ಸಿನಿವಾಣಿ

ನಟ ವಡಿವೇಲು ಕಾಮಿಡಿ ನೋಡಿ ಕೋಮಾದಿಂದ ಎಚ್ಚರಗೊಂಡ ಬಾಲಕಿ, ಆತ್ಮಹತ್ಯೆ ಯತ್ನ ಕೈಬಿಟ್ಟ ಮಹಿಳೆ!

ಚೆನ್ನೈ: ಎಲ್ಲ ರೋಗಗಳಿಗೂ ನಗುವೇ ಔಷಧಿ ಎನ್ನುತ್ತಾರೆ. ಬಾಯ್ತುಂಬ ನಕ್ಕರೆ ಅಲ್ಲಿಗೆ ಕಾಯಿಲೆಗೆ ಜಾಗವೇ ಇರುವುದಿಲ್ಲ ಎಂಬ ಮಾತಿದೆ. ಅದಕ್ಕೆ ತಕ್ಕ ಹಾಗೆ ಒಂದು ಘಟನೆ ವಾಸ್ತವದಲ್ಲಿ ನಡೆದಿದೆ. ಹಾಸ್ಯನಟ ವಡಿವೇಲು ಅವರ ಕಾಮಿಡಿ ನೋಡಿ ಕೋಮಾದಲ್ಲಿದ್ದ ಹುಡುಗಿ ಮತ್ತೆ ಸಹಜ ಸ್ಥಿತಿಗೆ ಬಂದಿದ್ದಾಳೆ. ಅದೂ ಅಲ್ಲದೆ ವಡಿವೇಲು ಕಾಮಿಡಿ ನೋಡಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಿಲ್ಲಿಸಿದ ಘಟನೆಯೂ ಇದೆ.

ಅಂದಹಾಗೆ ವಡಿವೇಲು ಅವರು ತಮಿಳು ಸಿನಿಮಾ ರಂಗದ ಖ್ಯಾತ ಹಾಸ್ಯ ಕಲಾವಿದ. ಇವರ ಕಾಮಿಡಿ ನೋಡಿ ನಗದವರೇ ಇಲ್ಲ. ಇವರು ಒಂದು ಕಾಲದಲ್ಲಿ ತಮಿಳು ಹಾಸ್ಯಲೋಕದ ಅಧಿಪತಿಯಾಗಿದ್ದರು. ವಡಿವೇಲು ಇದ್ದರೆ ಆ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎಂಬ ಮಾತಿತ್ತು. ಅಷ್ಟರಮಟ್ಟಿಗೆ ವಡಿವೇಲು ತಮಿಳು ಸಿನಿಮಾ ರಂಗವನ್ನು ಆವರಿಸಿಕೊಂಡಿದ್ದರು.

ಹುಡುಗಿ ಕೋಮಾದಿಂದ ಎಚ್ಚರಗೊಂಡಿದ್ದು ಮತ್ತು ಮಹಿಳೆ ಆತ್ಮಹತ್ಯೆಗೆ ಯತ್ನವನ್ನು ತಪ್ಪಿಸಿದ ಎರಡೂ ಘಟನೆಗಳನ್ನು ಬಾಣಸಿಗ ವೆಂಕಟೇಶ್ ಭಟ್ ಇತ್ತೀಚೆಗೆ ನಡೆಸಿದ ಸಂದರ್ಶನದಲ್ಲಿ ನಟ ವಡಿವೇಲು ಹಂಚಿಕೊಂಡಿದ್ದಾರೆ. ಅವರ ಪ್ರಕಾರ 11 ವರ್ಷದ ಬಾಲಕಿಯೊಬ್ಬಳು ಕೋಮಾದಲ್ಲಿದ್ದಾಗ, ಈ ಹುಡುಗಿಗೆ ಯಾವುದರ ಮೇಲೆ ತುಂಬಾ ಆಸಕ್ತಿ ಇದೆ ಎಂದು ಆಕೆಯ ಪಾಲಕರನ್ನು ವೈದ್ಯರು ಕೇಳಿದ್ದರು. ತಕ್ಷಣ ಆಕೆಯ ಪಾಲಕರು ತಮ್ಮ ಮಗಳು ಹೆಚ್ಚಾಗಿ ವಡಿವೇಲು ಅವರ ಕಾಮಿಡಿಯನ್ನು ನೋಡಲು ಇಷ್ಟಪಡುತ್ತಾಳೆ ಎಂದು ಹೇಳಿದರು.

