ಸಿನಿವಾಣಿ

ಅಕ್ಷಯ್ ಕುಮಾರ್ ‘ಬೆಲ್​ಬಾಟಂ’ ಸಿನಿಮಾ ಚಿತ್ರಮಂದಿರಕ್ಕೆ ಬರಲು ರೆಡಿ; ಇಲ್ಲಿದೆ ನೂತನ ಬಿಡುಗಡೆ ದಿನಾಂಕ

ಮುಂಬೈ: ಲಾಕ್​ಡೌನ್​ ಮುಗಿದು, ಚಿತ್ರೀಕರಣ ಮಾಡುವುದಕ್ಕೆ ಅನುಮತಿ ಸಿಗುತ್ತಿದ್ದಂತೆಯೇ, ಅಕ್ಷಯ್​ ಕುಮಾರ್​ ದೂರದ ಸ್ಕಾಟ್​ಲ್ಯಾಂಡ್​ಗೆ ಹೋಗಿ ಸದ್ದಿಲ್ಲದೆ ‘ಬೆಲ್​ ಬಾಟಮ್​’ ಚಿತ್ರದ ಚಿತ್ರೀಕರಣವನ್ನು ಮುಗಿಸಿ ಬಂದಿದ್ದರು. ಅಷ್ಟೇ ಅಲ್ಲ, ಚಿತ್ರದ ಬಿಡುಗಡೆಯ ದಿನಾಂಕವನ್ನು ಸಹ ಘೋಷಿಸಿದ್ದರು. ಎಲ್ಲ ಅಂದುಕೊಂಡಂತೆ ಆಗಿದ್ದರೆ. ಏ.02ರಂದು ಸಿನಿಮಾ ಬಿಡುಗಡೆ ಆಗಬೇಕಿತ್ತು. ಲಾಕ್​ಡೌನ್​ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಲಿಲ್ಲ. ಇದೀಗ ಹೊಸ ದಿನಾಂಕ ಘೋಷಣೆ ಆಗಿದೆ.


ಹೌದು, ‘ಬೆಲ್​ ಬಾಟಮ್​’ ಚಿತ್ರ ಜುಲೈ 27ಕ್ಕೆ ಬಿಡುಗಡೆ ಆಗುವುದು ಅಧಿಕೃತವಾಗಿದೆ. ಏಪ್ರಿಲ್​ 02ರಂದು ಬಿಡುಗಡೆಯಾಗಬೇಕಿದ್ದ ಚಿತ್ರವು, ಇದೀಗ ಮೂರು ತಿಂಗಳ ಬಳಿ ಚಿತ್ರಮಂದಿರಗಳಲ್ಲಿಯೇ ಬಿಡುಗಡೆ ಆಗಲಿದೆ. ಈ ಮೊದಲು ಬೆಲ್​ಬಾಟಂ ಸಿನಿಮಾ ಚಿತ್ರಮಂದಿರ ಬದಲು ಒಟಿಟಿಯಲ್ಲಿ ಬಿಡುಗಡೆ ಆಗಲಿದೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಸ್ವತಃ ಅಕ್ಷಯ್ ಘೋಷಣೆ ಮಾಡಿದ್ದು, ಜುಲೈ 27ಕ್ಕೆ ಚಿತ್ರಮಂದಿರಗಳಲ್ಲಿಯೇ ಚಿತ್ರ ತೆರೆಗೆ ಎಂದಿದ್ದಾರೆ.

‘ಬೆಲ್​ ಬಾಟಮ್​’ ಚಿತ್ರವನ್ನು ರಂಜಿತ್​ ತಿವಾರಿ ಎನ್ನುವವರು ನಿರ್ದೇಶಿಸಿದ್ದು, ಪೂಜಾ ಎಂಟರ್​ಟೈನ್​ಮೆಂಟ್​ ಸಂಸ್ಥೆಯಡಿ ವಾಶು ಭಾಗ್ನಾನಿ ಮತ್ತು ಜಾಕಿ ಭಾಗ್ನಾನಿ ಚಿತ್ರವನ್ನು ನಿರ್ಮಿಸಿದ್ದಾರೆ. ಇದೊಂದು ರೆಟ್ರೋ ಥ್ರಿಲ್ಲರ್​ ಆಗಿದ್ದು ಅಕ್ಷಯ್​ ಕುಮಾರ್ ಜತೆಗೆ ವಾಣಿ ಕಪೂರ್​, ಲಾರಾ ದತ್ತ, ಹ್ಯೂಮಾ ಖುರೇಷಿ ಸೇರಿದಂತೆ ಹಲವರು ನಟಿಸಿದ್ದಾರೆ.