ಸಿನಿವಾಣಿ

ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿ ಸ್ಫೋಟಕ ತಿರುವು: ಮತ್ತೆ ಆರಂಭವಾಯ್ತು ಬಿಸಿ ಬಿಸಿ ಚರ್ಚೆ​! Sushant Singh Rajput

Sushant Singh Rajput : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಅನಿರೀಕ್ಷಿತ ತಿರುವು ಸಿಕ್ಕಿದೆ. ಸುಶಾಂತ್ ಸಾವಿನಲ್ಲಿ ಯಾವುದೇ ಪಿತೂರಿ ಇಲ್ಲ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಪ್ರಕರಣವನ್ನು ಮುಕ್ತಾಯಗೊಳಿಸಿದೆ. ಅದೇ ಸಮಯದಲ್ಲಿ, ನಟಿ ರಿಯಾ ಚಕ್ರವರ್ತಿಗೂ ಸುಶಾಂತ್ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಹೀಗಾಗಿ ಸುಶಾಂತ್ ಸಾವಿನ ಬಗ್ಗೆ ಮತ್ತೊಮ್ಮೆ ಬಿಸಿ ಬಿಸಿ ಚರ್ಚೆ ಶುರುವಾಗಿದೆ.

ನಟ ಸುಶಾಂತ್ ಸಾವಿನ ಬಗ್ಗೆ ಸುಮಾರು ಐದು ವರ್ಷಗಳ ಕಾಲ ತನಿಖೆ ನಡೆಸಿದ್ದ ಸಿಬಿಐ, ಒಂದು ಸಂಚಲನಾತ್ಮಕ ವರದಿಯನ್ನು ನೀಡಿದೆ. ಸುಶಾಂತ್ ಸಾವಿನ ಸಂಬಂಧ ದಾಖಲಾಗಿದ್ದ ಎರಡು ಪ್ರಕರಣಗಳನ್ನು ಸಿಬಿಐ ಇತ್ತೀಚೆಗೆ ಮುಕ್ತಾಯಗೊಳಿಸಿದ್ದು, ಶನಿವಾರ (ಮಾರ್ಚ್ 22) ಮುಂಬೈ ನ್ಯಾಯಾಲಯದಲ್ಲಿ ಅಂತಿಮ ವರದಿಯನ್ನು ಸಲ್ಲಿಸಿದೆ.

ಸುಶಾಂತ್ ಸಾವಿನಲ್ಲಿ ಯಾವುದೇ ಪಿತೂರಿ ಇಲ್ಲ ಎಂದು ಸಿಬಿಐ ವರದಿ ಹೇಳಿದೆ. ಸುಶಾಂತ್ ಸಾವಿನ ಹಿಂದೆ ಪಿತೂರಿ ಇದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. ನಟಿ ರಿಯಾ ಚಕ್ರವರ್ತಿಗೂ ಸುಶಾಂತ್ ಸಾವಿನೊಂದಿಗೆ ಯಾವುದೇ ಸಂಬಂಧವಿಲ್ಲ ಎನ್ನುವ ಮೂಲಕ ರಿಯಾಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ. ಅಲ್ಲದೆ, ಸುಶಾಂತ್ ಅವರ ಕುಟುಂಬ ಸದಸ್ಯರ ವಿರುದ್ಧ ರಿಯಾ ಚಕ್ರವರ್ತಿ ದಾಖಲಿಸಿದ್ದ ಪ್ರಕರಣವನ್ನು ಸಿಬಿಐ ಮುಕ್ತಾಯಗೊಳಿಸಿದೆ. ಇದರ ಬೆನ್ನಲ್ಲೇ ಸುಶಾಂತ್ ಸಾವಿನ ಕುರಿತು ಚರ್ಚೆ ಮತ್ತೆ ಆರಂಭವಾಗಿದೆ. ಮುಂಬೈ ನ್ಯಾಯಾಲಯ ಮತ್ತು ಸುಶಾಂತ್ ಅವರ ಕುಟುಂಬ ಸದಸ್ಯರು ಸಿಬಿಐ ವರದಿಯ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಅಂದಹಾಗೆ ನಟ ಸುಶಾಂತ್ ಸಿಂಗ್, 2020, ಜೂನ್ 14ರಂದು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ನಿಧನರಾದರು. ಯಶಸ್ವಿ ಚಿತ್ರಗಳನ್ನು ಮಾಡುವ ಮೂಲಕ ಸ್ಟಾರ್ ಹೀರೋ ಆಗಿದ್ದ ಸಮಯದಲ್ಲೇ ಸುಶಾಂತ್​ ಅವರ ಸಾವು ಬಾಲಿವುಡ್​ನಲ್ಲಿ ಭಾರಿ ಸಂಚಲನ ಮೂಡಿಸಿತು. ಸುಶಾಂತ್ ಸಾವಿನ ಹಿಂದೆ ಪಿತೂರಿ ಇದೆ ಎಂದು ಆರೋಪಗಳು ಕೇಳಿಬಂದವು. ಈ ಹಿನ್ನೆಲೆಯಲ್ಲಿ ನಟಿ ರಿಯಾ ಚಕ್ರವರ್ತಿ ಮತ್ತು ಇತರ ಕೆಲವು ಜನರ ಮೇಲೆ ಸುಶಾಂತ್ ಅವರ ಕುಟುಂಬ ಸದಸ್ಯರು ಆರೋಪ ಹೊರಿಸಿದ್ದರು.

