ಕಳೆದು ಹೋಗುವ ಮುನ್ನ..

theatar
Published on

ಬೆಂಗಳೂರು: ಎರಡೂವರೆ ತಿಂಗಳಾಗಿವೆ ಚಿತ್ರಮಂದಿರಗಳು ಮುಚ್ಚಿ. ಪುನಃ ಯಾವಾಗ ಪ್ರಾರಂಭವಾಗುತ್ತದೆ ಎಂದು ಸದ್ಯಕ್ಕೆ ಸ್ಪಷ್ಟತೆ ಇಲ್ಲ. ಶುರುವಾದರೂ ಜನ ಭಯಬಿಟ್ಟು ಮುಂಚಿನಂತೆ ಚಿತ್ರಮಂದಿರಗಳಿಗೆ ಹೋಗಿ ಚಿತ್ರಗಳನ್ನು ನೋಡುತ್ತಾರಾ ಎಂದೂ ಗೊತ್ತಿಲ್ಲ. ಹಾಗಾದರೆ, ಮುಂದಿನ ದಿನಗಳಲ್ಲಿ ಚಿತ್ರಮಂದಿರಗಳ ಕಥೆ ಏನು ಎಂಬ ಪ್ರಶ್ನೆ ಸಹಜ.

ಕೆಲವು ದಿನಗಳ ಹಿಂದೆ, ಚಿತ್ರಮಂದಿರಗಳು ಎಂದೂ ಮುಚ್ಚುವುದಿಲ್ಲ ಎಂದು ಸತೀಶ್ ನೀನಾಸಂ ಟ್ವೀಟ್ ಮಾಡಿದ್ದರು. ಇಂಥಾ ಮಹಾಮಾರಿಗಳು ನೂರಾರು ಬಂದರೂ, ಅವನ್ನೆಲ್ಲಾ ಮೆಟ್ಟಿ ನಮ್ಮ ಚಿತ್ರಮಂದಿರಗಳು ಮತ್ತೆ ಬದುಕುತ್ತವೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದರು. ಈಗ ಅವರು ಚಿತ್ರಮಂದಿರಗಳ ಕುರಿತಾಗಿ, ‘ಕಳೆದು ಹೋಗುವ ಮುನ್ನ’ ಎಂಬ 10 ನಿಮಿಷದ ಕಿರುಚಿತ್ರವೊಂದನ್ನು ನಿರ್ವಿುಸಿದ್ದಾರೆ. ಈ ಕೆಲಸದಲ್ಲಿ ನಟ ಧನಂಜಯ್ ಮತ್ತು ನಿರ್ದೇಶಕ ವಿಜಯಪ್ರಸಾದ್ ಅವರಿಗೆ ಕೈಜೋಡಿಸಿದ್ದಾರೆ. ಈ ಕಿರುಚಿತ್ರವು ಸದ್ಯದಲ್ಲೇ ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಲಿದ್ದಾರೆ.

ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಸತೀಶ್, ‘ಪ್ರತಿಯೊಬ್ಬರಿಗೂ ಚಿತ್ರಮಂದಿರಗಳ ಜತೆಗೆ ಭಾವನಾತ್ಮಕ ಸಂಬಂಧ ಇದೆ. ಅದು ಬರೀ ಬಿಜಿನೆಸ್ ಅಲ್ಲ. ಇವತ್ತು ಚಿತ್ರಮಂದಿರಗಳು ಸಂಕಷ್ಟದಲ್ಲಿವೆ. ಆದರೆ, ಚಿತ್ರಮಂದಿರಗಳಿಗೆ ಯಾವತ್ತೂ ಸಾವಿಲ್ಲ. ಅವು ಖಂಡಿತಾ ಹೊಸ ಬದುಕು ಕಂಡುಕೊಳ್ಳುತ್ತವೆ. ಈ ನಿಟ್ಟಿನಲ್ಲಿ ಒಂದು ಕಿರುಚಿತ್ರ ಮಾಡಿದ್ದೇವೆ. ಚಿತ್ರಮಂದಿರಗಳು ಯಾಕೆ ಮುಖ್ಯ, ಅದರ ಜತೆಗಿನ ನಮ್ಮ ಭಾವನಾತ್ಮಕ ಸಂಬಂಧ, ಜನರ ಬದುಕನ್ನು ರೂಪಿಸುವಲ್ಲಿ ಅದರ ಪಾತ್ರ ... ಹೀಗೆ ಹಲವು ವಿಷಯಗಳ ಬಗ್ಗೆ ಈ ಕಿರುಚಿತ್ರ ಬೆಳಕು ಚೆಲ್ಲಲಿದೆ. ನಾನು ಮತ್ತು ವಿಜಯಪ್ರಸಾದ್ ಸೇರಿ ಈ ಕಾನ್ಸೆಪ್ಟ್ ಮಾಡಿದ್ದೇವೆ. ನಿರೂಪಣೆ ಸಾಹಿತ್ಯವನ್ನು ಅವರು ಬರೆದಿದ್ದಾರೆ. ನಾನು, ಧನಂಜಯ್ ಮುಂತಾದವರು ಅನಿಸಿಕೆಗಳನ್ನು ಹಂಚಿಕೊಂಡಿದ್ದೇವೆ. ನಮ್ಮ ಆಫೀಸ್, ಧನಂಜಯ್ ಮನೆ, ಹಲವು ಚಿತ್ರಮಂದಿರಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಪ್ರೇಕ್ಷಕರನ್ನು ಮಾತಾಡಿಸಿದ್ದೇವೆ. ಇವೆಲ್ಲವನ್ನೂ ಇಟ್ಟುಕೊಂಡು ಈ ಕಿರುಚಿತ್ರವನ್ನು ರೂಪಿಸಲಾಗಿದೆ’ ಎಂದು ವಿವರ ಕೊಡುತ್ತಾರೆ ಸತೀಶ್ ನೀನಾಸಂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net