ಮುಂಬೈ: ಯಾವಾಗ ಆಲಿಯಾ ಭಟ್ಗೆ ಹೆಣ್ಣು ಮಗು ಆಯಿತು ಎಂಬ ಸುದ್ದಿ ಹೊರಬಿದ್ದಿತೋ, ಬಾಲಿವುಡ್ನ ಬಹಳಷ್ಟು ಸೆಲೆಬ್ರಿಟಿಗಳು ಆಸ್ಪತ್ರೆಗೆ ದೌಡಾಯಿಸಿದರು. ಮಗುವನ್ನು ಕಣ್ತುಂಬಿಕೊಳ್ಳಲು ಮುಂದಾದರು. ಆದರೆ, ರಣಬೀರ್ ಮತ್ತು ಆಲಿಯಾ ಮಾತ್ರ ಎಲ್ಲರಿಗೂ ತಮ್ಮ ಮಗುವನ್ನು ತೋರಿಸಿಲ್ಲ. ಆ ಮಗುವನ್ನು ಎತ್ತಿಕೊಳ್ಳುವುದಕ್ಕೆ ಒಪ್ಪಲಿಲ್ಲ. ಯಾಕೆ ಗೊತ್ತಾ?
ರಣಬೀರ್ ಮತ್ತು ಆಲಿಯಾಗೆ ತಮ್ಮ ಮಗಳ ಫೋಟೋಗಳನ್ನು ಕ್ಲಿಕ್ಕಿಸುವುದು ಇಷ್ಟವಿಲ್ಲವಂತೆ. ಮಗು ನೋಡಲು ಬರುವ ಬಹಳಷ್ಟು ಮಂದಿ ಅದರ ಫೋಟೋ ಕ್ಲಿಕ್ಕಿಸುತ್ತಾರೆ ಮತ್ತು ಅದನ್ನು ಇಂಟರ್ನೆಟ್ನಲ್ಲಿ ಪೋಸ್ಟ್ ಮಾಡುತ್ತಾರೆ. ಇದು ರಣಬೀರ್ ಮತ್ತು ಆಲಿಯಾಗೆ ಸುತಾರಾಂ ಇಷ್ಟವಿಲ್ಲ. ಅದೇ ಕಾರಣಕ್ಕೆ ಬಹಳಷ್ಟು ಜನರನ್ನು ಅವರ ಕುಟುಂಬ ದೂರ ಇಟ್ಟಿದೆ ಎಂದು ಹೇಳಲಾಗುತ್ತಿದೆ.
ಇದರ ಜತೆಗೆ, ಮಕ್ಕಳಿಗೆ ಬಹಳ ಬೇಗ ಸೋಂಕು ಹರಡುವ ಭಯ ಇರುವುದರಿಂದ ಅದೂ ಒಂದು ಕಾರಣದಿಂದ ಯಾರಿಗೂ ತೋರಿಸುತ್ತಿಲ್ಲವಂತೆ. ಮೊದಲೇ ಕೋವಿಡ್ ನಂತರದ ಕಾಲಘಟ್ಟ ಇದು. ಯಾರ್ಯಾರಿಗೆ ಏನೇನು ಸಮಸ್ಯೆಯೋ ಹೇಳುವುದು ಕಷ್ಟ. ಹೀಗಿರುವಾಗ, ಸುಮ್ಮನೆ ರಿಸ್ಕ್ ಏತಕೆ ಎಂಬ ಕಾರಣಕ್ಕೆ ಮಗುವನ್ನು ದೂರವೇ ಇಡಲಾಗಿದೆಯಂತೆ.
ಆಲಿಯಾಗೆ ಮಗುವಾದ ಸಂದರ್ಭದಲ್ಲಿ ಕರಣ್ ಜೋಹರ್ ಮುಂಬೈನಲ್ಲಿ ಇರಲಿಲ್ಲ. ಕೆಲಸದ ನಿಮಿತ್ತ ಲಂಡನ್ಗೆ ಹೋದರಂತೆ. ವಾಪಸ್ಸು ಬಂದವರಿಗೆ ನೇರವಾಗಿ ಆಸ್ಪತ್ರೆಗೆ ಹೋಗಲಿಲ್ಲ. ಬದಲಿಗೆ ಕೋವಿಡ್ ಟೆಸ್ಟ್ ಮಾಡಿಸಿ, ತಮಗೇನೂ ಸಮಸ್ಯೆ ಇಲ್ಲ ಎಂದು ಗೊತ್ತು ಮಾಡಿಕೊಂಡೇ ಆಸ್ಪತ್ರೆಗೆ ಹೋದರಂತೆ.
ಈಗ ಆಲಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋಗಿದ್ದಾರೆ. ಹಾಗಂತ ನಿಯಮಗಳನ್ನು ಸಡಿಸಿಲ್ಲವಂತೆ. ಆಸ್ಪತ್ರೆಯಲ್ಲಿ ಹೇಗಿತ್ತೋ, ಮನೆಯಲ್ಲೂ ಅದೇ ನಿಯಮಗಳನ್ನು ಪಾಲಿಸುತ್ತಿದ್ದಾರೆ, ಅಷ್ಟು ಸುಲಭಕ್ಕೆ ಯಾರನ್ನೂ ಮಗು ನೋಡುವುದಕ್ಕೆ ಬಿಡುತ್ತಿಲ್ಲ ಎಂದು ಹೇಳಲಾಗುತ್ತಿದೆ.