ಸಿನಿವಾಣಿ

ಮುಕ್ತಾಯದ ಹಂತದಲ್ಲಿ ಪೃಥ್ವಿ-ಅಂಕಿತಾ ಹೊಸ ಫ್ಯಾಂಟಸಿ ಕಾಮಿಡಿ ಚಿತ್ರ

chetannadiger

ಬೆಂಗಳೂರು: ಪೃಥ್ವಿ ಅಂಬರ್ ಹಾಗೂ ಅಂಕಿತ ಅಮರ್ ಅಭಿನಯದಲ್ಲಿ ಮಯೂರ ರಾಘವೇಂದ್ರ, 'ಅಬ ಜಬ ದಬ' ಎಂಬ ಚಿತ್ರವನ್ನು ಕೆಲವು ತಿಂಗಳುಗಳ ಹಿಂದೆ ಶುರು ಮಾಡಿದ್ದು ನೆನಪಿರಬಹುದು. ಈಗ ಆ ಚಿತ್ರವು ಮುಕ್ತಾಯದ ಹಂತ ತಲುಪಿದೆ. ಇನ್ನು 10 ದಿನಗಳ ಚಿತ್ರೀಕರಣ ಮುಗಿದರೆ, ಚಿತ್ರ ಫಿನಿಶ್​.

ಈ ಮಧ್ಯೆ, 'ಅಬ ಜಬ ದಬ' ಚಿತ್ರದ ಚಿತ್ರೀಕರಣ ಹನುಮಂತನಗರದ ಕೆ.ಎಚ್​. ಕಲಾಸೌಧದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಚಿತ್ರತಂಡದವರು ಚಿತ್ರದ ಕುರಿತು ಹಲವು ವಿಷಯಗಳನ್ನು ಹಂಚಿಕೊಂಡರು.

ಮೊದಲು ಮಾತನಾಡಿದ ನಿರ್ದೇಶಕ ಮಯೂರ, 'ನಾನು 'ಕನ್ನಡ್ ಗೊತ್ತಿಲ್ಲ' ಚಿತ್ರದ ನಂತರ ನಾನು ರಚಿತಾ ರಾಮ್ ಅವರಿಗೊಂದು ಸಿನಿಮಾ ಮಾಡಬೇಕಿತ್ತು. ಅದು ದೊಡ್ಡ ಬಜೆಟ್​ನ ಚಿತ್ರವಾಗಿರುವುದರಿಂದ ಸ್ವಲ್ಪ ತಡವಾಯಿತು. ಅಷ್ಟರಲ್ಲಿ ಈ ಔಟ್ ಎಂಡ್ ಔಟ್ ಕಾಮಿಡಿಯಿರುವ ಈ ಚಿತ್ರದ ಕಥೆ ಸಿದ್ದಾವಾಯಿತು. ಕಥೆಗೆ ಒಳ್ಳೆಯ ಟೈಟಲ್ ಬೇಕಿತ್ತು. ಈ ಶೀರ್ಷಿಕೆ ಚೆನ್ನಾಗಿದೆ ಅಂತ ಅದೇ ಇಟ್ಟಿದ್ದೀನಿ. ಆನಂತರ ಸ್ನೇಹಿತ ಅನಂತ ಕೃಷ್ಣ ನಿರ್ಮಾಣಕ್ಕೆ ಮುಂದಾದರು. ಪೃಥ್ವಿ ಅಂಬರ್ ಮತ್ತು ಅಂಕಿತಾ ನಾಯಕ-ನಾಯಕಿಯಾಗಿ ಚಿತ್ರತಂಡಕ್ಕೆ ಸೇರ್ಪಡೆಯಾದರು. ಅಚ್ಯುತ್​ ಕುಮಾರ್, ಸುಧಾರಾಣಿ, ಹಿರಿಯ ನಟಿ ಊರ್ವಶಿ, ಬಾಬು ಹಿರಣ್ಣಯ್ಯ, ಸಂಗೀತಾ ಭಟ್ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡರು. ಗಿರಿಧರ್ ದಿವಾನ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಎಲ್ಲರ ಸಹಕಾರದಿಂದ 'ಅಬ ಜಬ ದಬ' ಒಳ್ಳೆಯ ಚಿತ್ರವಾಗಿ ಹೊರಹೊಮ್ಮಲಿದೆ' ಎಂದರು.

ನಾಯಕ ಪೃಥ್ವಿಗೆ ಮಯೂರ ರಾಘವೇಂದ್ರ ಹೇಳಿದ ಕಥೆ ಇಷ್ಟವಾಯಿತಂತೆ. 'ಇದು ಬರೀ ಕಾಮಿಡಿ ಸಿನಿಮಾ ಅಲ್ಲ. ಫ್ಯಾಂಟಸಿ ಕಾಮಿಡಿ ಸಿನಿಮಾ. ಚಿತ್ರದ ಹಾಡುಗಳು ಚೆನ್ನಾಗಿದೆ. ಊರ್ವಶಿ ಅವರಂತಹ ಹಿರಿಯ ನಟರೊಂದಿಗೆ ನಟಿಸಿದ್ದು ಸಂತೋಷವಾಗಿದೆ. ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ನನ್ನ ಪಾತ್ರ ಕೂಡ ಸುಂದರವಾಗಿದೆ' ಎಂದರು ನಾಯಕ ಪೃಥ್ವಿ.

ಇದು ನಾನು ಬಣ್ಣ ಹಚ್ಚಿದ ಮೊದಲ ಚಿತ್ರ ಎಂದೇ ಮಾತು ಶುರು ಮಾಡುವ ಅಂಕಿತಾ, 'ಈ ಚಿತ್ರದಲ್ಲಿ ಪ್ರಿಯ ನನ್ನ ಪಾತ್ರದ ಹೆಸರು. ನಾನು ಈ ಚಿತ್ರದಲ್ಲಿ ಗಾಯಕಿ. ಎಸ್.ಪಿ.ಬಿ ಅವರ ಅಭಿಮಾನಿ' ಎಂದು ತಮ್ಮ ಪಾತ್ರದ ಬಗ್ಗೆ ನಾಯಕಿ ಅಂಕಿತ ಅಮರ್ ಮಾಹಿತಿ ನೀಡಿದರು.

ಮೂರು ವರ್ಷಗಳ ನಂತರ ನಟಿಸುತ್ತಿರುವ ಸಂಗೀತಾ ಈ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. 'ಮೂರು ವರ್ಷಗಳ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಸುನಂದಾ ಕಾಂಬ್ರೇಕರ್ ನನ್ನ ಪಾತ್ರದ ಹೆಸರು. ವಿಶೇಷ ಪಾತ್ರ ಅಂತ ಹೇಳಬಹುದು' ಎಂದರು.