ಚೆನ್ನೈ: ಹಿರಿಯ ನಟಿ ಊರ್ವಶಿ ಅವರ ಬಗ್ಗೆ ಕನ್ನಡಿಗರಿಗೆ ಹೆಚ್ಚೇನು ಹೇಳಬೇಕಿಲ್ಲ. ಅವರ ಪರಿಚಯ ಕನ್ನಡಿಗರಿಗೂ ಇದೆ. ಡಾ. ರಾಜ್ಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಷ್ ಸೇರಿದಂತೆ ಮೇರು ನಟರ ಜತೆ ನಟಿಸಿ, ಊರ್ವಶಿ ಸೈ ಎನಿಸಿಕೊಂಡಿದ್ದಾರೆ. ಹಾಸ್ಯ ಪಾತ್ರಗಳ ಮೂಲಕವೂ ಮಿಂಚು ಹರಿಸಿದ್ದಾರೆ.
ಕೇರಳದಲ್ಲಿ ಜನಿಸಿದ ಊರ್ವಶಿ ಅವರು ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರಸಿದ್ಧರಾಗಿದ್ದಾರೆ. ಇಂದಿಗೂ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈವರೆಗೂ 700ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ, ಐದು ಕೇರಳ ಮತ್ತು ತಮಿಳುನಾಡು ರಾಜ್ಯ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಫಿಲ್ಮ್ಫೇರ್ ಅವಾರ್ಡ್ ಸಹ ಪಡೆದುಕೊಂಡಿದ್ದಾರೆ.
ಊರ್ವಶಿ ತಮ್ಮ 10 ನೇ ವಯಸ್ಸಿನಲ್ಲಿಯೇ ನಟನಾ ವೃತ್ತಿಯನ್ನು ಪ್ರಾರಂಭಿಸಿದರು ಮತ್ತು ಈಗ ವಯಸ್ಸಿಗೆ ಸೂಕ್ತವಾದ ಪಾತ್ರಗಳನ್ನು ನಿರ್ವಹಿಸುವ ಮೂಲಕ ಉದ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ಊರ್ವಶಿ ಅವರ ವೈಯಕ್ತಿಕ ಜೀವನವು ಅವರ ವೃತ್ತಿಪರ ಜೀವನದಷ್ಟು ವೈಭವಯುತವಾಗಿಲ್ಲ. ಆಗಾಗ ಕೌಟುಂಬಿಕ ಕಲಹಗಳೊಂದಿಗೆ ಸುದ್ದಿಯಾಗಿದ್ದಾರೆ.
ಮಲಯಾಳಂ ನಟ ಮನೋಜ್ ಕೆ ಜಯನ್ ಅವರನ್ನು 2000ನೇ ಇಸವಿಯಲ್ಲಿ ಊರ್ವಶಿ ಅವರು ವಿವಾಹವಾದರು. ಇಬ್ಬರ ದಾಂಪತ್ಯಕ್ಕೆ ಸಾಕ್ಷಿಯಾಗಿ ತೇಜಲಕ್ಷ್ಮಿ ಎಂಬ ಮಗಳಿದ್ದಾಳೆ. ಆರಂಭದಲ್ಲಿ ದಾಂಪತ್ಯ ಚೆನ್ನಾಗಿಯೇ ಇತ್ತು. ಆದರೆ, ನಂತರದ ದಿನಗಳಲ್ಲಿ ಕೌಟುಂಬಿಕ ಕಲಹ ಉಂಟಾಗಿ 2008ರಲ್ಲಿ ಊರ್ವಶಿ ಮತ್ತು ಮನೋಜ್ ವಿಚ್ಛೇದನ ಪಡೆದುಕೊಂಡರು.
ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಊರ್ವಶಿ, ಮನೋಜ್ ಕೆ ಜಯನ್ ಜೊತೆಗಿನ ವಿಚ್ಛೇದನದ ಹಿಂದಿನ ಕಾರಣವನ್ನು ಮೊದಲ ಬಾರಿಗೆ ಬಹಿರಂಗಪಡಿಸಿದರು. ನಮ್ಮ ವಿಚ್ಛೇದನಕ್ಕೆ ಮುಖ್ಯವಾದ ಕಾರಣವೆಂದರೆ ಮದ್ಯದ ಚಟ. ಅವರ ಕುಟುಂಬದ ಎಲ್ಲರೂ ಕುಡಿತಕ್ಕಾಗಿ ಒಟ್ಟಿಗೆ ಸೇರುತ್ತಾರೆ. ಅವರು ಆರಂಭದಲ್ಲಿ ನನಗೆ ಮದ್ಯ ಸೇವಿಸುವಂತೆ ಒತ್ತಾಯಿಸಿದರು. ಪ್ರತಿದಿನ ಮದ್ಯ ಕುಡಿಸುವುದರೊಂದಿಗೆ ನನ್ನನ್ನು ಮದ್ಯ ವ್ಯಸನಿಯಾಗಿಸಿದರು. ಇದು ಅಂತಿಮವಾಗಿ ವಿಚ್ಛೇದನಕ್ಕೆ ಕಾರಣವಾಯಿತು. ಆಗ ನನ್ನ ಮಗಳನ್ನು ನನ್ನಿಂದ ದೂರ ಮಾಡಿದ್ದು ಇದೊಂದೇ ಕಾರಣ ಎಂದರು.
ವಿಚ್ಛೇದನದ ನಂತರ ಊರ್ವಶಿ ಅವರು 2013 ರಲ್ಲಿ ಚೆನ್ನೈ ಮೂಲದ ಕನ್ಸ್ಟ್ರಕ್ಷನ್ ವ್ಯಾಪಾರದ ಮಾಲೀಕ ಶಿವಪ್ರಸಾದ್ ಅವರನ್ನು ವಿವಾಹವಾದರು. ದಂಪತಿಗೆ ಇಶಾನ್ ಪ್ರಜಾಪತಿ ಎಂಬ ಮಗನಿದ್ದಾನೆ. ಮನೋಜ್ ಕೆ ಜಯನ್ ಅವರು 2011 ರಲ್ಲಿ ಆಶಾ ಎಂಬ ಮಹಿಳೆಯನ್ನು ಮರು-ಮದುವೆ ಮಾಡಿಕೊಂಡರು. ಇವರಿಗೆ 2012 ರಲ್ಲಿ ಜನಿಸಿದ ಅಮೃತ್ ಎಂಬ ಮಗನಿದ್ದಾನೆ. (ಏಜೆನ್ಸೀಸ್)