ಮುಂಬೈ: ಸಲ್ಮಾನ್ ಖಾನ್ ಅಭಿನಯದ `ರಾಧೇ' ಚಿತ್ರವು ಮೇ ೧೩ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರವು ಕಳೆದ ವರ್ಷ ಮೇನಲ್ಲಿ ಬಿಡುಗಡೆಯಾಗಬೇಕಿತ್ತು. ಕರೊನಾದಿಂದ ಒಂದು ವರ್ಷ ತಡವಾಗಿರುವ ಚಿತ್ರ, ಇದೀಗ ಮೇ ೧೩ರಂದು ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಪ್ರಾರಂಭವಾಗಿದ್ದು, ಚಿತ್ರಮಂದಿರಗಳಲ್ಲಿ ಸೀಟುಗಳನ್ನು ಕಾಯ್ದಿರಿಸಬಹುದಾಗಿದೆ.
ಭಾರತದಲ್ಲಿ ಕರೊನಾ ಎರಡನೇ ಅಲೆ ತೀವ್ರಗತಿಯಲ್ಲಿದ್ದು, ಬಹಳಷ್ಟು ರಾಜ್ಯಗಳಲ್ಲಿ ಲಾಕ್‌ಡೌನ್ ಅಥವಾ ಜನತಾ ಕರ್ಫ್ಯೂಗಳನ್ನು ಘೋಷಿಸಲಾಗಿದೆ. ದೇಶದ ಬಹುತೇಕ ಚಿತ್ರಮಂದಿರಗಳು ಬಂದ್ ಆಗಿವೆ. ಹಾಗಿರುವಾಗ, ಅಡ್ವಾನ್ಸ್ ಬುಕ್ಕಿಂಗ್ ಎಲ್ಲಿ ಪ್ರಾರಂಭವಾಗಿದೆ ಎಂಬ ಪ್ರಶ್ನೆ ಬರುವುದು ಸಹಜ. ವಿಷಯ ಇರುವುದೇ ಇಲ್ಲಿ. ಅಡ್ವಾನ್ಸ್ ಬುಕ್ಕಿಂಗ್ ಪ್ರಾರಂಭವಾಗಿರುವುದು ದುಬೈ ಸೇರಿದಂತೆ ಬೇರೆ ಭಾಷೆಗಳಲ್ಲಿ. ಸಲ್ಮಾನ್ ಖಾನ್‌ಗೆ ಭಾರತದಲ್ಲಷ್ಟೇ ಅಲ್ಲ, ಮಧ್ಯಪ್ರಾಚ್ಯ ಮತ್ತು ಇತರೆ ದೇಶಗಳಲ್ಲಿ ದೊಡ್ಡ ಅಭಿಮಾನಿವೃಂದವಿದೆ. ಅಲ್ಲೆಲ್ಲ ಕರೊನಾ ತಗ್ಗಿರುವುದರಿಂದ, ಚಿತ್ರಮಂದಿರಗಳಲ್ಲಿ ಬಿಡುಗಡೆಂ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ದುಬೈ ಮುಂತಾದ ಕಡೆಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಸಹ ಪ್ರಾರಂಭ ಮಾಡಲಾಗಿದೆ.
ಇನ್ನು, ಭಾರತದಲ್ಲಿ ಕರೊನಾ ಎರಡನೇ ಅಲೆ ಹೆಚ್ಚಿರುವುದರಿಂದ, ಚಿತ್ರಮಂದಿರಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಚಿತ್ರವನ್ನು ಜೀಪ್ಲೆಕ್ಸ್ ಓಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಪ್ರತಿ ವೀಕ್ಷಣೆಗೂ ೨೯೯ ರೂ. ದರ ನಿಗದಿ ಮಾಡಲಾಗಿದೆ.
`ರಾಧೆ' ಚಿತ್ರದಲ್ಲಿ ಸಲ್ಮಾನ್, ದಿಶಾ, ಜಾಕಿ ಶ್ರಾಫ್, ರಣದೀಪ್ ಹೂಡಾ ಮುಂತಾದವರು ನಟಿಸಿದ್ದು, ಪ್ರಭುದೇವಾ ನಿರ್ದೇಶನ ಮಾಡಿದ್ದಾರೆ. ಇನ್ನು ಸಲ್ಮಾನ್ ಖಾನ್ ಫಿಲಂಸ್ ಬ್ಯಾನರ್‌ನಡಿ, ಈ ಚಿತ್ರವನ್ನು ಅವ ಸಹೋದರ ಸೊಹೈಲ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ.