ಸಿನಿವಾಣಿ

ಹಾಲಿವುಡ್‌ಗೆ ಹಾರಿದ ರಕ್ಕಮ್ಮ ; ಜೀನ್ ಕ್ಲೌಡ್ ವ್ಯಾನ್ ಡ್ಯಾಮ್ ಜತೆ ಜಾಕ್‌ಲೀನ್ ನಟನೆ

ಕಿಚ್ಚ ಸುದೀಪ್ ಜತೆ ‘ವಿಕ್ರಾಂತ್ ರೋಣ’ ಚಿತ್ರದ ‘ರಾ ರಾ ರಕ್ಕಮ್ಮ’ ಎಂದು ಕುಣಿದು ಕುಪ್ಪಳಿಸಿದ್ದ ಶ್ರೀಲಂಕಾ ಮೂಲದ ಬಾಲಿವುಡ್ ನಟಿ ಜಾಕ್‌ಲೀನ್ ರ್ನಾಂಡಿಸ್ ಇದೀಗ ಹಾಲಿವುಡ್‌ಗೆ ಹಾರಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಹಾಲಿವುಡ್‌ನ ಆ್ಯಕ್ಷನ್ ಸ್ಟಾರ್ ಜೀನ್ ಕ್ಲೌಡ್ ವ್ಯಾನ್ ಡ್ಯಾಮ್ ಜತೆಗಿರುವ ಫೋಟೋ ಹಂಚಿಕೊಂಡಿದ್ದರು ಜಾಕ್‌ಲೀನ್.

ಆಗಲೇ ಹಾಲಿವುಡ್ ಚಿತ್ರದಲ್ಲಿ ನಟಿಸುತ್ತಿದ್ದಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ, ಆ ಬಗ್ಗೆ ಆಗ ಜಾಕ್‌ಲೀನ್ ತುಟಿ ಪಿಟಕ್ ಅಂದಿರಲಿಲ್ಲ. ಇತ್ತೀಚೆಗಷ್ಟೆ ಈ ಬಗ್ಗೆ ಮೌನ ಮುರಿದಿರುವ ಜಾಕ್​ಲೀನ್​ ಫರ್ನಾಂಡಿಸ್​. ಆ ಫೋಟೋ ಹಿಂದಿನ ಕಥೆ ಬಿಚ್ಚಿಟ್ಟಿದ್ದಾರೆ.

ಹಾಲಿವುಡ್​ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಗುಟ್ಟು ರಟ್ಟು ಮಾಡಿರುವ ಜಾಕ್​ಲೀನ್​, ‘ಇಟಲಿಯಲ್ಲಿ ನಮ್ಮ ಭಾಗದ ಶೂಟಿಂಗ್ ನಡೆಯಿತು. ಜೀನ್ ಕ್ಲೌಡ್ ಒಬ್ಬ ಲೆಜೆಂಡ್ ನಟ, ನಿಜವಾದ ಆ್ಯಕ್ಷನ್ ಹೀರೋ. ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವಳು ನಾನು. ನಾನು ಮಾತ್ರವಲ್ಲ ನನ್ನ ಕುಟುಂಬದವರೆಲ್ಲರೂ ಅವರ ಅಭಿಮಾನಿಗಳೇ. ಅವರ ಜತೆ ನಟಿಸುತ್ತೇನೆ ಅಂತ ಕನಸಿನಲ್ಲೂ ಊಹಿಸಿರಲಿಲ್ಲ. ಉತ್ತಮ ಪಾತ್ರ ದೊರೆತಿದೆ. ಆ್ಯಕ್ಷನ್, ಡ್ರಾಮಾ, ಸಸ್ಪೆನ್ಸ್ ಎಲ್ಲವೂ ಇರುವ ಕಥೆ. ಈ ಸಿನಿಮಾದಲ್ಲಿ ಕೆಲಸ ಮಾಡಿದ ಅನುಭವ ಅದ್ಭುತವಾಗಿತ್ತು’ ಎಂದು ಸಂತಸ ಹಂಚಿಕೊಂಡಿದ್ದಾರೆ. ಇದಲ್ಲದೇ ಜಾಕ್‌ಲೀನ್ ಬಾಲಿವುಡ್‌ನಲ್ಲಿ ‘ವೆಲ್ಕಮ್ ಟು ದಿ ಜಂಗಲ್’, ‘ಫತೇಹ್’ ಚಿತ್ರಗಳಲ್ಲಿ ಬಿಜಿಯಿದ್ದಾರೆ.
-ಏಜೆನ್ಸೀಸ್