ಬೆಂಗಳೂರು: 'ಟಿಕ್ಟಾಕ್' ಇದ್ದಾಗ ರೀಲ್ಸ್ ಮಾಡಿ, 'ಟಿಕ್ಟಾಕ್ ಸ್ಟಾರ್' ಎಂದೇ ಜನಪ್ರಿಯರಾಗಿದ್ದ ಅಲ್ಲು ರಘು, ಇದೀಗ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಮೊದಲ ಪ್ರಯತ್ನವಾಗಿ ‘ಸಾವಿರುಪಾಯಿಗೆ ಸ್ವರ್ಗ’ ಎಂಬ ಕಿರುಚಿತ್ರವನ್ನು ಸದ್ದಿಲ್ಲದೆ ನಿರ್ದೇಶನ ಮಾಡಿದ್ದಾರೆ.
‘ಸಾವಿರುಪಾಯಿಗೆ ಸ್ವರ್ಗ’ ಚಿತ್ರಕ್ಕೆ ಅಲ್ಲು ರಘು ಕಥೆ ಬರೆದು ನಿರ್ದೇಶನ ಮಾಡಿದ್ದು, ಶಿವಪುತ್ರ, ವರುಣ್ ಆರಾಧ್ಯ, ರಶ್ಮಿತ ಗೌಡ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಿರುಚಿತ್ರಕ್ಕೆ ರಾಘವ್ ಹಾಗೂ ಅಭಿನಂದನ್ ಅವರ ಸಂಗೀತ ಮತ್ತು ನವೀನ್ ಕುಮಾರ್ ಚಲ್ಲ ಛಾಯಾಗ್ರಹಣವಿದೆ.
ಈ ಕಿರುಚಿತ್ರದ ಬಗ್ಗೆ ಮಾತನಾಡುವ ರಘು, 'ನನಗೆ ಚಿಕ್ಕ ವಯಸ್ಸಿನಿಂದಲೂ ಸಿನಿಮಾಗಳು ತುಂಬಾ ಇಷ್ಟ. ಉಪೇಂದ್ರ, ಕಾಶಿನಾಥ್ ನನಗೆ ಸ್ಪೂರ್ತಿ. ಆ ಸ್ಫೂರ್ತಿಯಿಂದಲೇ ಒಂದು ಪ್ರಯತ್ನ ಮಾಡಿದ್ದೇನೆ' ಎನ್ನುತ್ತಾರೆ.
ರಘು ಮೊದಲು ಒಂದು ಸಿನಿಮಾ ಮಾಡುವ ಉದ್ದೇಶವಿತ್ತಂತೆ. ಆದರೆ, ಅದು ಅಷ್ಟು ಸುಲಭವಲ್ಲ, ಮೊದಲು ಒಂದು ಕಿರುಚಿತ್ರ ಮಾಡಿ ಅನುಭವ ಪಡೆದುಕೋ ಎಂದು ಸಲಹೆ ನೀಡಿದವರು ಸಂಕಲನಕಾರ ಕೃಷ್ಣ ಸುಜನ್. ಅವರು ಮತ್ತು ರಘು ಬಹಳ ವರ್ಷಗಳ ಸ್ನೇಹಿತರಂತೆ. ಆ ಸಲಹೆ ಮೇರೆಗೆ ರಘು ಈ ಕಿರುಚಿತ್ರ ಮಾಡಿದ್ದಾರೆ.