ಸಿನಿವಾಣಿ

ಪ್ರಿಯಾಂಕಾ ಈಗ ಕಣ್ಸೆಳೆವ ಮಾಯಾವಿ; ಆಲ್ಬಂ ಹಾಡಿನಲ್ಲಿ ಮೋಡಿ

ಬೆಂಗಳೂರು: ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ‘ಬಿಗ್ ಬಾಸ್’ ಪ್ರವೇಶ ಪಡೆದಿದ್ದ ಪ್ರಿಯಾಂಕಾ ತಿಮ್ಮೇಶ್, ಇದೀಗ ಎಲ್ಲರ ‘ಕಣ್ಸೆಳೆ’ಯುತ್ತಿದ್ದಾರೆ. ಬಿಗ್ ಬಾಸ್​ನಲ್ಲಿ ಅವರನ್ನು ನೋಡಿ ಸಾಕಷ್ಟು ಮಂದಿ ಫಿದಾ ಆದವರೂ ಇದ್ದಾರೆ. ‘ಮಾಯಾವಿ’ಯಂತೆ ವೀಕ್ಷಕರನ್ನೂ ಮೋಡಿ ಮಾಡಿದ್ದಾರೆ. ಇದೀಗ ಸಿನಿಮಾಗಳ ಜತೆಗೆ ಆಲ್ಬಂ ಹಾಡಿನಲ್ಲಿಯೂ ಪ್ರಿಯಾಂಕಾ ಮಿಂಚಿದ್ದಾರೆ. ಆ ಆಲ್ಬಂ ಹೆಸರು ‘ಕಣ್ಸೆಳೆವ ಮಾಯಾವಿ’. ಲಾಕ್​ಡೌನ್ ಜಾರಿಯಲ್ಲಿದೆ. ಅದ್ಯಾವ ಗ್ಯಾಪ್​ನಲ್ಲಿ ಈ ಹಾಡನ್ನು ಮಾಡಿದ್ದಾರೆ ಎಂದುಕೊಳ್ಳಬೇಡಿ. ಕಳೆದ ವರ್ಷದ ಲಾಕ್​ಡೌನ್ ಸಡಿಲವಾದ ಬಳಿಕ ಮಾಡಿದ ಆಲ್ಬಂ ಇದು. ಈಗ ಆ ಹಾಡು ಯೂಟ್ಯೂಬ್​ನಲ್ಲಿ ರಿಲೀಸ್ ಆಗಲು ಸಿದ್ಧವಾಗಿದೆ. ಪಕ್ಕಾ ರೊಮ್ಯಾಂಟಿಕ್ ಲವ್​ಸ್ಟೋರಿಯ ಈ ಹಾಡು, ಮೇ 28ಕ್ಕೆ ಎ2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆ ಆಗಲಿದೆ.

ಈ ಹಾಡಿನ ಬಗ್ಗೆ ಒಂದಷ್ಟು ಮಾಹಿತಿ ನೀಡುವ ಪ್ರಿಯಾಂಕಾ, ‘ಆರಂಭದಲ್ಲಿ ಸಿನಿಮಾ ಮಾಡುವ ಉದ್ದೇಶವಿತ್ತು. ಯಾವುದೇ ಸಮಸ್ಯೆ ಎದುರಾಗಬಾರದೆಂಬ ಕಾರಣಕ್ಕೆ ಮೊದಲಿಗೆ ಆಲ್ಬಂ ಹಾಡೊಂದನ್ನು ಮಾಡುವ ಪ್ಲಾನ್ ಆಯಿತು. ಆಗ ‘ಕಣ್ಸೆಳೆವ ಮಾಯಾವಿ’ ಶೂಟಿಂಗ್ ಆರಂಭಿಸಿದೆವು. ನಾಲ್ಕು ದಿನ ನಂದಿ ಬೆಟ್ಟದಲ್ಲಿ ಈ ಹಾಡಿನ ಚಿತ್ರೀಕರಣ ಮಾಡಿದ್ದೇವೆ. ಒಂದು ಹಾಡು ಮಾಡುವಷ್ಟರಲ್ಲಿ ಸಿನಿಮಾದ ಸಂಪೂರ್ಣ ಮಾಹಿತಿ ನಮ್ಮ ತಂಡಕ್ಕೆ ಮನವರಿಕೆಯಾಗಿದೆ. ಇನ್ನೇನು ಶೀಘ್ರದಲ್ಲಿ ನಮ್ಮ ತಂಡದಿಂದ ಚಿತ್ರವೊಂದನ್ನು ಘೋಷಣೆ ಮಾಡಲಿದ್ದೇವೆ’ ಎನ್ನುತ್ತಾರವರು. ಅಂದಹಾಗೆ, ತೆಲುಗು ಕಿರುತೆರೆ ನಟ ದರ್ಶಿತ್ ಹಾಡಿನಲ್ಲಿ ಪ್ರಿಯಾಂಕಾಗೆ ಜೋಡಿಯಾಗಿದ್ದಾರೆ. ತಮಿಳಿನ ಖ್ಯಾತ ಮ್ಯೂಸಿಕ್ ಕಂಪೋಸರ್ ಸ್ಯಾಮ್ ಸಿ.ಎಸ್ ಈ ಹಾಡಿಗೆ ಸಂಗೀತ ನೀಡಿದ್ದಾರೆ. ಅರ್ಫಾಜ್ ಉಲ್ಲಾಳ ಹಿನ್ನೆಲೆ ಧ್ವನಿ, ಸುಪ್ರಿತ್ ಶರ್ಮಾ ಸಾಹಿತ್ಯ, ರವಿಂದ್ರನಾಥ್ ಛಾಯಾಗ್ರಹಣ ಹಾಡಿಗಿದೆ. ಇದರ ಜತೆಗೆ ಪ್ರಜ್ವಲ್ ದೇವರಾಜ್ ಜತೆಗಿನ ‘ಅರ್ಜುನ್ ಗೌಡ’ ಮತ್ತು ‘ಶುಗರ್ ಲೆಸ್’ ಚಿತ್ರದಲ್ಲಿ ಪ್ರಿಯಾಂಕಾ ನಟಿಸಿದ್ದು, ಇನ್ನೂ ಎರಡ್ಮೂರು ಹೊಸ ಪ್ರಾಜೆಕ್ಟ್​ಗಳ ಮಾತುಕತೆ ನಡೆಯುತ್ತಿದೆ.