ಸಿನಿವಾಣಿ

ಜಗ್ಗೇಶ್​ ಹೀರೋ ಆಗುವುದಕ್ಕೆ ಪ್ರೇರೇಪಿಸಿದ್ದು ಯಾರು ಗೊತ್ತಾ?

ಬೆಂಗಳೂರು: ಜಗ್ಗೇಶ್​ ಅವರು ಚಿತ್ರರಂಗದಲ್ಲಿ 40 ವರ್ಷಗಳನ್ನು ಪೂರೈಸಿದ ಖುಷಿಯಲ್ಲಿ ಮಂಗಳವಾರವಷ್ಟೇ ಮಾಧ್ಯಮದವರ ಜತೆಗೆ ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ನಾಲ್ಕು ದಶಕಗಳ ಪಯಣವನ್ನು ವಿವರಿಸಿದ್ದಾರೆ. ಪೋಷಕ ನಟನಾಗಿದ್ದವನು ಹೀರೋ ಆಗಿ, ಆ ನಂತರ ಹೇಗೆಲ್ಲಾ ನಡೆದು ಬಂದೆ ಎಂಬ ವಿಷಯವನ್ನು ಹೇಳಿಕೊಂಡಿದ್ದಾರೆ.

ಎಲ್ಲಾ ಸರಿ, ಪೋಷಕ ನಟರಾಗಿದ್ದ ಅವರು, ಹೀರೋ ಆಗಿದ್ದು ಹೇಗೆ ಮತ್ತು ಯಾಕೆ? ಈ ಪ್ರಶ್ನೆ ಬರದೇ ಇರದು. ಇಷ್ಟಕ್ಕೂ ಜಗ್ಗೇಶ್​ ಅವರು ಹೀರೋ ಆಗುವುದಕ್ಕೆ ಕಾರಣ ಯಾರು ಗೊತ್ತಾ? ಅವರನ್ನು ಹೀರೋ ಆಗುವುದಕ್ಕೆ ಪ್ರೇರೇಪಿಸಿದ್ದು ಯಾರು ಗೊತ್ತಾ? ಅಂಬರೀಶ್​ ಎಂದು ಅವರೇ ಹೇಳಿಕೊಂಡಿದ್ದಾರೆ.

90ರ ದಶಕದ ಆರಂಭದಲ್ಲಿ ಅಂಬರೀಶ್​ ಅವರ ಜತೆಗೆ ಒಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದರಂತೆ ಜಗ್ಗೇಶ್​. ನಂಜನಗೂಡಿನಲ್ಲಿ ಚಿತ್ರೀಕರಣ ನಡೆಯುವಾಗ, ಜನ ಜಗ್ಗೇಶ್​ ಅವರಿಗೆ ಜೈಕಾರ ಹಾಕುತ್ತಿದ್ದರಂತೆ. ಇದನ್ನು ನೋಡಿದ ಅಂಬರೀಶ್​, 'ನೀನಿನ್ನು ಹೀರೋ ಆಗು' ಎಂದು ಹೇಳಿದರಂತೆ.

'ಅಂಬರೀಶ್​ ಅವರು ಹೀರೋ ಆಗು ಎಂದಾಗ, ತಕ್ಷಣ ಬೇಡ ಗುರು ಎಂದೆ. ಆದರೆ, ಅವರು ಒತ್ತಾಯ ಮಾಡಿದರು. ಕೊನೆಗೆ 'ತರ್ಲೆ ನನ್ಮಗ' ಚಿತ್ರ ಮೂಲಕ ಹೀರೋ ಆದೆ. ಕಾರಣಾಂತರಗಳಿಂದ ಆ ಚಿತ್ರ ನಿಂತು ಹೋಯಿತು. ಆ ನಂತರ ನಮ್ಮ ಬಾವ ಶ್ರೀನಿವಾಸ್​ ಜತೆಗೆ ಸೇರಿ 'ಭಂಡ ನನ್ನ ಗಂಡ' ಮಾಡಿದೆ. ಆ ಚಿತ್ರದಲ್ಲಿ ಒಂದು ಅತಿಥಿ ಪಾತ್ರವಿತ್ತು. ಆ ಪಾತ್ರವನ್ನು ಅಂಬರೀಶ್​ ಅವರೇ ಮಾಡಿದರೆ ಚೆನ್ನಾಗಿರುತ್ತದೆ ಎಂದು ಹೋಗಿ ಕೇಳಿದೆ. ಅವರು ಒಪ್ಪಿ ಅತಿಥಿ ಪಾತ್ರ ಮಾಡಿದರು' ಎಂದು ನೆನಪಿಸಿಕೊಳ್ಳುತ್ತಾರೆ ಜಗ್ಗೇಶ್​.

ಇನ್ನು ಚಿತ್ರವನ್ನು ವಿತರಿಸುವುದಕ್ಕೆ ಯಾರೂ ಮುಂದೆ ಬರದಿದ್ದಾಗ, ಜಗ್ಗೇಶ್​ ಮತ್ತೆ ಹೋಗಿದ್ದು ಅಂಬರೀಶ್​ ಬಳಿಗಂತೆ. 'ರಾತ್ರಿ ಅವರ ಮನೆಗೆ ಹೋಗಿದ್ದೆ. ನಿಮ್ಮ ಮಾತು ಕೇಳಿ ಹೀರೋ ಆದೆ, ಈಗ ಚಿತ್ರ ಬಿಡುಗಡೆಯಾಗುತ್ತಿಲ್ಲ ಎಂದೆ. ಮುಂದೆ ಏನ್ಮಾಡಲಿ ಎಂದೆ. ಆಯ್ತು ಹೋಗು ಅಂತ ಕಳುಹಿಸಿದರು. ಬೆಳಿಗ್ಗೆ ಮಾಣಿಕ್​ಚಂದ್​ ಅವರಿಂದ ಫೋನ್​ ಬಂತು. ಅವರು ಚಿತ್ರ ಬಿಡುಗಡೆಯಾಗುವುದಕ್ಕೆ ಮುಂದೆ ಬಂದರು. ಅವರೇ ಐದು ಲಕ್ಷ ಹಾಕಿ ಚಿತ್ರ ಬಿಡುಗಡೆ ಮಾಡಿದರು. ಆ ಚಿತ್ರ ಆಗಿನ ಕಾಲಕ್ಕೆ ಒಂದು ಕೋಟಿ ಬ್ಯುಸಿನೆಸ್​ ಮಾಡಿತ್ತು. ಮಾಣಿಕ್​ಚಂದ್​ 20 ಲಕ್ಷ ಕಮಿಷನ್​ ತೆಗೆದುಕೊಂಡರು. ಆ ಮಟ್ಟಿಗೆ ಚಿತ್ರ ಹಿಟ್​ ಆಗಿತ್ತು. ಹೀಗೆ ಕೈಹಿಡಿದು ನನ್ನನ್ನು ಹೀರೋ ಮಾಡಿಸಿದರು ಅಂಬರೀಶ್​' ಎನ್ನುತ್ತಾರೆ ಜಗ್ಗೇಶ್​.