ಹೈದರಾಬಾದ್: ನಟ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಮೊನ್ನೆಯಷ್ಟೇ ಚಿತ್ರತಂಡ ತಿರುಪತಿಯಲ್ಲಿ ಅದ್ಧೂರಿಯಾಗಿ ಪ್ರೀ ರಿಲೀಸ್ ಈವೆಂಟ್ ಸಹ ಮಾಡಿದೆ. ಈ ವೇಳೆ ಎಲ್ಲೆಡೆ ಜೈ ಶ್ರೀರಾಮ್ ಘೋಷಣೆ ಮೊಳಗಿತು. ಚಿತ್ರದ ಟ್ರೈಲರ್ ಸಹ ಬಿಡುಗಡೆಯಾಗಿದ್ದು ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಜೂನ್ 16ಕ್ಕೆ ವಿಶ್ವದಾದ್ಯಂತ ಸಿನಿಮಾ ಬಿಡುಗಡೆಯಾಗಲಿದ್ದು, ಚಿತ್ರತಂಡ ಪ್ರಚಾರದಲ್ಲಿ ಬಿಜಿಯಾಗಿದೆ. ಇದರ ನಡುವೆ ಬಹುಭಾಷಾ ನಟಿ ಕಸ್ತೂರಿ ಶಂಕರ್ ಸಿನಿಮಾ ಆಡಿರುವ ಮಾತು ಪ್ರಭಾಸ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಆದಿಪುರುಷ್ ಸಿನಿಮಾದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಎಲ್ಲರಿಗು ತಿಳಿದಿದೆ. ಆದರೆ, ಈ ಸಿನಿಮಾದಲ್ಲಿ ರಾಮನ ಸಾಂಪ್ರದಾಯಿಕ ಚಿತ್ರಣದ ಅನುಪಸ್ಥಿತಿಯನ್ನು ಕಸ್ತೂರಿ ಶಂಕರ್ ಪ್ರಶ್ನೆ ಮಾಡಿದ್ದಾರೆ. ಪುರಾತನ ಕಾಲದಿಂದಲೂ ರಾಮನ ಮುಖವನ್ನು ಮೀಸೆ ಇಲ್ಲದೆ ಚಿತ್ರೀಕರಿಸಲಾಗಿದೆ. ಭಾರತೀಯ ಸಿನಿಮಾ ರಂಗದ ಅನೇಕ ಚಿತ್ರಗಳಲ್ಲೂ ರಾಮನ ಪಾತ್ರವನ್ನು ಮೀಸೆ ಇಲ್ಲದೆಯೇ ತೆರೆಯ ಮೇಲೆ ತೋರಿಸಲಾಗಿದೆ. ಆದರೆ, ಆದಿಪುರುಷ್ ಸಿನಿಮಾದಲ್ಲಿ ಪ್ರಭಾಸ್ ಮೀಸೆಯೊಂದಿಗೆ ಕಾಣಿಸಿರುವುದನ್ನು ಕಸ್ತೂರಿ ಟೀಕಿಸಿದ್ದಾರೆ. ಅಲ್ಲದೆ, ರಾಮನ ಪಾತ್ರಕ್ಕೆ ಪ್ರಭಾಸ್ ಸೂಕ್ತವಲ್ಲ. ಆ ತೇಜಸ್ಸು ಅವರಲ್ಲಿ ಇಲ್ಲ. ರಾಮನ ಬದಲು ಮಹಾಭಾರತದ ಕರ್ಣನ ಪಾತ್ರಕ್ಕೆ ಪ್ರಭಾಸ್ ಒಳ್ಳೆಯ ಆಯ್ಕೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಸ್ತೂರಿ ಅವರು ಟ್ವೀಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದು, ಟ್ವೀಟ್ನ ಸಾರಾಂಶ ಹೀಗಿದೆ. ರಾಮ ಮತ್ತು ಲಕ್ಷ್ಮಣರನ್ನು ಮೀಸೆ ಮತ್ತು ಗಡ್ಡಧಾರಿಯಾಗಿ ಚಿತ್ರಿಸುವ ಯಾವುದಾದರೂ ಸಂಪ್ರದಾಯವಿದೆಯೇ? ಏಕೆ ಈ ಗೊಂದಲ? ವಿಶೇಷವಾಗಿ ನಟ ಪ್ರಭಾಸ್ ಅವರ ತವರಾಗಿರುವ ತೆಲುಗು ಚಿತ್ರರಂಗದಲ್ಲಿ ಅನೇಕ ದಿಗ್ಗಜ ನಟರು ಶ್ರೀರಾಮನ ಪಾತ್ರಗಳನ್ನು ಪರಿಪೂರ್ಣವಾಗಿ ನಿರ್ವಹಿಸಿದ್ದಾರೆ. ಪ್ರಭಾಸ್ ನನಗೆ ರಾಮನ ರೀತಿ ಕಾಣುತ್ತಿಲ್ಲ ಬದಲಾಗಿ ಕರ್ಣ ರೀತಿ ಕಾಣುತ್ತಿದ್ದಾರೆ ಎಂದಿದ್ದಾರೆ.
