ಬೆಂಗಳೂರು: ಮಠ, ಎದ್ದೇಳು ಮಂಜುನಾಥ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ (Guruprasad) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲಗಾರರ ಕಾಟಕ್ಕೆ ಹೆದರಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರಿನ ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 2 ದಿನಗಳಿಂದ ಅವರ ರೂಮಿನಿಂದ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಗುರುಪ್ರಸಾದ್ ನಿಧನದ ಬಗ್ಗೆ ನಟ ಜಗ್ಗೇಶ್ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದು, ಈ ಹಿಂದೆಯೇ ಅನೇಕ ಬಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ. ನಾನು ಬುದ್ಧಿವಾದ ಹೇಳಿದ್ದೆ. ಆದ್ರೆ ಆತ ಯಾರ ಮಾತನ್ನು ಕೇಳುತ್ತಿರಲಿಲ್ಲ ಎಂದರು.
ಗುರುಪ್ರಸಾದ್ ನಮ್ಮ ಮನೆಯಲ್ಲಿ ಬೆಳೆದಿರುವ ಹುಡುಗ. ನಾನು ಆತನನ್ನು ಹೆಚ್ಚಿಗೆ ಮಾತನಾಡಿಸುತ್ತಿರಲಿಲ್ಲ. ಆತನಿಗೆ ಅತಿಯಾದ ಕುಡಿತದ ಚಟವಿತ್ತು. ಕುಡಿದು ಕುಡಿದು ಹಾಳಾಗಿದ್ದ. ಗುರುಪ್ರಸಾದ್ಗೆ ಒಳ್ಳೆಯ ಬರವಣಿಗೆ ಇತ್ತು. ಆದರೆ, ಆತ ಈ ನಿರ್ಧಾರ ತೆಗೆದುಕೊಂಡಿದ್ದು ನೋವಾಯಿತು. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೊದಲೇ ಸಾವಿರ ಸಲ ಹೇಳಿದ್ದ ಎಂದು ಗುರುಪ್ರಸಾದ್ ಸಾವಿಗೆ ಜಗ್ಗೇಶ್ ಸಂತಾಪ ಸೂಚಿಸಿದರು.
ಕೆಲ ತಿಂಗಳ ಹಿಂದಷ್ಟೇ ಇವರ ನಿರ್ದೇಶನದ ರಂಗನಾಯಕ ಚಿತ್ರ ರಿಲೀಸ್ ಆಗಿತ್ತು. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದ ಈ ಚಿತ್ರವು ಬಾಕ್ಸ್ಆಫೀಸ್ನಲ್ಲಿ ಹೀನಾಯವಾಗಿ ಸೋಲುಂಡಿತ್ತು. ಸಾಲಬಾಧೆ ತಾಳಲಾರದೆ ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಈ ಬಗ್ಗೆ ಇನ್ನಷ್ಟೇ ಅಧಿಕೃತವಾಗಬೇಕಿದೆ.
1972ನೇ ನವೆಂಬರ್ 2 ಗುರುಪ್ರಸಾದ್ ಜನಿಸಿದ್ದರು. ರಾಮನಗರ ಜಿಲ್ಲೆಯ ಕನಕಪುರದಲ್ಲಿ ಗುರುಪ್ರಸಾದ್ ಜನಿಸಿದರು.2006 ರಲ್ಲಿ ಮಠ ಸಿನೆಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಆದರು. ಬಳಿಕ ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್, ರಂಗ ನಾಯಕ ಹಾಗೂ ಎರಡನೇ ಸಲ ಸೇರಿದಂತೆ ಹಲವು ಸಿನಿಮಾ ನಿರ್ದೇಶನ ಮಾಡಿದ್ದರು. ಎದ್ದೇಳು ಮಂಜುನಾಥ ಚಲನಚಿತ್ರದ ಅತ್ಯುತ್ತಮ ಚಿತ್ರಕಥೆಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಬಂದಿತ್ತು.