ಇದಾದ ಬಳಿಕ ತಕ್ಷಣ ಹಾಸ್ಯ ದೃಶ್ಯಗಳನ್ನು ತೋರಿಸುವಂತೆ ವೈದ್ಯರು ಸಲಹೆ ನೀಡಿದರು. ನಂತರ, ವಡಿವೇಲು ಅವರ ಹಾಸ್ಯ ದೃಶ್ಯಗಳನ್ನು ಅವರ ಪಾಲಕರು ತೋರಿಸಿದಾಗ, ಹಾಸ್ಯ ದೃಶ್ಯಗಳನ್ನು ನೋಡಿದ ಬಾಲಕಿ ಕೋಮಾದಿಂದ ಚೇತರಿಸಿಕೊಂಡಿತು. ಕೋಮಾದಿಂದ ಚೇತರಿಸಿಕೊಂಡ ನಂತರ ಮಗುವಿನ ಪಾಲಕರು ವಡಿವೇಲು ಅವರನ್ನು ನೋಡಿ ಧನ್ಯವಾದ ಹೇಳಿದ್ದಾರೆ. ಈ ಘಟನೆಯನ್ನು ಕೇಳಿ ವಡಿವೇಲು ಭಾವುಕರಾದರು ಮತ್ತು ಓರ್ವ ಕಲಾವಿದನಿಗೆ ಇದಕ್ಕಿಂತ ಹೆಚ್ಚಿನದನ್ನು ಇನ್ನೇನು ಬಯಸಲು ಸಾಧ್ಯ ಎಂದರು.

ಅದೇ ರೀತಿ, ವಡಿವೇಲು ಅವರು ಹಂಚಿಕೊಂಡ ಮತ್ತೊಂದು ಘಟನೆಯಲ್ಲಿ, ತಮಿಳುನಾಡಿನ ಥೇಣಿಯಲ್ಲಿ ಮಹಿಳೆಯೊಬ್ಬರು ತನ್ನ ಪತಿ ತನಗೆ ಅವಮಾನ ಮಾಡಿದ ಕಾರಣ, ಹತಾಶೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಅಕ್ಕಪಕ್ಕದವರು ಮನೆಯ ಬಾಗಿಲು ಒಡೆದು ಒಳಗೆ ಹೋದಾಗ ಮಹಿಳೆ ಟಿವಿ ನೋಡುತ್ತಾ ನಗುತ್ತಲೇ ಹಗ್ಗ ಕಟ್ಟುತ್ತಿದ್ದಳು. ಈ ವಿಚಾರ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಏನಾಯಿತು ಎಂದು ವಿಚಾರಿಸಿದಾಗ ಆಕೆ ಆತ್ಮಹತ್ಯೆ ಮಾಡಿಕೊಲ್ಳುವುದನ್ನು ವಡಿವೇಲು ಕಾಮಿಡಿ ತಡೆದಿದೆ ಎಂದು ತಿಳಿಸಿದರು. ಏಕೆಂದರೆ, ಮಹಿಳೆ ನೇಣು ಬಿಗಿದುಕೊಳ್ಳಲು ಮುಂದಾದಾಗ, ಟಿವಿಯಲ್ಲಿ ವಡಿವೇಲು ಕಾಮಿಡಿ ದೃಶ್ಯ ಬರುತ್ತಿತ್ತು. ಅದನ್ನು ನೋಡಿದ ಮಹಿಳೆ ತನ್ನ ಆತ್ಮಹತ್ಯೆ ನಿರ್ಧಾರವನ್ನು ಕೈಬಿಟ್ಟಿದ್ದಾರೆ.

ಇದಾದ ನಂತರ ಪೊಲೀಸ್ ಅಧಿಕಾರಿ ವಡಿವೇಲು ಅವರ ಫೋನ್ ನಂಬರ್ ಪಡೆದು ಕರೆ ಮಾಡಿ ನಡೆದ ಸಂಗತಿಯನ್ನು ತಿಳಿಸಿದರು. ಆಗ ವಡಿವೇಲು ಮಹಿಳೆಯೊಂದಿಗೆ ಮಾತನಾಡಿದರು. ಮಹಿಳೆ ನಗುತ್ತಾ ಸರ್ ನಾನು ಸ್ವಲ್ಪ ಸಮಯದ ಹಿಂದೆ ಸತ್ತೆ ಹೊಗುತ್ತಿದ್ದೆ. ಆದರೆ, ನೀವು ಬಂದು ನನ್ನನ್ನು ಉಳಿಸಿದ್ದೀರಿ ಎಂದಿದ್ದಾರೆ. ಆಗ ವಡಿವೇಲು ಅವರು ಇನ್ನು ಮುಂದೆ ಈ ರೀತಿ ಮಾಡಬೇಡಿ ಎಂದು ಸಲಹೆ ನೀಡಿದರು. (ಏಜೆನ್ಸೀಸ್​)