ಸಿನಿವಾಣಿ

ಅಮಿತಾಭ್ ಬಿಚ್ಚಿಟ್ಟ 47 ವರ್ಷಗಳ ಹಿಂದಿನ ಕಥೆ!

ಇಂದು ‘ಬಿಗ್ ಬಿ’ ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ 47ನೇ ವಿವಾಹ ವಾರ್ಷಿಕೋತ್ಸವ. 1973ರ ಜೂನ್ 3ರಂದು ಮದುವೆ ನಡೆದಿದ್ದು, ಈ ಮದುವೆಯ ಫೋಟೋವನ್ನು ಅಮಿತಾಭ್ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಮದುವೆ ಫೋಟೋ ಹಂಚಿಕೊಳ್ಳುವುದರ ಜತೆಗೆ, ಮದುವೆಯ ಹಿಂದಿನ ಸ್ವಾರಸ್ಯಕರ ಕಥೆಯೊಂದನ್ನು ಅಮಿತಾಭ್ ಅವರು ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಜಂಜೀರ್’ ಚಿತ್ರ ಗೆದ್ದರೆ ಸ್ನೇಹಿತರ ಜತೆಗೆ ಲಂಡನ್‌ಗೆ ಹೋಗುವುದಕ್ಕೆ ಅಮಿತಾಭ್ ತೀರ್ಮಾನಿಸಿದ್ದರಂತೆ. ಅಲ್ಲೇ, ಚಿತ್ರದ ಯಶಸ್ಸಿನ ಸಂಭ್ರಮವನ್ನು ಆಚರಿಸುವ ಬಗ್ಗೆ ಯೋಚಿಸಿದ್ದರಂತೆ.

ಈ ವಿಷಯವನ್ನು ತಂದೆ ಹರಿವಂಶರಾಯ್ ಬಚ್ಚನ್ ಅವರಿಗೆ ಹೇಳಿದಾಗ, ಅವರೂ ಖುಷಿಪಟ್ಟರಂತೆ. ಅಲ್ಲದೆ, ಯಾರ ಜತೆಗೆ ಲಂಡನ್‌ಗೆ ಹೋಗುತ್ತಿರುವುದಾಗಿ ಕೇಳಿದರಂತೆ. ಆಗ ಅಮಿತಾಭ್, ಜಯಾ ಅವರ ಹೆಸರನ್ನು ಎತ್ತಿದ್ದಾರೆ. ತಕ್ಷಣವೇ, ‘ಜಯಾ ಜತೆಗೆ ಹೋಗುವುದಿದ್ದರೆ, ಮೊದಲು ಮದುವೆಯಾಗು. ಆಮೇಲೆ ಏನಾದರೂ ಮಾಡಿಕೋ’ ಎಂದರಂತೆ. ಅಪ್ಪನ ಮಾತಿಗೆ ಬೆಲೆ ಕೊಟ್ಟು, ಜಯಾ ಅವರನ್ನು ಮದುವೆಯಾಗಿ, ಲಂಡನ್‌ಗೆ ಹನಿಮೂನ್‌ಗೆ ಹೋಗಿದ್ದಾಗಿ ಹೇಳಿಕೊಂಡಿದ್ದಾರೆ ಅಮಿತಾಭ್ ಬಚ್ಚನ್.

ಅಮಿತಾಭ್ ಮತ್ತು ಜಯಾ ಜತೆಯಾಗಿ ಮೊದಲು ನಟಿಸಿದ ‘ಜಂಜೀರ್’. ಆ ಚಿತ್ರದ ಸಂದರ್ಭದಲ್ಲೇ ಅವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಚಿತ್ರ ಬಿಡುಗಡೆಯಾಗಿ ಒಂದೇ ತಿಂಗಳಲ್ಲಿ ಮದುವೆಯಾದ ಅಮಿತಾಭ್ ಮತ್ತು ಜಯಾ, ನಂತರದ ವರ್ಷಗಳಲ್ಲಿ ‘ಅಭಿಮಾನ್’, ‘ಶೋಲೆ’, ‘ಚುಪ್ಕೆ ಚುಪ್ಕೆ’, ‘ಸಿಲ್ಸಿಲಾ’, ‘ಕಭಿ ಖುಷಿ ಕಭಿ ಘಮ್’ ಮುಂತಾದ ಹಲವು ಚಿತ್ರಗಳಲ್ಲಿ ಜತೆಯಶಗಿ ನಟಿಸಿದ್ದಾರೆ.

ಅಮಿತಾಭ್ ಮತ್ತು ಜಯಾ ಅವರ ಈ ವಿವಾಹ ವಾರ್ಷಿಕೋತ್ಸವಕ್ಕೆ ಬಿಪಾಶಾ ಬಸು, ಶಮಿತಾ ಶೆಟ್ಟಿ ಸೇರಿದಂತೆ ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ.