ಸಿನಿವಾಣಿ

ನಾನೂ ಕೆಜಿಎಫ್ ಫ್ಯಾನ್!; ಯಶ್ ಜತೆ ಮಾತನಾಡಿದ ಆಮೀರ್

ಬೆಂಗಳೂರು: ಆಮೀರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಛಡ್ಡಾ’ ಮತ್ತು ಯಶ್ ಅಭಿನಯದ ‘ಕೆಜಿಎಫ್ - ಚಾಪ್ಟರ್ 2’ ಚಿತ್ರಗಳು ಏಪ್ರಿಲ್ 14ರಂದು ಒಟ್ಟಿಗೆ ಬಿಡುಗಡೆಯಾಗುವ ಮೂಲಕ ಬಾಕ್ಸ್ ಆಫೀಸ್​ನಲ್ಲಿ ಕ್ಲಾಶ್ ಆಗುತ್ತಿರುವ ವಿಷಯ ಹೊಸದಲ್ಲ. ಹೊಸ ವಿಷಯವೇನೆಂದರೆ, ಖುದ್ದು ಆಮೀರ್ ಖಾನ್, ಯಶ್​ಗೆ ಫೋನ್ ಮಾಡಿ ಅದೇ ದಿನ ತಮ್ಮ ಚಿತ್ರವನ್ನು ಬಿಡುಗಡೆ ಮಾಡಬೇಕಾದ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರಂತೆ. ಅಷ್ಟೇ ಅಲ್ಲ, ‘ಕೆಜಿಎಫ್ 2’ ಚಿತ್ರವನ್ನು ಮೊದಲ ದಿನ ನೋಡುವುದರ ಜತೆಗೆ, ಆ ಚಿತ್ರದ ಪ್ರಮೋಷನ್ ಮಾಡುವುದಾಗಿಯೂ ಹೇಳಿದ್ದಾರಂತೆ. ಈ ವಿಷಯವನ್ನು ಸ್ವತಃ ಆಮೀರ್ ಖಾನ್ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

‘ಬೇರೆ ದೊಡ್ಡ ಚಿತ್ರಗಳ ತಂಡದವರು ನಿಗದಿಪಡಿಸಿದ ದಿನಾಂಕವನ್ನು ಕಿತ್ತುಕೊಳ್ಳುವುದಕ್ಕೆ ನನಗಿಷ್ಟವಿಲ್ಲ. ಆದರೆ, ಏ.14 ನನ್ನ ಚಿತ್ರ ಬಿಡುಗಡೆ ಮಾಡುವುದಕ್ಕೆ ಸೂಕ್ತ ಸಮಯ ಎಂದೆನಿಸಿತು. ‘ಲಾಲ್ ಸಿಂಗ್ ಛಡ್ಡಾ’ದಲ್ಲಿ ನಾನು ಮೊದಲ ಬಾರಿಗೆ ಸಿಖ್ ಪಾತ್ರ ಮಾಡುತ್ತಿದ್ದೇನೆ. ಅಂದು ಬೈಸಾಕಿಯ ದಿನವಾದ್ದರಿಂದ, ಚಿತ್ರ ಬಿಡುಗಡೆ ಮಾಡುವುದಕ್ಕೆ ಒಳ್ಳೆಯ ಸಮಯ ಎಂದೆನಿಸಿತು. ಹಾಗಾಗಿ, ಅದೇ ದಿನ ಬಿಡುಗಡೆ ಮಾಡುವುದಕ್ಕೆ ತೀರ್ವನಿಸಿದೆ’ ಎಂದು ಆಮೀರ್ ತಿಳಿಸಿದ್ದಾರೆ.

ಮೊದಲ ದಿನವೇ ಕೆಜಿಎಫ್ ನೋಡ್ತಿನಿ!: ‘ವಿಜಯ್ ಕುಮಾರ್ ಕಿರಗಂದೂರು, ಯಶ್ ಮತ್ತು ಪ್ರಶಾಂತ್ ನೀಲ್​ಗೆ ನನ್ನ ಸಂಕಟ ಹೇಳಿಕೊಂಡೆ. ಯಶ್ ಜತೆಗೆ ಈ ವಿಷಯವಾಗಿ ಸುದೀರ್ಘವಾಗಿ ಮಾತನಾಡಿದ್ದೇನೆ. ‘ಕೆಜಿಎಫ್’ ಬ್ರಾಂಡ್​ಗೆ ಅದರದ್ದೇ ಆದ ಅಭಿಮಾನಿ ಬಳಗವಿರುವುದರಿಂದ, ಸೀಕ್ವೆಲ್​ಗೆ ಯಾವುದೇ ತೊಂದರೆ ಆಗುವುದಿಲ್ಲ. ಮೇಲಾಗಿ ಅವರದ್ದೊಂದು ಆಕ್ಷನ್ ಚಿತ್ರ. ನಮ್ಮದು ಫ್ಯಾಮಿಲಿ ಚಿತ್ರ. ಹಾಗಾಗಿ, ಎರಡೂ ಚಿತ್ರಗಳ ಕಲೆಕ್ಷನ್​ಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂಬ ನಂಬಿಕೆ ನನ್ನದು. ‘ಕೆಜಿಎಫ್ 2’ ಚಿತ್ರವನ್ನು ಪ್ರಚಾರ ಮಾಡುವುದಕ್ಕೆ ನಾನು ಸಿದ್ಧ ಎಂದು ಯಶ್​ಗೆ ಹೇಳಿದ್ದೇನೆ. ಅಷ್ಟೇ ಅಲ್ಲ, ನಾನು ಸಹ ‘ಕೆಜಿಎಫ್’ ಚಿತ್ರದ ಫ್ಯಾನ್. ಚಿತ್ರವನ್ನು ಮೊದಲ ದಿನವೇ ನೋಡುತ್ತೇನೆ ಎಂದು ಹೇಳಿದ್ದೇನೆ’ ಎಂದು ಆಮೀರ್ ಖಾನ್ ಈ ಸಂದರ್ಶನದಲ್ಲಿ ಹೇಳಿದ್ದಾರೆ. -ಏಜೆನ್ಸೀಸ್