ಬೆಂಗಳೂರು: ಕೆಲ ವರ್ಷಗಳ ಹಿಂದೆ ನಟ ಅಂಬರೀಷ್ ಮಾತನಾಡುತ್ತಿದ್ದ ವೇಳೆ ‘ಯಾವೋ ಇವೆಲ್ಲಾ..’ ಅಂತೆಲ್ಲ ಹೇಳಿದ್ದರು. ಆ ವಿಡಿಯೋ ಈಗಲೂ ಸಹ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಈಗ ಅಂಬರೀಷ್ ಅವರ ಆ ಮಾತೇ ಸಿನಿಮಾ ಶೀರ್ಷಿಕೆಯಾಗಿದೆ.
ಹೌದು, ‘ಯಾವೋ ಇವೆಲ್ಲಾ’ ಚಿತ್ರಕ್ಕೆ ಹರೀಶ್ ಸಾ.ರಾ. ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಒಂಬತ್ತು ವರ್ಷಗಳಿಂದ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿ ಅನುಭವ ಪಡೆದಿರುವ ಹರೀಶ್, ನಾಯಕನ ಪಾತ್ರಕ್ಕೆ ಕೆಲವು ನಟರನ್ನು ಸಂಪರ್ಕಿಸಿದ್ದರಂತೆ. ಆದರೆ, ಸರಿಯಾಗಿ ಸ್ಪಂದಿಸದ ಕಾರಣ ಅವರೇ ನಾಯಕನಾಗಿ ನಟಿಸುತ್ತಿದ್ದಾರೆ. ಹಣದ ಮುಂದೆ ಸಂಬಂಧಗಳು ಹೇಗೆ ಹಾಳಾಗುತ್ತವೆ? ಎಂಬುದರ ಸುತ್ತ ಚಿತ್ರದ ಕಥೆ ಸುತ್ತುತ್ತದೆ. ಕೆಲವು ಕಿರುಚಿತ್ರಗಳಲ್ಲಿ ನಟಿಸಿರುವ ಶಿರಸಿಯ ಶಿಲ್ಪಾ ನಾಯಕ್ ಹರೀಶ್‌ಗೆ ನಾಯಕಿಯಾಗಿದ್ದಾರೆ. ಉಳಿದಂತೆ ಜಗನ್ ಸೇಠ್, ಮೌನಿಕಾ ಪೂಜಾರಿ, ಕಾವ್ಯಾ ಭಾರದ್ವಾಜ್, ಪಾಲಾಕ್ಷ, ಕೀರ್ತಿ ಪ್ರಮುಖ ತಾರಾಗಣದಲ್ಲಿದ್ದಾರೆ.
ಬೆಂಗಳೂರು, ಹೆಸರಘಟ್ಟ, ಕನಕಪುರ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದ್ದು, ಸದ್ಯ ಈ ಸಿನಿಮಾ ಸೆನ್ಸಾರ್ ಹಂತದಲ್ಲಿದೆ. ಚಿತ್ರಕ್ಕೆ ಹರ್ಷ ಕಾಗೋಡ್ ಸಂಗೀತ, ಗಿರೀಶ್ ಶಿರಗನಹಳ್ಳಿ ಛಾಯಾಗ್ರಹಣ, ಸುನಯ್ ಸಂಕಲನವಿರಲಿದೆ.