‘ಬಿಗ್ ಬಾಸ್’ನ ಫಿನಾಲೆ ಸಂದರ್ಭದಲ್ಲಿಯೇ ಫ್ಯಾಶನ್ ಜಗತ್ತಿಗೆ ಕಾಲಿಡುತ್ತಿರುವುದಾಗಿ ಕಮಲ್ ಹಾಸನ್ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ‘ಹೌಸ್ ಆಫ್ ಖದ್ದರ್’ ಎಂಬ ಹೊಸ ಬ್ರಾಂಡ್ ಸ್ಥಾಪಿಸುತ್ತಿರುವುದಾಗಿಯೂ ಘೋಷಿಸಿದ್ದರು. ಅದೀಗ ಕಾರ್ಯರೂಪಕ್ಕೆ ಬರುತ್ತಿದೆ. ನವೆಂಬರ್ 7ರಂದು ಕಮಲ್ ಹಾಸನ್ ಅವರ ಹುಟ್ಟುಹಬ್ಬವಿದ್ದು, ಈ ಸಂದರ್ಭದಲ್ಲಿ ಚಿಕಾಗೋದಲ್ಲಿ ಈ ಬ್ರಾಂಡ್ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಈ ಬ್ರಾಂಡ್ ಉದ್ಘಾಟನೆಗಾಗಿ ಕಮಲ್ ಹಾಸನ್ ಸದ್ಯದಲ್ಲೇ ಚಿಕಾಗೋಗೆ ಪ್ರಯಾಣ ಬೆಳೆಸಲಿದ್ದಾರೆ.
ಈ ಬ್ರಾಂಡ್ನ ಬಟ್ಟೆಯನ್ನು ಡಿಸೈನ್ ಮಾಡುತ್ತಿರುವುದು ಕಾಲಿವುಡ್ನ ಜನಪ್ರಿಯ ಕಾಸ್ಟೂಮ್ ಡಿಸೈನರ್ ಅಮೃತಾ ರಾಮ್ ಈ ಹಿಂದೆ ಕಮಲ್ ಹಾಸನ್ ಮತ್ತು ಮಗಳು ಶ್ರುತಿ ಹಾಸನ್ ಅವರ ಡ್ರೆಸ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದ ಅಮೃತಾ, ಈಗ ‘ಹೌಸ್ ಆಫ್ ಖದ್ದರ್’ನ ಬಟ್ಟೆಗಳನ್ನು ವಿನ್ಯಾಸಗೊಳಿಸುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಕಮಲ್, ‘ಇಡೀ ಜಗತ್ತಿಗೆ ಖಾದಿಯ ಮಹತ್ವವನ್ನು ತೋರಿಸಿಕೊಟ್ಟಿದ್ದು ಭಾರತ. ಎಲ್ಲ ಕಾಲಗಳಲ್ಲೂ ಬಹಳ ಸುಲಭವಾಗಿ ಧರಿಸಬಹುದಾದ ಖಾದಿ ಬಟ್ಟೆಯನ್ನು, ಇಂದಿನ ತಲೆಮಾರಿನವರಿಗೆ ಪರಿಚಯಿಸುವುದರ ಜತೆಗೆ, ಅದನ್ನು ಜನಪ್ರಿಯಗೊಳಿಸುವುದು ನಮ್ಮ ಉದ್ದೇಶ’ ಎಂದು ಕಮಲ್ ಹಾಸನ್ ಹೇಳಿಕೊಂಡಿದ್ದಾರೆ. ‘ಬಿಗ್ ಬಾಸ್ 5’ರ ವಾರಾಂತ್ಯದ ಕಂತುಗಳಲ್ಲಿ ಕಮಲ್ ಹಾಸನ್, ತಮ್ಮದೇ ಬ್ರಾಂಡ್ನ ಉಡುಪುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಡ್ರೆಸ್ಸಿಂಗ್ ಶೈಲಿಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.