Actor Siddharth : ನಟ ಸಿದ್ಧಾರ್ಥ್ಗೆ ತಮಿಳು ಹಾಗೂ ತೆಲುಗಿನಲ್ಲಿ ಒಳ್ಳೆಯ ಕ್ರೇಜ್ ಇದೆ. ಅಲ್ಲದೆ, ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿರುವ ಸಿದ್ಧಾರ್ಥ್, ಸದ್ಯದಲ್ಲೇ "ಮಿಸ್ ಯು" ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.
ನವೆಂಬರ್ 29ಕ್ಕೆ ಮಿಸ್ ಯು ಸಿನಿಮಾ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯಗಳೂ ಶುರುವಾಗಿವೆ. ಈ ಸಿನಿಮಾ ಭರ್ಜರಿ ಯಶಸ್ಸು ಕಾಣಲಿದೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ. ಪ್ರಚಾರದ ಭಾಗವಾಗಿ ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ಕಾರ್ಯಕ್ರಮವೊಂದು ನಡೆಯಿತು. ಈ ವೇಳೆ ಸಿದ್ಧಾರ್ಥ್ ಆಡಿರುವ ಮಾತೊಂದು ಚರ್ಚೆಯನ್ನು ಹುಟ್ಟುಹಾಕಿದೆ.
ಮಿಸ್ ಯು ಸಿನಿಮಾ ರಿಲೀಸ್ ಆದ ಒಂದು ವಾರದ ಬಳಿಕ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಪುಷ್ಪ 2 ಸಿನಿಮಾ ಕೂಡ ರಿಲೀಸ್ ಆಗಲಿದೆ. ಹೀಗಾಗಿ ಪುಷ್ಪ ಸಿನಿಮಾದಿಂದ ತಮ್ಮ ಸಿನಿಮಾದ ಮೇಲೆ ಪರಿಣಾಮ ಬೀರುವುದಿಲ್ಲವೇ ಎಂಬ ಪ್ರಶ್ನೆ ಸಿದ್ಧಾರ್ಥ್ಗೆ ಎದುರಾಯಿತು. ಇದಕ್ಕೆ ಉತ್ತರಿಸಿದ ಸಿದ್ಧಾರ್ಥ್, ಪುಷ್ಪ ಚಿತ್ರ ಬಿಡುಗಡೆಯಾದರೆ ನಾನೇನು ಮಾಡಬೇಕು? ನನ್ನ ದೃಷ್ಟಿಯಲ್ಲಿ ಎಲ್ಲ ಸಿನಿಮಾಗಳೂ ಒಂದೇ. ಸಿನಿಮಾದ ಬಜೆಟ್ಗೆ ತಕ್ಕಂತೆ ಅದು ದೊಡ್ಡ ಸಿನಿಮಾ ಅಥವಾ ಚಿಕ್ಕ ಸಿನಿಮಾ ಇರಬಹುದು ಆದರೆ, ನನಗೆ ಎಲ್ಲಾ ಸಿನಿಮಾಗಳು ಸಮಾನ ಎಂದರು.
ನನ್ನ ಸಿನಿಮಾ ಚೆನ್ನಾಗಿದ್ದರೆ ಪುಷ್ಪ 2 ರಿಲೀಸ್ ಆದ್ರೂ ನನ್ನ ಸಿನಿಮಾವನ್ನು ಯಾರೂ ಥಿಯೇಟರ್‌ನಿಂದ ತೆಗೆಯಲು ಸಾಧ್ಯವಿಲ್ಲ. ಒಂದು ಕಾಲದಲ್ಲಿ ಸೋಷಿಯಲ್ ಮೀಡಿಯಾ ಇರಲಿಲ್ಲ, ಆದರೆ ಈಗ ಸಾಮಾಜಿಕ ಜಾಲತಾಣಗಳ ಮೂಲಕ ಸಿನಿಮಾ ಹೇಗಿದೆ ಎಂಬುದನ್ನು ಸೆಕೆಂಡುಗಳಲ್ಲಿ ತಿಳಿಯಬಹುದು ಎಂದು ಹೇಳಿದ್ದಾರೆ.
ಒಳ್ಳೆಯ ಸಿನಿಮಾಗಳನ್ನು ಯಾರೂ ಥಿಯೇಟರ್‌ನಿಂದ ತೆಗೆಯಲು ಸಾಧ್ಯವಿಲ್ಲ ಎಂಬ ಸಿದ್ಧಾರ್ಥ ಅವರ ಹೇಳಿಕೆಯನ್ನು ಕೆಲವರು ಟೀಕಿಸಿದರೆ, ಇನ್ನು ಕೆಲವರು ಅವರನ್ನು ಬೆಂಬಲಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ ಮಿಸ್ ಯು ಸಿನಿಮಾದಲ್ಲಿ ಸಿದ್ಧಾರ್ಥ್ಗೆ ನಾಯಕಿಯಾಗಿ ಕನ್ನಡತಿ ಆಶಿಕಾ ರಂಗನಾಥ್ ನಟಿಸಿದ್ದಾರೆ. (ಏಜೆನ್ಸೀಸ್)