VIDEO| ನಾರಿ ಶಕ್ತಿ ವಂದನಾ ಅಧಿನಿಯಮವನ್ನು ಹಾಡಿಹೊಗಳಿದ ಬಾಲಿವುಡ್ ನಟಿಮಣಿಯರು

bollywood actress
Published on

ನವದೆಹಲಿ: ಕೇಂದ್ರ ಸರ್ಕಾರ ಮಂಡಿಸಿರುವ ನಾರಿ ಶಕ್ತಿ ವಂದನಾ ಅಧಿನಿಯಮ (ಮಹಿಳಾ ಮೀಸಲಾತಿ ಮಸೂದೆ)vನ್ನು ಶ್ಲಾಘಿಸಿರುವ ಬಾಲಿವುಡ್​ ನಟಿಯರಾದ ತಮನ್ನಾ ಭಾಟಿಯಾ, ದಿವ್ಯ ದತ್ತ, ಶೆಹನಾಜ್​ ಗಿಲ್​ ಇದೊಂದು ಅತ್ಯುತಮ್ಮ ನಡೆ. ಮಹಿಳೆಯರು ರಾಜಕೀಯಕ್ಕೆ ಬರಲು ಸ್ಪೂರ್ತಿ ನೀಡುತ್ತದೆ ಎಂದಿದ್ದಾರೆ.

ನೂತನ ಸಂಸತ್​ ಭವನಕ್ಕೆ ಭೇಟಿ ನೀಡಿದ ಮೂವರು ನಟಿಯರು ಕೇಂದ್ರ ಸರ್ಕಾರದ ಕ್ರಮವನ್ನು ಹಾಡಿ ಹೊಗಳಿಸಿದ್ದಾರೆ. ಇವರ ಜೊತೆಗೆ ಬಾಲಿವುಡ್​ನ ಹಲವು ನಟಿಯರು ಮಸೂದೆಯನ್ನು ಸ್ವಾಗತಿಸಿದ್ದಾರೆ. ಇವರ ಜೊತೆಗೆ ನಟಿಯರಾದ ಖುಷ್ಬೂ ಸುಂದರ್​, ಹರ್​ನಾಜ್​ ಕೌರ್​ ಸಂಧು, ಸ್ಮೃತಿ ಕಲ್ರಾ, ಸೋನಾಲ್​ ಮಾಥುರ್​, ಕೀರ್ತಿ ಕುಲ್ಹರಿ ನೂತನ ಸಂಸತ್​ ಭವನಕ್ಕೆ ಭೇಟಿ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ನಟಿ ತಮನ್ನಾ ಈ ಮಸೂದೆ ಸಾಮಾನ್ಯ ಜನರಿಗೆ ರಾಜಕೀಯಕ್ಕೆ ಬರಲು ಹೆಚ್ಚು ಉತ್ತೇಜನ ನೀಡುತ್ತದೆ. ಮಹಿಳೆಯರು ರಾಜಕೀಯಕ್ಕೆ ಬರುತ್ತೇವೆ ಎಂದರೆ ಪ್ರೋತ್ಸಾಹಿಸುವವರಿಗಿಂತ ಮೂಗು ಮುರಿಯುವವರೇ ಹೆಚ್ಚು. ಸರ್ಕಾರ ಮಹಿಳೆಯರಿಗೆ ಮೀಸಲಾತಿ ಜಾರಿ ಮಾಡಲು ಮುಂದಾಗಿರುವುದನ್ನು ಕಂಡಾಗ ರಾಜಕೀಯಕ್ಕೆ ಬರಲು ಸ್ಪೂರ್ತಿಯಾಗುತ್ತದೆ ಎಂದು ಹೇಳಿದ್ದಾರೆ.

ನಟಿ ದಿವ್ಯ ದತ್ತ ಮಾತನಾಡಿ ಕೇಂದ್ರ ಸರ್ಕಾರ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆ ಒಂದು ದೊಡ್ಡ ಉಪಕ್ರಮವಾಗಿದೆ. ಇದು ನಿಜವಾಗಿಯೂ ಉತ್ತಮ ಕ್ರಮವಾಗಿದ್ದು, ಮಹಿಳೆಯರನ್ನು ಈ ಮಸೂದೆ ಮೂಲಕ ಮುಂದಕ್ಕೆ ತರಲಾಗುತ್ತಿದೆ. ಸಂಸತ್​ ಅಧಿವೇಶನದಲ್ಲಿ ಭಾಗಿಯಾಗಿರುವುದು ಒಂದು ವಿಶೇಷ ಅನುಭವ ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ನಟಿ ಶಹನಾಜ್​ ಗಿಲ್​ ಮಾತನಾಡಿ ಸರ್ಕಾರದ ವತಿಯಿಂದ ಇದೊಂದು ಅತ್ಯದ್ಭುತ ನಡೆಯಾಗಿದೆ. ನಮಗೆ ಹಕ್ಕು ಮತ್ತು ಸಮಾನತೆಯನ್ನು ನೀಡಿದರೆ ಪೋಷಕರು ಹೆಣ್ಣುಮಕ್ಕಳನ್ನು ಬೆಂಬಲಿಸಲು ಶುರು ಮಾಡುತ್ತಾರೆ. ನಾನು ಒಂದು ಪುಟ್ಟ ಹಳ್ಳಿಯಿಂದ ಬಂದಿದ್ದು, ಅಲ್ಲಿ ಹೆಣ್ಣುಮಕ್ಕಳಿಗೆ ಮದುವೆ ಮಾಡಿದರೆ ಸೆಟಲ್​ ಆಗುತ್ತಾರೆ ಎಂಬ ಭಾವನೆಯಿದೆ. ಹೆಣ್ಣು ಮತ್ತು ಗಂಡು ಇಬ್ಬರನ್ನು ಸಮಾನವಾಗಿ ನೋಡಿದರೆ ದೇಶದಲ್ಲಿ ಬಹಳಷ್ಟು ಬದಲಾವಣೆಯಾಗುತ್ತದೆ ಎಂದು ನಟಿ ಶೆಹನಾಜ್​ ಗಿಲ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net