ಕಸ್ತೂರಿ ಅವರ ಟ್ವೀಟ್ ನೋಡಿ ಅಸಮಾಧಾನಗೊಂಡಿರುವ ಪ್ರಭಾಸ್ ಅಭಿಮಾನಿಗಳು, ಕಸ್ತೂರಿಯವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಆದಿಪುರುಷ್ ಸಿನಿಮಾದಲ್ಲಿ ಭಗವಾನ್ ರಾಮನನ್ನು ಅಸಾಧಾರಣ ಯೋಧನಾಗಿ ಪ್ರಸ್ತುತಪಡಿಸಲಾಗುತ್ತಿದೆ ಮತ್ತು ರಾಮಾಯಣ ಮಹಾಕಾವ್ಯದ ಬಗ್ಗೆ ನಿರ್ದೇಶಕ ಓಂ ರಾವುತ್ ಅವರಲ್ಲಿರುವ ಕಾಲ್ಪನಿಕ ವೈಭವವನ್ನು ಎತ್ತಿ ತೋರಿಸುತ್ತದೆ. ನೀವು ಚಿತ್ರದ ಬಗ್ಗೆ ಮಾತನಾಡುವ ಮುನ್ನ ಸಿನಿಮಾವನ್ನು ಸಂಪೂರ್ಣವಾಗಿ ನೋಡಿ ಆಳವಾಗಿ ಪರಿಶೀಲಿಸುವಂತೆ ಅವರು ಕಸ್ತೂರಿ ಅವರನ್ನು ಅಭಿಮಾನಿಗಳು ಒತ್ತಾಯಿಸಿದ್ದಾರೆ.
ಕಸ್ತೂರಿ ಶಂಕರ್ ಬಗ್ಗೆ ಹೇಳುವುದಾದರೆ, ಅವರು 80 ಮತ್ತು 90ರ ದಶಕದಲ್ಲಿ ಬಹು ಬೇಡಿಕೆ ನಟಿಯಾಗಿದ್ದರು. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಎಲ್ಲ ಸಿನಿರಂಗದ ಸ್ಟಾರ್ ನಟರ ಜತೆ ಕಸ್ತೂರಿ ಅಭಿನಯಿಸಿದ್ದಾರೆ. ಈಗಲೂ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕಸ್ತೂರಿ ಅವರು ಸಕ್ರಿಯರಾಗಿದ್ದಾರೆ. ಅವರು ಸಾಮಾಜಿಕ ಕಾರ್ಯಕರ್ತೆಯೂ ಹೌದು. ರಾಜಕೀಯ ಹಾಗೂ ಸಿನಿಮಾಗೆ ಸಂಬಂಧಿಸಿದ ಘಟನೆಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ಅವರು ಎಂದಿಗೂ ದೂರ ಉಳಿಯುವುದಿಲ್ಲ. ಕಸ್ತೂರಿ ಅವರಿಗೆ ವಯಸ್ಸು 48 ಆದರೂ ಗ್ಲಾಮರ್ ಪ್ರದರ್ಶನ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹಾಟ್ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಹೃದಯದ ಬಡಿತವನ್ನು ಹೆಚ್ಚಿಸುತ್ತಿರುತ್ತಾರೆ. (ಏಜೆನ್ಸೀಸ್)