದಿದ್ದು, ಈಗಾಗಲೇ ಅರ್ಜುನ್ ಜನ್ಯ ಅದಕ್ಕೆ ರಾಗ ಹಾಕಿದ್ದಾರೆ. ಇನ್ನು ಅದನ್ನು ಸೂಕ್ತ ಗಾಯಕರೊಂದಿಗೆ ರೆಕಾರ್ಡ್ ಮಾಡುವ ಕೆಲಸ ಇನ್ನಷ್ಟೇ ಶುರುವಾಗಬೇಕಿದೆ.

`ಶ್ರೀಕೃಷ್ಣ@ಜಿಮೇಲ್ ಡಾಟ್‍ಕಾಮ್' ಚಿತ್ರವನ್ನು ಸಂದೇಶ್ ಕಂಬೈನ್ಸ್‍ನಡಿ ಸಂದೇಶ್ ನಾಗರಾಜ್ ನಿರ್ಮಿಸುತ್ತಿದ್ದು, ನಾಗಶೇಖರ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಕೃಷ್ಣ ಅಭಿನಯಿಸುತ್ತಿದ್ದು, ನಾಯಕಿಯ ಆಯ್ಕೆ ಇನ್ನಷ್ಟೇ ಅಂತಿಮವಾಗಬೇಕಿದೆ. ಈಗಾಗಲೇ ರಾಧಿಕಾ ಕುಮಾರಸ್ವಾಮಿ ಅವರಿಗೆ ಕಥೆ ಹೇಳಲಾಗಿದ್ದು, ಅವರು ಇನ್ನಷ್ಟೇ ಗ್ರೀನ್ ಸಿಗ್ನಲ್ ನೀಡಬೇಕಿದೆ.

ಚಿತ್ರದ ಮುಹೂರ್ತವಾಗಿ, ಹಾಡುಗಳ ಕಂಪೋಸಿಂಗ್ ಶುರುವಾಗಿದ್ದರೂ, ಚಿತ್ರೀಕರಣ ಇನ್ನಷ್ಟೇ ಶುರುವಾಗಬೇಕಿದೆ. ಕರೊನಾ ತೀವ್ರಗತಿಯಲ್ಲಿ ಹಬ್ಬುತ್ತಿರುವುದರಿಂದ, ಚಿತ್ರೀಕರಣ ಮಾಡುವುದಕ್ಕೆ ಹಲವರು ಹೆದರುತ್ತಿದ್ದಾರೆ. ಆ ಕಾರಣ, ಸರ್ಕಾರ ಚಿತ್ರೀಕರಣ ಮಾಡುವುದಕ್ಕೆ ಅನುಮತಿ ನೀಡಿದ್ದರೂ, ಬಹಳಷ್ಟು ಚಿತ್ರತಂಡಗಳು ಚಿತ್ರೀಕರಣವನ್ನು ಇನ್ನೂ ಪ್ರಾರಂಭಿಸಿಲ್ಲ.

`ಶ್ರೀಕೃಷ್ಣ@ಜಿಮೇಲ್ ಡಾಟ್‍ಕಾಮ್' ಚಿತ್ರತಂಡದವರು ಸಹ ಕಾದು ನೋಡುವ ತಂತ್ರ ಪ್ರಾರಂಭಿಸಿದ್ದು, ಕರೊನಾ ಸೋಂಕು ಸ್ವಲ್ಪ ತಹಬದಿಗೆ ಬಂದ ನಂತರ, ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.

ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದರೆ, ಸತ್ಯ ಹೆಗಡೆ ಛಾಯಾಗ್ರಹಣ ಮಾಡಲಿದ್ದಾರೆ. ಇನ್ನು ದೀಪು ಎಸ್. ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ.