ಸಿನಿವಾಣಿ

ಕಿಚ್ಚನ ‘ಫ್ಯಾಂಟಮ್​’ ಚಿತ್ರಕ್ಕೆ ಮತ್ತೊಬ್ಬ ಪ್ರೊಡ್ಯೂಸರ್ ಬಂದ್ರು

ಬೆಂಗಳೂರು: ಕಿಚ್ಚ ಸುದೀಪ್​ ನಾಯಕನಾಗಿ ನಟಿಸುತ್ತಿರುವ ಫ್ಯಾಂಟಮ್​ ಅದ್ದೂರಿ ವೆಚ್ಚದಲ್ಲಿ ಸಿದ್ಧವಾಗುತ್ತಿದೆ. ಬಹುತೇಕ ಸೆಟ್​ನಲ್ಲಿಯೇ ಈ ಸಿನಿಮಾ ನಿರ್ಮಾಣವಾಗುತ್ತಿರುವುದರಿಂದ ಮಿನಿ ಅರಣ್ಯವನ್ನೇ ಹೈದರಾಬಾದ್​ನ ಅನ್ನಪೂರ್ಣ ಮತ್ತು ರಾಮೋಜಿ ರಾವ್​ ಸ್ಟುಡಿಯೋದಲ್ಲಿ ನಿರ್ಮಿಸಲಾಗಿದೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಮತ್ತು ಸಣ್ಣ ಪುಟ್ಟ ಸ್ನೀಕ್ ಪಿಕ್ ಮೂಲಕವೇ ಹೆಚ್ಚು ಗಮನ ಸೆಳೆಯುತ್ತಿದೆ. ಇದೀಗ ಚಿತ್ರದಲ್ಲಿ ಮಹತ್ತರವಾದ ಬದಲಾವಣೆಯೊಂದನ್ನು ತಂಡ ಮಾಡಿಕೊಂಡಿದೆ.

ಅಂದರೆ, ಚಿತ್ರಕ್ಕೆ ಮತ್ತೊಬ್ಬ ನಿರ್ಮಾಪಕರು ಎಂಟ್ರಿಕೊಟ್ಟಿದ್ದಾರೆ. ಈಗಾಗಲೇ ಜಾಕ್ ಮಂಜು ಈ ಸಿನಿಮಾಕ್ಕೆ ನಿರ್ಮಾಪಕರು. ಇದೀಗ ಕಾಲಿವುಡ್​ನ ಖ್ಯಾತ ನಿರ್ಮಾಪಕ ಅಲಂಕಾರ್​ ಪಾಂಡಿಯನ್ ಮತ್ತೆ ಕನ್ನಡಕ್ಕೆ ಆಗಮಿಸುತ್ತಿದ್ದಾರೆ. ಫ್ಯಾಂಟಮ್​ ಚಿತ್ರಕ್ಕೆ ಸಹ ನಿರ್ಮಾಪಕರಾಗುತ್ತಿದ್ದಾರೆ.

ಹಾಗಂತ ಕನ್ನಡದಲ್ಲಿ ಇದು ಇವರ ಮೊದಲ ಎಂಟ್ರಿ ಅಲ್ಲ. ಈ ಮೊದಲು ಪಿ. ಸಿ ಶೇಖರ್ ನಿರ್ದೇಶನದ ಟೆರರಿಸ್ಟ್ ಚಿತ್ರಕ್ಕೆ ಅಲಂಕಾರ್ ಪಾಂಡಿಯನ್ ಬಂಡವಾಳ ಹೂಡಿದ್ದರು. ಸದ್ಯ ಪ್ರಜ್ವಲ್ ದೇವರಾಜ್ ಜತೆ ಇನ್ನೂ ಶೀರ್ಷಿಕೆ ಅಂತಿಮವಾಗದ ಸಿನಿಮಾಕ್ಕೂ ಪಾಂಡಿಯನ್​ ನಿರ್ಮಾಪಕರು.

ಅನೂಪ್​ ಭಂಡಾರಿ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಫ್ಯಾಂಟಮ್​ ಚಿತ್ರದಲ್ಲಿ ಕಿಚ್ಚ ಸುದೀಪ್​ ವಿಕ್ರಾಂತ್​ ರೋಣ ಪಾತ್ರದಲ್ಲಿ ಖಡಕ್​ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಅವರ ಆ ಗತ್ತು ಗಮ್ಮತ್ತು ಹೇಗಿರಲಿದೆ ಎಂಬುದಕ್ಕೆ ಸಣ್ಣ ಸಣ್ಣ ದೃಶ್ಯಗಳ ಮೂಲಕ ಬಹಿರಂಗವಾಗಿದೆ. ಇನ್ನೇನು ಶೀಘ್ರದಲ್ಲಿ ಚಿತ್ರದ ಮತ್ತಷ್ಟು ಅಪ್​ಡೇಟ್ ಮಾಹಿತಿ ಹೊರಬೀಳಲಿದೆ.