ಚೆನೈ: ಸಿನಿತಾರಯರು ಸಿಕ್ಕಾಪಟ್ಟೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ ಎಂಬುದು ಎಲ್ಲರಿಗು ತಿಳಿದಿರುತ್ತೆ. ಅದರಲ್ಲಿಯೂ, ಇತ್ತೀಚಿನ ವರ್ಷಗಳಲ್ಲಿ ನಟ-ನಟಿಯರ ಸಂಭಾವನೆ ಕೋಟಿ ಕೋಟಿಗೆ ಏರಿಕೆ ಆಗಿದೆ ಎನ್ನುವುದು ತಿಳಿದಿದೆ. ಹೀಗಾಗಿ, ತಮ್ಮ ಸಂಭಾವನೆಯ ಬಗ್ಗೆ ಯಾವ ನಟ-ನಟಿಯರೂ ಕೂಡಾ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ಅಂದರೆ ಅದು ತೆರಿಗೆ ಭೀತಿ ಮತ್ತು ಮುಂದೆ ಬರುವ ಅವಕಾಶಗಳು ಕಡಿಮೆ ಆಗುತ್ತವೇನೋ ಎಂಬ ಭಯ. ಇನ್ನು, ಸಿನಿಮಾಗಳಲ್ಲಿ ಅಭಿನಯಿಸಿರಿವುದರಿಂದ ಬಂದ ಸಂಭಾವನೆಯ ಮೇಲೆ ಬೀಳುವ ತೆರಿಗೆ ಪಾವತಿಸುವ ಸಿನಿತಾರೆಯರು ಬಹಳ ಕಡಿಮೆ. ಹೀಗೆ, ಕೆಲ ದಿನಗಳ ಹಿಂದೆ ಕನ್ನಡ, ತೆಲುಗು, ತಮಿಳು ಸಿನಿಮಾರಂಗಗಳಲ್ಲಿ ಬಹಳಷ್ಟು ಖ್ಯಾತಿ ಪಡೆದ ನಟಿ ಗೌತಮಿ ಕೂಡಾ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ದೂರು ದಾಖಲಿಸಿತ್ತು.
ಇದೀಗ, ಆ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯವು ನಟಿಯ 6 ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಲು ಆದೇಶಿಸಿರುವುದರ ಜೊತೆಗೆ ಗೌತಮಿಯವರಿಗೆ ತಮ್ಮ ಒಟ್ಟು ಆದಾಯದ ಮೇಲೆ 25% ತೆರಿಗೆ ನೀಡುವಂತೆ ಆದೇಶಿಸಿದೆಯಂತೆ. ಅಂದಹಾಗೆ, 2016 ರಲ್ಲಿ ಗೌತಮಿ ಅವರು ತಮಿಳುನಾಡಿನ ಕೊಟ್ಟಿಯಾರ್ ಗ್ರಾಮದ ಬಳಿ ಇದ್ದ ತಮ್ಮ ಜಮೀನನ್ನು 4.10 ಕೋಟಿಗೆ ಮಾರಾಟ ಮಾಡಿದ್ದಾರೆ. ಆದರೆ, ಈ ಜಮೀನನ್ನು 4.10 ಕೋಟಿಗೆ ಅಲ್ಲ ಬದಲಿಗೆ 11.17 ಕೋಟಿಗೆ ಮಾರಾಟ ಮಾಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ನಟಿಯ ಮೇಲೆ ಆರೋಪ ಮಾಡಿತು. ಈ ಆರೋಪವನ್ನು ಸುಳ್ಳು ಎಂದ ನಟಿ ಗೌತಮಿ ತಾವು ಜಮೀನನ್ನು 4.10 ಕೋಟಿಗೆ ಮಾರಾಟ ಮಾಡಿದ್ದಾಗಿ ವಾದಿಸಿದ್ದರು. ಜೊತೆಗೆ, ಆ ಹಣಕಾಸು ವರ್ಷದಲ್ಲಿ ತಾವು ಕೇವಲ 34.88 ಲಕ್ಷ ರೂಪಾಯಿ ತಲಾ ಆದಾಯ ಪಡೆದಿದ್ದು, ಅದಕ್ಕೆ ಸುಮಾರು 9 ಲಕ್ಷ ರೂಪಾಯಿ ಆದಾಯ ಮೇಲೆ ತೆರಿಗೆಯನ್ನು ಬಡ್ಡಿ ಸಮೇತ ಪಾವತಿಸಿದ್ದಾಗಿ ನ್ಯಾಯಾಲಯಕ್ಕೆ ತಿಳಿಸಿದರು.
