ಸಿನಿವಾಣಿ

'ಇನ್ನೇನು ಪರಿಚಯ ರೊಮ್ಯಾನ್ಸ್​ಗೆ ತಿರುಗಬೇಕು ಎನ್ನುವಷ್ಟರಲ್ಲಿ...': ಹೀಗಂದಿದ್ದೇಕೆ ಅನೂಪ್​ ಭಂಡಾರಿ?

ಬೆಂಗಳೂರು: 'ಲವ್ ಎಟ್ ಫಸ್ಟ್​ ಸೈಟ್' ಎನ್ನುವ ಮಾತೊಂದಿದೆ. ಹೀಗೆ ಪ್ರೀತಿಗೆ ಬುನಾದಿಯಾಗುವ ಮೊದಲ ನೋಟ ಎಲ್ಲಿ ಬೇಕಾದರೂ ಸಂಧಿಸಬಹುದು. ಅಂಥದ್ದೊಂದು ಮೊದಲ ನೋಟ ಅಂತ್ಯಸಂಸ್ಕಾರವೊಂದರಲ್ಲಿ ಸಂಭವಿಸಿದರೆ ಹೇಗಿರುತ್ತದೆ?

"ಒಬ್ಬ ಹುಡುಗ ಮತ್ತು ಒಬ್ಬಳು ಹುಡುಗಿ ತಮ್ಮ ಸ್ನೇಹಿತನ ತಂದೆಯ ಅಂತಿಮ ಸಂಸ್ಕಾರದ ದಿನ ಭೇಟಿಯಾಗುತ್ತಾರೆ. ಪರಿಚಯ ಆಕರ್ಷಣೆಯೆಡೆಗೆ ತಿರುಗುವಷ್ಟರಲ್ಲಿ ಸ್ನೇಹಿತನ ತಂದೆಯ ಶವ ನಾಪತ್ತೆಯಾಗುತ್ತದೆ.." ಇಂಥದ್ದೊಂದು ಸನ್ನಿವೇಶವನ್ನು ನಿರ್ದೇಶಕ ಅನೂಪ್​ ಭಂಡಾರಿ ಹೇಳಿಕೊಂಡಿದ್ದು, ಮುಂದೇನು ಎಂಬುದನ್ನು ಬರೆಯುವವರಿಗೇ ಬಿಟ್ಟಿದ್ದಾರೆ.

ಚಿತ್ರರಂಗದಲ್ಲಿ ಸಾಮಾನ್ಯವಾಗಿ ಯಾವುದೇ ಕಥೆ ಹುಟ್ಟುವುದಿದ್ದರೂ ಅದು ಒಂದೆಳೆಯಿಂದ. ಒಂದೆರಡೇ ಸಾಲಿನಲ್ಲಿ ಹುಟ್ಟಿಕೊಳ್ಳುವ ಕಥೆ, ಚಿತ್ರಕಥೆಯಾಗಿ, ಸಂಭಾಷಣೆಯೊಂದಿಗೆ ಸೇರಿ ನಿರ್ದೇಶಕನ ಅಣತಿಯಂತೆ ಅಭಿನಯದಲ್ಲಿ ವ್ಯಕ್ತವಾಗಿ ಕ್ಯಾಮರಾದಲ್ಲಿ ಸೆರೆಯಾಗಿ ಸಂಕಲನವಾಗಿ, ಕತ್ತಲೆಯಲ್ಲಿ ಬೆಳಕಿನ ಪರದೆ ಮೇಲೆ ಅನಾವರಣಗೊಂಡು ಸಿನಿಮಾ ಆಗಿ ಮೂಡಿಬರುತ್ತದೆ.

ಹೀಗೆ ಸಿನಿಮಾ ಆಗುವ ಒಂದೆಳೆಯನ್ನು ನೀಡಿರುವ ನಿರ್ದೇಶಕ ಅನೂಪ್​ ಭಂಡಾರಿ ಬರವಣಿಗೆಯಲ್ಲಿ ಆಸಕ್ತಿ ಇರುವವರಿಗೆ ಅದನ್ನು ಮುಂದುವರಿಸಿ ಒಂದೊಳ್ಳೆಯ ಕಥೆಯಾಗಿಸುವ ಅವಕಾಶ ಹಾಗೂ ಸವಾಲನ್ನೂ ನೀಡಿದ್ದಾರೆ. ಇದು ಪ್ರತಿಭಾವಂತ ಬರಹಗಾರರಿಗೆ ಒಂದು ಅವಕಾಶ ಎಂದು ಹೇಳಿಕೊಂಡಿರುವ ಅವರು ನಿಮ್ಮೊಂದಿಗೆ ಕೆಲಸ ಮಾಡುವ ನಿರೀಕ್ಷೆಯಲ್ಲಿದ್ದೇನೆ ಎಂದೂ ತಿಳಿಸಿದ್ದಾರೆ. ಈ ಮೂಲಕ ಬರಹಗಾರರಿಗೆ ಇರುವ ಬೇಡಿಕೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ.