ಸಿನಿವಾಣಿ

ಬಾಲಿವುಡ್​ಗೆ ಆಮೀರ್ ಖಾನ್​ ಪುತ್ರ ‘ಮಹಾರಾಜ’ನಾಗಿ ಆಗಮನ!

ಮುಂಬೈ: ಬಾಲಿವುಡ್​ನ ಮಿಸ್ಟರ್ ಫರ್ಫೆಕ್ಷನಿಸ್ಟ್ ಆಮೀರ್ ಖಾನ್​ ಸದ್ಯ ಲಾಲ್​ ಸಿಂಗ್​ ಛಡ್ಡಾ ಚಿತ್ರದ ಶೂಟಿಂಗ್​ನಲ್ಲಿ ಬಿಜಿಯಾಗಿದ್ದಾರೆ. ಹೀಗಿರುವಾಗಲೇ ಇದೀಗ ಆಮೀರ್​ ಪುತ್ರನ ಸಿನಿಮಾ ವಿಚಾರವೊಂದು ಸದ್ದು ಮಾಡುತ್ತಿದೆ. ಅಂದರೆ, ಜುನೈದ್​ ಖಾನ್​ ಬಾಲಿವುಡ್​ಗೆ ಆಗಮಿಸುವ ತಯಾರಿ ನಡೆಸಿದ್ದಾರೆ.

ಈಗಾಗಲೇ ವಿದೇಶದಲ್ಲಿ ನಟನೆಯ ಪಾಠ ಕಲಿತು ಬಂದಿರುವ ಜುನೈದ್​, ಅವರ ಚಿತ್ರಕ್ಕೆ ಮಹಾರಾಜ ಎಂಬ ಶೀರ್ಷಿಕೆಯನ್ನು ಅಂತಿಮ ಮಾಡಲಾಗಿದೆಯಂತೆ. ರಾಣಿ ಮುಖರ್ಜಿ ಅವರ ಹಿಚ್ಕಿ ಸಿನಿಮಾ ನಿರ್ದೇಶನ ಮಾಡಿದ್ದ ಸಿದ್ಧಾರ್ಥ್​ ಮಲ್ಹೋತ್ರಾ, ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಯಶ್​ ರಾಜ್ ಫಿಲಂಸ್​ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ.

ಬಂಟಿ ಔರ್ ಬಬ್ಲಿ 2 ಸಿನಿಮಾದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದ ನಟಿ ಶಾರ್ವರಿ ವಾಗ್ ಈ ಸಿನಿಮಾದಲ್ಲಿ ಜುನೈದ್ ಖಾನ್​ಗೆ ನಾಯಕಿಯಾಗಿ ನಟಿಸಲಿದ್ದಾರೆ. ಅದೇ ರೀತಿ ಇದೇ ಮಹಾರಾಜ ಬಳಗಕ್ಕೀಗ ನಟ ಜೈದೀಪ್ ಅಹಲ್ವಾತ್​ ಸಹ ಎಂಟ್ರಿಕೊಟ್ಟಿದ್ದಾರೆ.

ಈ ಮೊದಲು ದಕ್ಷಿಣ ಭಾರತದ ಹಿಟ್ ಸಿನಿಮಾವೊಂದರ ರಿಮೇಕ್​ ಇದಾಗಿರಲಿದೆ ಎಂಬ ಸುದ್ದಿ ಈ ಹಿಂದೆ ಹರಿದಾಡಿತ್ತು. ಇದೀಗ, 1892ರಲ್ಲಿ ನಡೆದ ಮಹಾರಾಜ ಲೈಬಲ್ ಕೇಸ್​ಗೆ ಸಂಬಂಧಪಟ್ಟದ್ದಾಗಿರಲಿದೆಯಂತೆ. ಮೌಜಿ ಪಾತ್ರದಲ್ಲಿ ಜುನೈದ್ ಕಾಣಿಸಿಕೊಳ್ಳಲಿದ್ದು, 2021ರ ಫೆಬ್ರವರಿಯಲ್ಲಿ ಸಿನಿಮಾ ಸೆಟ್ಟೇರಲಿದೆ. (ಏಜೆನ್ಸೀಸ್​)