ಬೆಂಗಳೂರು: ಇದೀಗ ತಾನೇ ಹುಟ್ಟುಹಬ್ಬ ಆಚರಿಸಿಕೊಂಡು, ಅಭಿಮಾನಿಗಳಿಗೆ ‘ಕೋಟಿಗೊಬ್ಬ-3’ ಚಿತ್ರದ ಟೀಸರ್ ಉಡುಗೊರೆ ನೀಡಿದ್ದ ಕಿಚ್ಚ ಸುದೀಪ್, ಇದೀಗ ಇನ್ನೊಂದು ಉಡುಗೊರೆ ಕೊಡುವ ಮಾತನಾಡಿದ್ದಾರೆ. ಅದೇ ‘ಅಶ್ವತ್ಥಾಮ’. ಅಂದಹಾಗೆ, ‘ಅಶ್ವತ್ಥಾಮ’ ಎಂಬುದಿಲ್ಲಿ ಸಿನಿಮಾ ಶೀರ್ಷಿಕೆ. ಈ ಚಿತ್ರವನ್ನು ಸ್ವತಃ ಸುದೀಪ್ ನಿರ್ಮಾಣ ಮಾಡುತ್ತಿರುವುದು ಇದೀಗ ಹೊಸ ವಿಚಾರ. ಈ ಚಿತ್ರಕ್ಕೆ ಹೀರೋ ಅವರೇನಾ? ಈ ವಿಚಾರವನ್ನು ‘ಅಶ್ವತ್ಥಾಮ’ ಸಿನಿಮಾ ನಿರ್ದೇಶಿಸಲಿರುವ ಅನೂಪ್ ಭಂಡಾರಿ ‘ವಿಜಯವಾಣಿ’ಗೆ ವಿವರಿಸಿದ್ದಾರೆ.
‘ಕಳೆದ ಎರಡು ವರ್ಷಗಳ ಹಿಂದೆಯೇ ಈ ಕಾನ್ಸೆಪ್ಟ್ ಶುರು ಮಾಡಿದ್ದೆ. ಇತ್ತೀಚೆಗೆ ಸುದೀಪ್ ಅವರ ಬಳಿಯೂ ಹೇಳಿದ್ದೆ. ಪರಿಕಲ್ಪನೆ ಇಷ್ಟವಾಗಿ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ನಲ್ಲಿಯೇ ಮಾಡೋಣ ಬನ್ನಿ ಎಂದಿದ್ದರು. ಹಾಗಾಗಿ ಸದ್ಯಕ್ಕೆ ಅದರ ಅಪ್ಡೇಟ್ ನೀಡುವುದಕ್ಕೆ ಪೋಸ್ಟರ್ವೊಂದನ್ನು ಬಿಡುಗಡೆ ಮಾಡಿದ್ದೇವೆ’ ಎನ್ನುವ ಅನೂಪ್, ‘ಈ ಸಿನಿಮಾದಲ್ಲಿ ಸುದೀಪ್ ನಟಿಸುತ್ತಾರಾ ಎಂಬುದಕ್ಕೆ ಸದ್ಯಕ್ಕೆ ನನ್ನ ಬಳಿ ಉತ್ತರವಿಲ್ಲ’ ಎಂದು ಗೌಪ್ಯತೆ ಕಾಯ್ದುಕೊಳ್ಳುತ್ತಾರೆ. ಇದನ್ನೂ ಓದಿ: ಶಾಸಕ ಹರತಾಳು ಹಾಲಪ್ಪನವರಿಗೆ ಅನಾರೋಗ್ಯ; ಮಣಿಪಾಲ ಆಸ್ಪತ್ರೆಗೆ ದಾಖಲು
‘ಇದೊಂದು ಕಾಲ್ಪನಿಕ ಕಥೆ. ಪ್ರಸ್ತುತ ಕಾಲಘಟ್ಟದಲ್ಲಿಯೇ ನಡೆಯುತ್ತದೆಯಾದರೂ ಮಹಾಭಾರತದ ಅಶ್ವತ್ಥಾಮನೂ ಈ ಸಿನಿಮಾದಲ್ಲಿ ಕಾಣಿಸಲಿದ್ದಾನೆ. ಫ್ಯಾಂಟಸಿ ಜಗತ್ತನ್ನು ಸೃಷ್ಟಿಸಿ, ಇಡೀ ಕಥೆ ಅಲ್ಲಿಯೇ ಸಾಗಲಿದೆ. ಬಿಲ್ಲು ಬಾಣವೂ ಇರಲಿದೆ. ಗನ್ಶಾಟ್ ಸಹ ಕೇಳಿಸಲಿದೆ’ ಎಂದು ಕಥೆ ಹೇಗಿರಲಿದೆ ಎಂಬುದಕ್ಕೆ ಉತ್ತರಿಸುತ್ತಾರವರು.
ಸದ್ಯ ಸುದೀಪ್ ಜತೆ ‘ಫ್ಯಾಂಟಮ್ ಸಿನಿಮಾದಲ್ಲಿ ಅನೂಪ್ ಬಿಜಿಯಾಗಿದ್ದಾರೆ. ಆ ಸಿನಿಮಾ ಮುಗಿದ ಬಳಿಕ ‘ಬಿಲ್ಲ ರಂಗ ಬಾಷ’ ಶುರುವಾಗಬಹುದು. ಈ ಎರಡು ಸಿನಿಮಾ ಮುಗಿದ ಬಳಿಕವಷ್ಟೇ ‘ಅಶ್ವತ್ಥಾಮ’. ಇತ್ತ ‘ಫ್ಯಾಂಟಮ್ ವಿಚಾರಕ್ಕೆ ಬರುವುದಾದರೆ, ಸೋಮವಾರದಿಂದ ರಾಮೋಜಿ ಫಿಲಂ ಸಿಟಿಯಲ್ಲಿ ಆಕ್ಷನ್ ದೃಶ್ಯಗಳ ಚಿತ್ರೀಕರಣಕ್ಕೆ ಪ್ರಾರಂಭವಾಗಿದೆ.