ಸುಶಾಂತ್ ಅವರನ್ನು ಆತ್ಮಹತ್ಯೆಗೆ ಪ್ರಚೋದಿಸಲಾಗಿದೆ, ಆರ್ಥಿಕ ವಂಚನೆಯನ್ನೂ ಎಸಗಲಾಗಿದೆ ಮತ್ತು ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಅವರ ತಂದೆ ಕೆ.ಕೆ. ಸಿಂಗ್ ಆರೋಪ ಮಾಡಿದರು. ಅಲ್ಲದೆ, ಈ ಸಂಬಂಧ ಪಟನಾದಲ್ಲಿ ಪೊಲೀಸರಿಗೆ ದೂರು ಸಹ ನೀಡಿದರು. ಅವರ ದೂರಿನ ಆಧಾರದ ಮೇಲೆ, ಪೊಲೀಸರು ರಿಯಾ ಚಕ್ರವರ್ತಿ ಮತ್ತು ಇತರ ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ನಟಿ ರಿಯಾ ಚಕ್ರವರ್ತಿ ಮುಂಬೈ ಪೊಲೀಸರಿಗೆ ಸುಶಾಂತ್ ಸಿಂಗ್ ಅವರ ಸಹೋದರಿಯರ ವಿರುದ್ಧ ದೂರು ದಾಖಲಿಸಿದ್ದಾರೆ. ಸುಶಾಂತ್ ಅವರಿಗೆ ನಕಲಿ ವೈದ್ಯಕೀಯ ಪ್ರಿಸ್ಕ್ರಿಪ್ಷನ್ ನೀಡಿದ್ದರಿಂದ ಅವರು ಸಾವಿಗೀಡಾಗಿದ್ದಾರೆ ಎಂದು ರಿಯಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಸುಶಾಂತ್ ಸಿಂಗ್ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದ ನಂತರ ಅಂದಿನ ಮಹಾರಾಷ್ಟ್ರ ಸರ್ಕಾರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತು. ಈ ಸಂಬಂಧ ತನಿಖೆಗಿಳಿದ ಸಿಬಿಐ, ಸುಶಾಂತ್ ಸಾವಿಗೆ ಕಾರಣಗಳ ಬಗ್ಗೆ ತನಿಖೆ ಆರಂಭಿಸಿತು. ಸುಶಾಂತ್ ತಂದೆ ಹಾಗೂ ನಟಿ ರಿಯಾ ಚಕ್ರವರ್ತಿ ದಾಖಲಿಸಿದ್ದ ಪ್ರಕರಣಗಳ ತನಿಖೆಯನ್ನು ಕೂಲಂಕಷ ತನಿಖೆ ನಡೆಸಿದ ನಂತರ ಪೂರ್ಣಗೊಳಿಸಿತು. ಸುಶಾಂತ್ ಪ್ರಕರಣವನ್ನು ಸುಮಾರು ಐದು ವರ್ಷಗಳ ಕಾಲ ತನಿಖೆ ನಡೆಸಿದ ಸಿಬಿಐ, ಈ ಬಗ್ಗೆ ಮುಂಬೈ ನ್ಯಾಯಾಲಯದಲ್ಲಿ ಸ್ಪಷ್ಟ ವರದಿಯನ್ನು ಸಲ್ಲಿಸಿತು. ಸುಶಾಂತ್ ಸಾವಿನ ಹಿಂದೆ ಯಾವುದೇ ಪಿತೂರಿ ಇಲ್ಲ ಎಂದು ಸಿಬಿಐ ತೀರ್ಮಾನಿಸಿದೆ. (ಏಜೆನ್ಸೀಸ್​)