ಸಿನಿವಾಣಿ

ಶೀಘ್ರದಲ್ಲೇ ಅಭಿಷೇಕ್​ ಮದ್ವೆ ಫಿಕ್ಸ್​ ಎನ್ನುತ್ತಿವೆ ಆಪ್ತ ಮೂಲಗಳು: ಇವರೇ ನೋಡಿ ಅಭಿ ಮನಸ್ಸು ಗೆದ್ದ ಚೆಲುವೆ!?

ಬೆಂಗಳೂರು: ಇತ್ತೀಚೆಗಷ್ಟೇ ನಟ ಅಭಿಷೇಕ್​ ಅಂಬರೀಷ್ (Abhishek ambareesh)​ ಅವರ ಮದುವೆ ಸುದ್ದಿ ಸ್ಯಾಂಡಲ್​ವುಡ್​ (Sandalwood) ಅಂಗಳದಲ್ಲಿ ಕೇಳಿಬಂದಿತ್ತು. ಆದರೆ, ಈ ಸುದ್ದಿಯನ್ನು ಅಭಿಷೇಕ್​ ತಳ್ಳಿಹಾಕಿದ್ದರು. ಆದರೆ, ಇದೀಗ ಮದುವೆ ವಿಚಾರ ಖಚಿತ ಎಂಬುದು ಅಂಬರೀಷ್​ ಕುಟುಂಬದ ಆಪ್ತ ಮೂಲಗಳಿಂದ ತಿಳಿದುಬಂದಿದೆ. ಶೀಘ್ರದಲ್ಲೇ ಅಭಿ ನಿಶ್ಚಿತಾರ್ಥ (Engagement) ನಡೆಯಲಿದೆ ಎನ್ನಲಾಗುತ್ತಿದೆ.

ಅಂದಹಾಗೆ ಅಭಿ ಕೈಹಿಡಿಯಲಿರುವ ಹುಡುಗಿ ಯಾರು ಎಂಬ ಪ್ರಶ್ನೆಗು ಇದೀಗ ಉತ್ತರ ಸಿಕ್ಕಿದೆ. ಮಾಡೆಲ್​ ಒಬ್ಬರ ಜೊತೆ ಅಭಿ ಮದುವೆ ಆಗಲಿದೆಯಂತೆ. ಆ ಮಾಡೆಲ್​ ಯಾರೆಂದರೆ, ಫ್ಯಾಷನ್​ ಲೋಕದ ಖ್ಯಾತ ನಾಮ ಪ್ರಸಾದ್​ ಬಿದ್ದಪ್ಪ ಅವರು ಮಗಳು ಅವಿವಾ ಬಿದ್ದಪ್ಪ (Aviva bidapa) ಜೊತೆ ಅಭಿಷೇಕ್​ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿ ಅಭಿಷೇಕ್​ ಆಪ್ತ ಬಳಗದಿಂದಲೇ ಕೇಳಿಬಂದಿದೆ.

ಇದೀಗ ಬಂದಿರುವ ಇನ್ನೊಂದು ಸಂಗತಿ ಏನೆಂದರೆ, ಅವಿವಾ ಮತ್ತು ಅಭಿ ನಾಲ್ಕು ವರ್ಷಗಳಿಂದ ಲವ್​ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಇಬ್ಬರು ಮದುವೆಗೆ ಎರಡೂ ಕುಟುಂಬಗಳು ಒಪ್ಪಿದ್ದು, ಮುಂದಿನ ಡಿಸೆಂಬರ್​ ತಿಂಗಳ ಮೊದಲು ಅಥವಾ ಎರಡನೇ ವಾರದಲ್ಲಿ ನಿಶ್ಚಿತಾರ್ಥ ಮಾಡಲು ಎರಡೂ ಮನೆಯವರು ಸಿದ್ಧತೆ ಮಾಡಿದ್ದಾರೆಂದು ತಿಳಿದುಬಂದಿದೆ.

ನಿಶ್ಚಿತಾರ್ಥ ಆಗುವವರೆಗೂ ಹುಡುಗಿ ಯಾರು ಎಂಬುದು ಯಾರಿಗೂ ತಿಳಿಯದಂತೆ ರಹಸ್ಯ ಕಾಪಾಡುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಮದುವೆ ಅಥವಾ ಎಂಗೇಜ್​ಮೆಂಟ್​ ಬಗ್ಗೆ ಸಂಸದೆ ಸುಮಲತಾ ಅಂಬರೀಷ್​ ಆಗಲಿ ಅಥವಾ ಅಭಿಷೇಕ್​ ಆಗಲಿ ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ. ಅಡ್ಡಗೋಡೆ ದೀಪ ಇಟ್ಟಂತೆ ಮಾತನಾಡುತ್ತಿದ್ದಾರೆ.

ಸದ್ಯ ಅಭಿಷೇಕ್​ ಕಾಳಿ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಭಿಷೇಕ್​ ನಿಶ್ಚಿತಾರ್ಥ ನೆರವೇರಲಿದೆ ಎಂದು ಹೇಳಲಾಗುತ್ತಿದೆ.