ಆರೇಳು ವರ್ಷಗಳ ಗ್ಯಾಪ್ ಪಡೆದು "ಉಂಡೆನಾಮ' ಚಿತ್ರದ ಮೂಲಕ ವಾಪಸ್ಸಾದವರು ನಟ ಕೋಮಲ್ ಕುಮಾರ್. ಇದೀಗ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬಿಜಿ. ವಿಶೇಷ ಅಂದರೆ ಪ್ರತಿ ಚಿತ್ರವೂ ಒಂದೊಂದು ಜಾನರ್ಗೆ ಸೇರಿವೆ. ಚಿತ್ರಗಳು, ಪಾತ್ರಗಳು, ಮುಂದಿನ ಯೋಜನೆಯ ಕುರಿತು ವಿಜಯವಾಣಿ ಜತೆ ಕೋಮಲ್ ಮುಕ್ತವಾಗಿ ಮಾತನಾಡಿದ್ದಾರೆ.
- ಈಗ ಯಾವೆಲ್ಲ ಸಿನಿಮಾಗಳಲ್ಲಿ ನಟಿಸುತ್ತಿದ್ದೀರಿ?
"ನಮೋ ಭೂತಾತ್ಮ 2', "ಕಾಲಾಯನಮ@', "ಯಲಾ ಕುನ್ನಿ', "ರೋಲೆಕ್ಸ್', ಟೈಟಲ್ ಇಡದ ರೋಬೋ ಕುರಿತ ಸಿನಿಮಾ ಜತೆಗೆ ಇನ್ನೂ ಎರಡು ಚಿತ್ರಗಳ ಕಥೆ ಒಪ್ಪಿದ್ದೇನೆ. "ನಮೋ ಭೂತಾತ್ಮ 2' ರಿಲೀಸ್ ಆದ ನಂತರ, ನಾನು ನಟಿಸಿ, ನಿರ್ಮಿಸಿರುವ "ಕಾಲಾಯನಮ@' ಬಿಡುಗಡೆಯಾಗಲಿದೆ. ಬಿಲ್ಡಪ್ ಸಿನಿಮಾಗಳು ವರ್ಕ್ ಆಗುತ್ತಿಲ್ಲ. ಕಂಟೆಂಟ್ ಸಿನಿಮಾಗಳ ಸಮಯವಿದು. ಹೊಸ ಬಗೆಯ ವಿಷಯಗಳನ್ನು ಹುಡುಕಿ, ಬೇರೆ ಬೇರೆ ಜಾನರ್ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ.
- "ನಮೋ ಭೂತಾತ್ಮ' ಚಿತ್ರಕ್ಕೂ ಈ ಸೀಕ್ವಲ್ಗೂ ಲಿಂಕ್ ಇದೆಯೇ?
"ನಮೋ ಭೂತಾತ್ಮ' ತಮಿಳು ಚಿತ್ರದ ರಿಮೇಕ್ ಆಗಿತ್ತು. ಕನ್ನಡದಲ್ಲಿ ನಾವು ಹಲವು ಬದಲಾವಣೆ ಮಾಡಿಕೊಂಡಿದ್ದೆವು. 2015ರಲ್ಲಿ ಮೊದಲ ಭಾಗ ರಿಲೀಸ್ ಆಗಿತ್ತು. ಇತ್ತೀಚಿನ ವರ್ಷಗಳಲ್ಲಿ ಹಾರರ್ ಕಾಮಿಡಿ ಸಿನಿಮಾಗಳು ಬಂದಿಲ್ಲ. ನಿರ್ದೇಶಕ ಮುರಳಿ ಮಾಸ್ಟರ್ "ನಮೋ ಭೂತಾತ್ಮ 2' ಕಥೆ ಮಾಡಿದ್ದಾರೆ. ಅದೇ ಬೇರೆ ಕಥೆ, ಇದೇ ಬೇರೆ ಕಥೆ. ಹಾರರ್ಗಿಂತ ಕಾಮಿಡಿ ಜಾಸ್ತಿಯಿದೆ. ಕಥೆ, ಚಿತ್ರಕಥೆ ಎರಡೂ ಯಾರೂ ನಿರೀಸಿದ ರೀತಿ ಇರಲಿದೆ.
