ಬೆಂಗಳೂರು: ಕರೊನಾದಿಂದಾಗಿ ಜಗತ್ತಿನಾದ್ಯಂತ ಬಹುತೇಕ ಚಿತ್ರೋತ್ಸವಗಳು ರದ್ದಾಗಿವೆ. ಕೆಲವು ಚಿತ್ರೋತ್ಸವಗಳನ್ನು ಆನ್ಲೈನ್ ಮೂಲಕ ಮಾಡಲು ತೀರ್ವನಿಸಲಾಗಿದೆ. ಆಸ್ಟ್ರಿಯಾ ಅಂತಾರಾಷ್ಟ್ರೀಯ ಚಿತ್ರೋತ್ಸವವನ್ನೂ ಆನ್ಲೈನ್ ಮೂಲಕ ನಡೆಸಲು ತೀರ್ವನಿಸಲಾಗಿದ್ದು, ಈ ಚಿತ್ರೋತ್ಸವಕ್ಕೆ ಇದೀಗ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಆಯ್ಕೆಯಾಗಿದೆ.
‘ಅಮೃತಮತಿ’ ಚಿತ್ರವು ಈ ಹಿಂದೆ ನೋಯ್ಡಾ ವಿಶ್ವ ಚಿತ್ರೋತ್ಸವಕ್ಕೆ ಆಯ್ಕೆ ಆಗಿದ್ದು, ಈ ಚಿತ್ರೋತ್ಸವದಲ್ಲಿ ನಟಿ ಹರಿಪ್ರಿಯಾ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿತ್ತು. ಇದೀಗ, ಚಿತ್ರವು ಆಸ್ಟ್ರಿಯಾ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾಕಣಕ್ಕೆ ಆಯ್ಕೆಯಾಗಿದ್ದು, ಈ ಚಿತ್ರೋತ್ಸವವು ಜುಲೈ 22ರಿಂದ ಆಗಸ್ಟ್ 5ರವರೆಗೂ ನಡೆಯಲಿದೆ. ಆ ನಂತರ ವಿಶೇಷ ಸಮಾರಂಭವನ್ನು ಆಯೋಜಿಸಿ, ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.
‘ಅಮೃತಮತಿ’ ಚಿತ್ರವು ‘ಯಶೋಧರ ಚರಿತೆ’ ಕಾವ್ಯವನ್ನಾಧರಿಸಿದೆ. ಮೂಲ ಕಥಾವಸ್ತುವನ್ನು ಮರುವ್ಯಾಖ್ಯಾನ ಮಾಡಿ ಮರುಸೃಷ್ಟಿ ಮಾಡಲಾಗಿದೆ. ಚಿತ್ರದಲ್ಲಿ ಅಮೃತಮತಿ ಪಾತ್ರವನ್ನು ಹರಿಪ್ರಿಯಾ ಮಾಡಿದರೆ, ಯಶೋಧರನ ಪಾತ್ರದಲ್ಲಿ ಕಿಶೋರ್ ಕಾಣಿಸಿಕೊಂಡಿದ್ದಾರೆ. ಮಿಕ್ಕಂತೆ ಸುಂದರ್ರಾಜ್, ಪ್ರಮೀಳಾ ಜೋಷಾಯ್, ವತ್ಸಲಾ ಮೋಹನ್, ತಿಲಕ್, ಸುಪ್ರಿಯಾ ರಾವ್ ಮುಂತಾದವರು ನಟಿಸಿದ್ದಾರೆ. ಶಮಿತಾ ಮಲ್ನಾಡ್ ಅವರ ಸಂಗೀತ ಈ ಚಿತ್ರಕ್ಕಿದೆ.