ಆದರೆ, ನಟಿಯ ವಾದವನ್ನು ಒಪ್ಪದ ನ್ಯಾಯಾಲಯವು ಅವರಿಗಿರುವ ಒಟ್ಟು 6 ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡುವಂತೆ ತೆರಿಗೆ ಇಲಾಖೆಗೆ ಸೂಚಿಸಿದ್ದು, ನಟಿಯು ತಲಾ ಆದಾಯದ ಮೇಲೆ 25% ತೆರಿಗೆ ಪಾವತಿಸಿದ ಬಳಿಕವಷ್ಟೆ ಬ್ಯಾಂಕ್ ಖಾತೆಗಳ ಮೇಲೆ ಸೀಜ್ ತೆಗೆದು, ನಟಿಗೆ ಬಳಸಿಕೊಳ್ಳಲು ನೀಡಿ ಎಂದು ಆದೇಶಿಸಿದೆ. 1987 ರಲ್ಲಿ ನಟನೆ ಆರಂಭಿಸಿದ ಗೌತಮಿ 'ಏಳು ಸುತ್ತಿನ ಕೋಟೆ', 'ಸಾಹಸ ವೀರ', 'ಚಿಕ್ಕೆಜಮಾನ್ರು', 'ಚೆಲುವ' ಎಂಬ ಹಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇನ್ನು, ಸೂಪರ್ ಸ್ಟಾರ್ ನಟ ರಜನೀಕಾಂತ್, ಕಮಲ್ ಹಾಸನ್, ಮೋಹನ್ ಲಾಲ್ ಮಮ್ಮುಟಿ, ಚಿರಂಜೀವಿ, ರವಿಚಂದ್ರನ್ ರಂತೆ ಹಲವು ಸ್ಟಾರ್ ನಟರೊಟ್ಟಿಗೆ ತೆರೆ ಹಂಚಿಕೊಂಡಿರುವ ಗೌತಮಿ ಅವರು ಒಂದು ಕಾಲದ ಬಹು ಬೇಡಿಕೆಯ ನಟಿಯಾಗಿದ್ದರು. ಅಷ್ಟೇ ಅಲ್ಲ, ಈಗಲೂ ಅವರ ವಯಸ್ಸಿಗೆ ತಕ್ಕಂಥಹಾ ಪಾತ್ರಗಳಲ್ಲಿ ತೆರೆ ಮೇಲೆ ಮಿಂಚುತ್ತಲೇ ಇದ್ದಾರೆ. ತಮಿಳಿನ ಖ್ಯಾತ ನಟ ಕಮಲ್ ಹಾಸನ್ ಅವರೊಂದಿಗೆ ನಟಿ ಗೌತಮಿ 13 ವರ್ಷಗಳ ಕಾಲ ಲಿವ್-ಇನ್ ರಿಲೇಶನ್ಶಿಪ್ ನಲ್ಲಿದ್ದರು. ಈಗ ನಟಿಯ ತೆರಿಗೆ ವಂಚನೆ ಪ್ರಕರಣ ಬೇರೆ ನಟರಲ್ಲಿ ಸಹ ನಡುಕ ಹುಟ್ಟಿಸಿದೆ ಎಂದರೇ ತಪ್ಪಾಗುವುದಿಲ್ಲ.