- ನಿಮ್ಮ ಪಾತ್ರ ಹೇಗಿರಲಿದೆ?
ನಾನಿಲ್ಲಿ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುವ ವ್ಯಕ್ತಿ. ಒಂದು ಪ್ರೋಗ್ರಾಂ ಮಾಡಲು ಯಾವುದೋ ಲೊಕೇಷನ್ಗೆ ಹೋದಾಗ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತವೆ ಎಂಬುದು ಚಿತ್ರದ ಕಥೆ. ಹಾರರ್ ಮತ್ತು ಕಾಮಿಡಿ ಜಾನರ್ ಒಂದು ನಾಣ್ಯದ ಎರಡು ಮುಖಗಳಂತೆ, ಒಮ್ಮೆ ನಗಿಸಿದರೆ, ಮತ್ತೊಮ್ಮೆ ಹೆದರಿಸುತ್ತದೆ. ಡಬ್ಬಿಂಗ್ ಸಮಯದಲ್ಲಿ ಸಿನಿಮಾ ನೋಡಿದ್ದೇನೆ. ಕಲಾವಿದನಾಗಿ ನನಗೆ ತೃಪ್ತಿ ನೀಡಿದ ಚಿತ್ರ.
- ನೀವು ದೆವ್ವ, ಭೂತಗಳನ್ನು ನಂಬುತ್ತೀರಾ?
ಇಲ್ಲ ನಂಬುದವುದಿಲ್ಲ. ಅದೆಲ್ಲ ನೆಗಟಿವ್ ಎನರ್ಜಿ, ಪಾಸಿಟಿವ್ ಎನರ್ಜಿ ಅಷ್ಟೇ. ನಾವು ಪೂಜೆ ಮಾಡುವುದೇ ಭೈರವನನ್ನು. ಪ್ರತಿ ಅಮಾವಾಸ್ಯೆಯಲ್ಲಿ ನಮ್ಮ ಊರಿನ ದೇವಸ್ಥಾನದಲ್ಲಿ ಪೂಜೆ ನಡೆಯುತ್ತದೆ. ನಾನು ಬೆಳಗ್ಗೆ 3 ಗಂಟೆಗೆ ಎದ್ದು ಹೋಗುತ್ತೇನೆ.
- ಒಟಿಟಿ ಬಂದು ಚಿತ್ರರಂಗಕ್ಕೆ ಸಹಾಯವಾಗಿದೆಯಲ್ಲವೇ?
ಹೌದು, ಎರಡು ಕಥೆಗಳು ನನಗೂ ಬಂದಿವೆ. ಒಟಿಟಿ ವೇದಿಕೆಗಳ ಜತೆ ಮಾತುಕತೆ ನಡೆಯುತ್ತಿದೆ. ಆದರೆ, ನನಗೆ ವೆಬ್ಸರಣಿ ಅಂದರೆ ಅಷ್ಟಕ್ಕಷ್ಟೇ. ಎಲ್ಲ ಸಿನಿಮಾಗಳನ್ನೂ ಥಿಯೇಟರ್ಗಳಲ್ಲಿ ರಿಲೀಸ್ ಮಾಡಲಾಗುವುದಿಲ್ಲ. ಒಟಿಟಿ ಮೂಲಕ ಹೇಳುವಂತಹ ಕಥೆಗಳೇ ಇರುತ್ತವೆ. ನನ್ನ ಬಳಿ ಅಂತಹ ಹಲವಾರು ಕಥೆಗಳಿವೆ. ಒಟಿಟಿಯಲ್ಲಿ ಕನ್ನಡ ಚಿತ್ರಗಳಿಗೆ ಬೇಡಿಕೆ ಹೆಚ್ಚಾದರೆ, ನನ್ನಂಥ ಅದೃಷ್ಟಶಾಲಿ ಬೇರೆ ಇಲ್ಲ.