ನಟಿ ಶ್ರೀಲೀಲಾ ಅವರ 'ಬೈಟು ಲವ್' ಸಿನಿಮಾದ ರಿಲೀಸ್ ಆಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇನ್ನು, ಟಾಲಿವುಡ್ನಲ್ಲೂ ಶ್ರೀಲೀಲಾ ಅವರು ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ತಾನೆ ಟಾಲಿವುಡ್‌ನಲ್ಲಿ ನಟಿ ಶ್ರೀಲೀಲಾ ಅವರು ನಟ ಪ್ರಿನ್ಸ್ ಮಹೇಶ್ ಬಾಬು ಅವರ ಜೊತೆಗೆ #SSMB28 ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಗಳು ಕೇಳಿಬಂದವು. ಆದರೆ, ಅದು ಗಾಸಿಪ್ ಸುದ್ದಿ ಎಂದು ಕೆಲವರು ಹೇಳಿದರೆ ಉಳಿದವರು ನಟಿ ಹೆಚ್ಚು ಸಂಭಾವನೆ ಕೇಳಿದ ಕಾರಣ ಆ ಸಿನಿಮಾ ಆಫರ್ ಅವರ ಕೈ ತಪ್ಪಿತು ಎಂದು ಹೇಳುತ್ತಿದ್ದಾರೆ.
ಇನ್ನು,ಈ 'ಕಿಸ್' ಚಿತ್ರದ ಬೆಡಗಿಯ ಬಗ್ಗೆ ಈಗ ಹೊಸದೊಂದು ಸುದ್ದಿ ಹಬ್ಬಿದೆ. ಹೌದು, ನಟಿ ಶ್ರೀಲೀಲಾ ಅವರ ಹೆಸರು ತೆಲುಗಿನ ಮತ್ತೊಬ್ಬ ಸ್ಟಾರ್ ನಟನ ಜತೆ ಕೇಳಿಬರುತ್ತಿದೆ. 'ಕಿಸ್' ಎಂಬ ತಮ್ಮ ಮೊದಲ ಸಿನಿಮಾದ ಮೂಲಕವೇ ನಟಿ ಶ್ರೀಲೀಲಾ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದರು. ಇದೀಗ, ತೆಲುಗು ಸಿನಿರಂಗದಲ್ಲೂ ತಮ್ಮ ಮೊದಲ ಸಿನಿಮಾ 'ಪೆಳ್ಳಿ ಸಂದಡಿ' ಮೂಲಕ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಶ್ರೀಲೀಲಾ. ಹಾಗಾಗಿ, ಇತ್ತೀಚೆಗೆ ಟಾಲಿವುಡ್‌ನಲ್ಲಿ ಶ್ರೀಲೀಲಾ ಅವರ ಬಗ್ಗೆ ಒಂದಲ್ಲಾ ಒಂದು ಸುದ್ದಿ ಹರಿದಾಡುತ್ತಲೇ ಇದೆ.
ಇದೀಗ, ಮಹೇಶ್ ಬಾಬು ಅವರ ನಂತರ ಟಾಲಿವುಡ್ ಸ್ಟಾರ್ ನಟ ಡಾರ್ಲಿಂಗ್ ಪ್ರಭಾಸ್ ಜೊತೆಗೆ ಶ್ರೀಲೀಲಾ ಅವರ ಹೆಸರು ಕೇಳಿಬಂದಿದೆ. ತೆಲುಗಿನಲ್ಲಿ ಶ್ರೀಲೀಲಾಗೆ ಅವರಿಗೆ ದೊಡ್ಡ, ದೊಡ್ಡ ಅವಕಾಶಗಳು ಬರ್ತಿವೆ ಎಂದು ಹೇಳಲಾಗುತ್ತಿದೆ. ಇದೀಗ, ನಟ ಪ್ರಭಾಸ್ ಅವರ ಒಂದು ಮುಂಬರುವ ಸಿನಿಮಾದಲ್ಲೂ ನಾಯಕಿಯಾಗುವ ಅವಕಾಶವನ್ನು ನಟಿ ಪಡೆದುಕೊಂಡಿದ್ದಾರಂತೆ. ಅಂದಹಾಗೆ, ಯಶಸ್ವಿ ನಿರ್ದೇಶಕ ಮಾರುತಿ ಅವರ ಜತೆಗೆ ನಟ ಪ್ರಭಾಸ್ ಅವರ ಮುಂದಿನ ಸಿನಿಮಾವೊಂದು ಪ್ರಕಟ ಆಗಿದೆ.
ಅದುವೇ 'ರಾಜ ಡೀಲಕ್ಸ್'. ಈ ಸಿನಿಮಾದಲ್ಲಿ ನಾಯಕಿಯಾಗಿ ಶ್ರೀಲೀಲಾ ಅವರು ನಟಿಸುತ್ತಾರೆ ಎನ್ನಲಾಗಿದೆ. ಇನ್ನು, ಶ್ರೀಲೀಲಾ ಮಾತ್ರವಲ್ಲದೇ, ಬೇರೆ ಇಬ್ಬರು ನಟಿಯರು ಈ ಸಿನಿಮಾದಲ್ಲಿ ಬಾಹುಬಲಿಯ ಜೊತೆಗೆ ತೆರೆಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ. ಹಾಗಾಗಿ, ನಟಿ ಶ್ರೀಲೀಲಾ ಜೊತೆಗೆ ನಟಿ ಮಾಳವಿಕಾ ಮೋಹನನ್, ನಟಿ ಮೆಹ್ರೀನ್ ಪಿರ್ಜಾದಾ ಅವರ ಹೆಸರುಗಳು ಕೇಳಿಬಂದಿವೆ. ಈ ಸುದ್ದಿ ಅದೆಷ್ಟು ನಿಜ ಎಂಬುದು ನಟಿ ಶ್ರೀಲೀಲಾ ಅವರೇ ತಿಳಿಸಬೇಕಿದೆ.