ಸಿನಿವಾಣಿ

ಅಪ್ಪು 'ಜೇಮ್ಸ್' ಸಿನಿಮಾ.. ನೋ ಟ್ರೈಲರ್, ನೋ ಟೀಸರ್? ಗಾಳಿ ಸುದ್ದಿಗಳಿಗೆ ಚಿತ್ರತಂಡ ಕೊಟ್ಟ ಸ್ಪಷ್ಟನೆ ಏನು?

ದಿವಂಗತ ಪುನೀತ್ ರಾಜ್‌ಕುಮಾರ್ ಅವರ ನಟನೆಯ 'ಜೇಮ್ಸ್' ಸಿನಿಮಾ ನಿರ್ಮಾಪಕರು ಪವರ್ ಸ್ಟಾರ್ ಅವರ ಹುಟ್ಟುಹಬ್ಬದಂದು ಅಂದರೆ ಮಾರ್ಚ್ 17 ರಂದು ತಮ್ಮ ಸಿನಿಮಾವನ್ನು ರಿಲೀಸ್ ಮಾಡಲು ಸಿಕ್ಕಾಪಟ್ಟೆ ಕಷ್ಟಪಡುತ್ತಿದ್ದಾರೆ. ಚೇತನ್ ಕುಮಾರ್ ನಿರ್ದೇಶನದ ಈ ಚಿತ್ರ 'ರಾಜಕುಮಾರ' ನಂತರ ನಟ ಪುನೀತ್ ರಾಜ್‌ಕುಮಾರ್ ಮತ್ತು ಪ್ರಿಯಾ ಆನಂದ್ ಅವರು ಎರಡನೇ ಬಾರಿಗೆ ತೆರೆ ಹಂಚಿಕೊಳ್ಳಲಿರುವ ಸಿನಿಮಾ ಆಗಿದೆ. ಉತ್ತರ ಕರ್ನಾಟಕದಲ್ಲಿ ಚಿತ್ರೀಕರಣಗೊಂಡಿರುವ ಈ ಪ್ರಾಜೆಕ್ಟ್ ಆ್ಯಕ್ಷನ್ ಮತ್ತು ಕೌಟುಂಬಿಕ ಅಂಶಗಳನ್ನು ಒಳಗೊಂಡಿದೆ. ಈಗಾಗಲೇ ಪೋಸ್ಟರ್​ಗಳು ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ.
ಸದ್ಯ, ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಎಂದು ವರದಿಯಾಗಿದೆ. ಪುನೀತ್ ಅವರ ಪಾತ್ರಗಳನ್ನು ಹೊರತುಪಡಿಸಿ ಎಲ್ಲಾ ಪಾತ್ರಗಳ ಡಬ್ಬಿಂಗ್ ಭಾಗಗಳು ಪೂರ್ಣಗೊಂಡಿವೆ. ಅಭಿಮಾನಿಗಳ ಪ್ರೀತಿಯ ಅಪ್ಪು ನಾಯಕನಟನಾಗಿ ನಟಿಸಿರುವ ಕೊನೆಯ ಸಿನಿಮಾ ಇದಾಗಿದ್ದು, ಪ್ರೇಕ್ಷಕರಲ್ಲಿ ನಿರೀಕ್ಷೆಗಳು ಆಕಾಶದಷ್ಟು ಅಥವಾ ಬೆಟ್ಟದಷ್ಟು ಇವೆ ಎನ್ನಬಹುದು. ಅಪ್ಪು ಅವರ ಈ ಸಿನಿಮಾದ ಬಿಡುಗಡೆಗೆ ಮುನ್ನ ಒಂದು ಸಣ್ಣ ಟ್ರೈಲರ್, ಟೀಸರ್ ರಿಲೀಸ್​ಗಾಗಿ ಅಭಿಮಾನಿಗಳು ಕಾಯುತ್ತಿದ್ದರು.
ಆದರೆ, ಈಗ ಅಭಿಮಾನಿಗಳ ಆಸೆ ಈಡೇರುವುದಿಲ್ಲ ಎಂಬ ಸುದ್ದಿಗಳು ಹರಿದಾಡುತ್ತಿವೆ. ಹೌದು, ಗಾಂಧಿನಗರದ ಸುದ್ದುಗಳ ಪ್ರಕಾರ ನಿರ್ದೇಶಕ ಚೇತನ್ ಕುಮಾರ್​ಗೆ ಸಮಯದ ಆಭಾವದಿಂದ ಈ ಸಿನಿಮಾದ ಯಾವುದೇ ಟ್ರೈಲರ್ ಅಥವಾ ಟೀಸರ್ ಬಿಡುಗಡೆ ಇಲ್ಲದೇ, ನೇರವಾಗಿ ಸಿನಿಮಾ ಚಿತ್ರಮಂದಿರಗಳಲ್ಲಿ ಅಪ್ಪು ಹುಟ್ಟುಹಬ್ಬದಂದು ತೆರೆ ಕಾಣಲಿದೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಜತೆಗೆ, ಅಪ್ಪು ನಮ್ಮೊಂದಿಗೆ ಇರದ ಕಾರಣ, ಟೀಸರ್, ಟ್ರೈಲರ್ ಎಂದು ಸಂಭ್ರಮಿಸುವ ಸಮಯ ಇದಲ್ಲವೆಂದು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ. ಈ ಸುದ್ದಿ ಸದ್ಯ ಅಭಿಮಾನಿಗಳಿಗೆ ಬೇಸರ ತಂದಿದೆ.
ಆದರೆ, ಈ ಸುಳ್ಳು ಸುದ್ದಿಗಳಿಗೆ ಚಿತ್ರತಂಡದಿಂದ ಸ್ಪಷ್ಟನೆ ಲಭಿಸಿದೆ. 'ಯಾವುದೇ ಸುಳ್ಳು ಸುದ್ದಿಗಳನ್ನು ನಂಬಬೇಡಿ. ಅಪ್ಪು ಅವರ ಕೊನೆಯ ಸಿನಿಮಾ ಇದಾಗಿದ್ದು, ಎಲ್ಲಾ ರೀತಿಯಲ್ಲಿ ಈ ಸಿನಿಮಾವನ್ನು ಭರ್ಜರಿಯಾಗಿ ರಿಲೀಸ್ ಮಾಡಲಿದ್ದೇವೆ. ಬೇರೆ ಸಿನಿಮಾಗಳನ್ನು ಬಿಡುಗಡೆ ಮಾಡುವ ರೀತಿಯಲ್ಲಿಯೇ, ಈ ಸಿನಿಮಾದ ಟೀಸರ್, ಟ್ರೈಲರ್ ಕೂಡ ಬಿಡುಗಡೆಯಾಗಲಿದೆ' ಎಂದು ನಿರ್ದೇಶಕ ಚೇತನ್ ಕುಮಾರ್ ಮತ್ತು ಚಿತ್ರತಂಡ ವಿಜಯವಾಣಿಗೆ ಮಾಹಿತಿ ನೀಡಿದೆ. ಹಾಗಾದರೆ, ಅಭಿಮಾನಿಗಳಿಗೆ ಅಪ್ಪು ಕೊನೆಯ ಸಿನಿಮಾದ ಸಂಭ್ರಮ ದುಪ್ಪಟ್ಟು ಆಗಲಿದೆ ಎಂದೇ ಹೇಳಬೇಕು.