ಬೆಂಗಳೂರು: ಕಳೆದ ಒಂದು ವರ್ಷದಲ್ಲಿ ಪತ್ರಕರ್ತ ಹಾಗೂ ನಟ ಯತಿರಾಜ್ ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈಗ ಅವರ 18ನೇ ಕಿರುಚಿತ್ರವಾಗಿ 'ಆರಾಧ್ಯ' ಮೂಡಿಬಂದಿದೆ. ಈ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ ಅವರೇ ಕಥೆ, ಚಿತ್ರಕಥೆ ಬರೆದು ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: ಕನ್ನಡ ಸಿನಿಮಾದಲ್ಲಿ ರಶ್ಮಿಕಾ ನಟಿಸದಿರಲು ಕಾರಣ…
ತಂದೆ-ಮಗಳ ಬಾಂಧವ್ಯ ಸಾರುವ ಈ ಚಿತ್ರವು ಇದೀಗ ಯೂಟ್ಯೂಬ್ನ ಕಲಾವಿಧ ಚಾನಲ್ನಲ್ಲಿ ಬಿಡುಗಡೆಯಾಗಿ, ಮೆಚ್ಚುಗೆ ಪಡೆಯುತ್ತಿದೆ. ಇತ್ತೀಚೆಗೆ, ಈ ಕಿರುಚಿತ್ರದ ಪ್ರದರ್ಶನ ಸಹ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಯತಿರಾಜ್, 'ಕರೊನಾ ಬಂದ ಮೇಲೆ ಆಯಾ ಸಂದರ್ಭಕ್ಕೆ ತಕ್ಕ ಹಾಗೆ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಆದರೆ, 'ಆರಾಧ್ಯ' ನನ್ನ ಮನಸ್ಸಿಗೆ ಬಹಳ ಹತ್ತಿರವಾದ ಸಿನಿಮಾ. ಮನೆಯಲ್ಲಿ ತಂದೆಯಾದವನಿಗೆ ಜವಾಬ್ದಾರಿ ಇಲ್ಲದೇ ಇದ್ದಾಗ, ಮಕ್ಕಳಿಗೆ ಯಾವ ರೀತಿ ತೊಂದರೆಯಾಗುತ್ತದೆ ಎಂಬ ವಿಷಯವನ್ನು ಮುಖ್ಯವಾಗಿಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ' ಎಂದರು.
'ಆರಾಧ್ಯ' ಕಿರುಚಿತ್ರದಲ್ಲಿ ಯತಿರಾಜ್ ಜತೆಗೆ ಬೇಬಿ ಆರಾಧ್ಯ, ಅಂಜಲಿ, ಶಾಂತಕುಮಾರ್ ಅಭಿನಯಿಸಿದ್ದಾರೆ. ಜೀವನ್ ಅವರ ಛಾಯಾಗ್ರಹಣ ಹಾಗೂ ಸಂಕಲನ, ವಿನುಮನಸು ಸಂಗೀತ ನಿರ್ದೇಶನ ಈ ಕಿರುಚಿತ್ರಕ್ಕಿದೆ. ಈ ಕಿರುಚಿತ್ರ ಎಂಟು ನಿಮಿಷದ ಅವಧಿಯದ್ದಾಗಿದೆ.
ಈ ಸಂದರ್ಭದಲ್ಲಿ ಕಿರುಚಿತ್ರ ನೋಡಿದ 'ಗೆಜ್ಜೆನಾದ' ಖ್ಯಾತಿಯ ವಿಜಯಕುಮಾರ್, ಜಂಕಾರ್ ಮ್ಯೂಸಿಕ್ ನ ಭರತ್ ಜೈನ್ ಹಾಗೂ ಪತ್ರಿಕಾ ಸಂಪರ್ಕಾಧಿಕಾರಿ ವೆಂಕಟೇಶ್ ತಮ್ಮ ಅಭಿಪ್ರಾಯ ಹಂಚಿಕೊಂಡರು.