ಬೆಂಗಳೂರು: ರಾಜ್ಯದ ಮೃಗಾಲಯಗಳಲ್ಲಿನ ಸ್ಥಿತಿ ಕಂಡು ಸ್ಯಾಂಡಲ್‌ವುಡ್ ನಟ ದರ್ಶನ್ ಪ್ರಾಣಿ, ಪಕ್ಷಿಗಳನ್ನು ದತ್ತು ಸ್ವೀಕರಿಸುವಂತೆ ಮನವಿ ಮಾಡಿದ್ದರು. ಆ ಒಂದು ಮಾತಿಗೆ ಅಭೂತ ಪೂರ್ವ ಬೆಂಬಲ ಸಿಕ್ಕಿದ್ದು ಗೊತ್ತಿರುವ ವಿಚಾರ.
ಈಗಾಗಲೇ ಸ್ಯಾಂಡಲ್‌ವುಡ್‌ನ ಅನೇಕ ನಟ-ನಟಿಯರು ರಾಜ್ಯಾದ್ಯಂತ ಇರುವ 9 ಮೃಗಾಲಯಗಳ ಪೈಕಿ ಹಲವು ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದಿದ್ದಾರೆ. ಇತ್ತೀಚೆಗಷ್ಟೇ, ಸ್ಯಾಂಡಲ್‌ವುಡ್‌ನ ನಟಿಯರಾದ ಪ್ರಿಯಾಂಕಾ ತಿಮ್ಮೇಶ್ ಮತ್ತು ಅದ್ವಿತಿ ಶೆಟ್ಟಿ ಮೈಸೂರು ಮೃಗಾಲಯದಲ್ಲಿನ ಬ್ಲಾಕ್ ಬಕ್ ಮತ್ತು ನಕ್ಷತ್ರ ಆಮೆಯನ್ನು ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ. ಈಗ ಆ ಸಾಲಿಗೆ ಅಮೂಲ್ಯ ಮತ್ತು ಅವರ ಪತಿ ಜಗದೀಶ್ ಸಹ ಸೇರಿಕೊಂಡಿದ್ದಾರೆ.
ಅಮೂಲ್ಯ ಮತ್ತು ಅವರ ಪತಿ ಜಗದೀಶ್ ಚಂದ್ರ, ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಜಾಗ್ವಾರ್ವೊಂದನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಜಗದೀಶ್, ಜಾಗ್ವಾರ್ ದತ್ತು ಪಡೆಯಲು ಪ್ರೇರಣೆ ನೀಡಿದ್ದಕ್ಕಾಗಿ ದರ್ಶನ್ಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಸಂಕಷ್ಟದಲ್ಲಿರುವ ಪ್ರಾಣಿ-ಪಕ್ಷಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ನೆರವು ನೀಡಿ ಎಂದು ದರ್ಶನ್ ಕರೆ ನೀಡಿದ ಒಂದೇ ವಾರದಲ್ಲಿ ಕೋಟಿ ರೂಪಾಯಿಗೂ ಅಧಿಕ ಮೊತ್ತ ಸಂಗ್ರಹವಾಗಿರುವುದು ವಿಶೇಷ.