ನವದೆಹಲಿ: ಬಾಲಿವುಡ್‌ನ ಜನಪ್ರಿಯ ನಟಿ ಐಶ್ವರ್ಯಾ ರೈ ಬಚ್ಚನ್ ವೈಯಕ್ತಿಕ ವಿಚಾರಕ್ಕಾಗಿ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದಾರೆ. ಪತಿ ಅಭಿಷೇಕ್ ಬಚ್ಚನ್ ಜತೆ ಭಿನ್ನಾಭಿಪ್ರಾಯ ಹೊಂದಿದ್ದು, ಡಿವೋರ್ಸ್ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ನಿತ್ಯವೂ ಹರಿದಾಡುತ್ತಲೇ ಇದೆ. ಆದರೆ, ಈವರೆಗೂ ಅಭಿಷೇಕ್ ಆಗಲಿ, ಐಶ್ವರ್ಯಾ ಆಗಲಿ ಈ ಬಗ್ಗೆ ಅಧಿಕೃತವಾಗಿ ಮಾತನಾಡಿಲ್ಲ. ಆದರೂ ಒಂದಲ್ಲ ಒಂದು ವದಂತಿ ಹರಿದಾಡುತ್ತಲೇ ಇರುತ್ತದೆ. ಇದರ ನಡುವೆ ಐಶ್ವರ್ಯಾ ರೈಗೆ ಸಂಬಂಧಿಸಿದ ಹಳೆಯ ಸುದ್ದಿಯೊಂದು ವೈರಲ್ ಆಗುತ್ತಿದೆ.
ಐಶ್ವರ್ಯಾ ಅವರು ಸಿನಿಮಾಗೆ ಎಂಟ್ರಿಯಾಗುವ ಮುನ್ನ ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಎಂಬುದು ಎಲ್ಲರಿಗೂ ತಿಳಿದೇ ಇದೆ. 1994 ರಲ್ಲಿ ವಿಶ್ವ ಸುಂದರಿ ಪಟ್ಟವನ್ನು ಸಹ ಅಲಂಕರಿಸಿದರು. ನಟಿಯಾಗುವ ಮುನ್ನ ಪೂರ್ಣ ಪ್ರಮಾಣದ ಮಾಡೆಲ್ ಆಗಿದ್ದರು. ಈ ವೇಳೆ ಮಾಡೆಲಿಂಗ್ ಶೂಟಿಂಗ್ನಲ್ಲಿ ಐಶ್ವರ್ಯಾ ಎಷ್ಟು ಹಣ ಸಂಪಾದನೆ ಮಾಡುತ್ತಿದ್ದರು ಗೊತ್ತಾ? 1992ರಲ್ಲಿ ಐಶ್ವರ್ಯಾ ಪಡೆಯುತ್ತಿದ್ದ ಸಂಬಳದ ರಶೀದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೃಪಾ ಕ್ರಿಯೆಷನ್ಸ್ಗೆ ನೀಡಿದ ಜಾಹೀರಾತಿಗೆ ಐಶ್ವರ್ಯಾ 1500 ರೂಪಾಯಿ ಪಡೆದಿದ್ದರು. ಇದಕ್ಕೆ ಸಂಬಂಧಿಸಿದ 1992, ಮೇ 23 ದಿನಾಂಕವುಳ್ಳ ರಶೀದಿ ವೈರಲ್ ಆಗಿದೆ. 1994ರಲ್ಲಿ ವಿಶ್ವ ಸುಂದರಿ ಪಟ್ಟ ಅಲಂಕರಿಸುವುದಕ್ಕೂ ಎರಡು ವರ್ಷಗಳ ಹಿಂದೆ ಅಂದರೆ 1992ರಲ್ಲಿ ಮಾಡೆಲಿಂಗ್ ಶೂಟ್ಗೆ ಐಶ್ವರ್ಯಾ 1500 ರೂ. ಪಡೆಯುತ್ತಿದ್ದರು. ಇದು ಮ್ಯಾಗಜಿನ್ಗಾಗಿ ಮಾಡಿದ ಶೂಟ್ ಎನ್ನಲಾಗಿದೆ.
ರೆಡ್ಡಿಟ್ ಬಳಕೆದಾರರು ಹಂಚಿಕೊಂಡ ಬಿಲ್‌ನ ಪ್ರತಿಯಲ್ಲಿ ಆ ಸಮಯದಲ್ಲಿ ಸುಮಾರು 18 ವರ್ಷ ವಯಸ್ಸಿನ ಐಶ್ವರ್ಯಾ ಅವರು ಮ್ಯಾಗಜೀನ್ ಕ್ಯಾಟಲಾಗ್ ಶೂಟ್‌ಗಾಗಿ ಕೃಪಾ ಕ್ರಿಯೇಷನ್ಸ್ ಎಂಬ ಸಂಸ್ಥೆಗೆ ಮಾಡೆಲ್ ಆಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದರು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಬಿಲ್‌ನ ಕೆಳಭಾಗದಲ್ಲಿ ಆಕೆಯ ಸಹಿ ಕೂಡ ಇದೆ. ಮುಂಬೈನಲ್ಲಿ ಈ ಒಪ್ಪಂದಕ್ಕೆ ಸಹಿ ಮಾಡಲಾಗಿತ್ತು.
ವಿಮಲ್ ಉಪಾಧ್ಯಾಯ ಎಂಬ ಟ್ವಿಟರ್ ಬಳಕೆದಾರ, ಮ್ಯಾಗಜೀನ್ ಶೂಟ್‌ನ ಫೋಟೋಗಳನ್ನು ಈ ಹಿಂದೆ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಇದು ಕ್ಯಾಟಲಾಗ್ ಫೋಟೋಗಳು ಮತ್ತು ಮ್ಯಾಗಜೀನ್ ಕವರ್ ಒಳಗೊಂಡಿದೆ.
ಅಂದು ಕೇವಲ 1500 ರೂ. ಪಡೆಯುತ್ತಿದ್ದ ಐಶ್ವರ್ಯಾ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಬಳಿಕ ಉತ್ತಮ ಯಶಸ್ಸು ಗಳಿಸಿದರು. ಒಂದು ಕಾಲದಲ್ಲಿ ಬಾಲಿವುಡ್‌ನ ಸ್ಟಾರ್ ನಟಿಯರಲ್ಲಿ ಒಬ್ಬರಾಗಿದ್ದ ಐಶ್ವರ್ಯಾ ಉತ್ತಮ ಗಳಿಕೆಯೊಂದಿಗೆ ಇಂದು ಕೋಟ್ಯಂತರ ರೂ. ಆಸ್ತಿಯ ಒಡತಿಯಾಗಿದ್ದಾರೆ. ಅಮಿತಾಭ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ ವರಿಸಿರುವ ಐಶ್ವರ್ಯಾಗೆ ಓರ್ವ ಹೆಣ್ಣು ಮಗಳಿದ್ದಾಳೆ. ಆದರೆ, ಇದೀಗ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನಲಾಗಿದೆ. ಇದಕ್ಕೆ ಪುಷ್ಠಿ ನೀಡುವಂತಹ ಸಾಕಷ್ಟು ಘಟನೆಗಳು ಇತ್ತೀಚೆಗೆ ನಡೆದಿವೆ. (ಏಜೆನ್ಸೀಸ್)