ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಒಂದು ನೈಜ ಘಟನೆಯನ್ನಾಧರಿಸಿ ತಯಾರಾಗಿರುವ ಚಿತ್ರ ರಾಘವೇಂದ್ರ ರಾಜಕುಮಾರ್ ಮತ್ತು ಶ್ರುತಿ ಅಭಿನಯದ '13'. ಈಗ ಚಿತ್ರ ಸಂಪೂರ್ಣವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸದ್ಯದಲ್ಲೇ ಬಿಡುಗಡೆಯೂ ಆಗಲಿದೆ.
ಇದನ್ನೂ ಓದಿ: ‘ಮೊದಲ ಮಳೆ’ ಸುರಿಸಲು ಹೊರಟ ನಾಯಕನಿಗೆ 9 ನಾಯಕಿಯರು!
ಈ ಹಿಂದೆ 'ಪಲ್ಲಕ್ಕಿ', 'ಅಮೃತವಾಹಿನಿ'ಯಂಥ ಚಿತ್ರಗಳನ್ನು ನಿರ್ದೇಶಿಸಿರುವ ಕೆ.ನರೇಂದ್ರಬಾಬು ಅವರ ನಿರ್ದೇಶನದಲ್ಲಿ '13' ಚಿತ್ರ ಮೂಡಿಬಂದಿದೆ. ಈ ಚಿತ್ರದ ಕುರಿತು ಮಾತನಾಡುವ ಅವರು, 'ರಾಘವೇಂದ್ರ ರಾಜ್‌ಕುಮಾರ್ ಗುಜರಿ ಅಂಗಡಿ ಮಾಲೀಕ ಮೋಹನ್ ಕುಮಾರ್ ಹಾಗೂ ಟೀ ಅಂಗಡಿ ನಡೆಸುವ ಸಾಯಿರಾಬಾನು ಎಂಬ ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ಶ್ರುತಿ ನಟಿಸಿದ್ದಾರೆ. ಅಂತರ್ಜಾತೀಯ ಪ್ರೇಮ ಕಥೆ ಇದಾಗಿದ್ದು, ಗಂಡ- ಹೆಂಡತಿ ಅಂದರೆ ಹೀಗಿರಬೇಕು ಎನ್ನುವಂತಿದ್ದ ದಂಪತಿ ತಮ್ಮದಲ್ಲದ ತಪ್ಪಿಗೆ ಇಡೀ ಜೀವನ ಯಾವರೀತಿ ಕಷ್ಟಪಡುತ್ತಾರೆ ಎಂಬುದನ್ನು ಹೇಳುವ ಮತ್ತು ಮನುಷ್ಯ ಸಂಬಂಧಗಳನ್ನು ಬೆಸೆಯುವ ಕಥೆಯಿದು' ಎನ್ನುತ್ತಾರೆ.
ಮುಹೂರ್ತದ ಸಂದರ್ಭದಲ್ಲಿ ಮೂರು ತಿಂಗಳಲ್ಲಿ ಚಿತ್ರದ ಮೊದಲ ಪ್ರತಿ ಹೊರತರುತ್ತೇನೆ ಎಂದು ಅವರು ಹೇಳಿದ್ದರು. ಆದರೆ, ಸಾಕಷ್ಟು ಅಡೆತಡೆಗಳುಂಟಾಗಿ ಆರು ತಿಂಗಳಾಗಿವೆ. 'ನನ್ನ ತಂಡ ಜೊತೆ ನಿಂತಿದ್ದರಿಂದ ಇಲ್ಲಿಯವರೆಗೆ ಬಂದಿದ್ದೇನೆ. ರಾಘಣ್ಣನವರನ್ನು ಈವರೆಗೆ ನೋಡಿದ್ದಕ್ಕಿಂತ ಬೇರೆಯದೇ ರೀತಿ ನೋಡಬಹುದು' ಎನ್ನುತ್ತಾರೆ.
'13' ಎಂಬ ಟೈಟಲ್ ಕೇಳಿದಾಗ ಇದೇನಿರಬಹುದು ಎಂಬ ಪ್ರಶ್ನೆ ರಾಘವೇಂದ್ರ ರಾಜಕುಮಾರ್ ಅವರಿಗೆ ಮೂಡಿತ್ತಂತೆ. ಆದರೆ, ಕಥೆಗೆ ಶೀರ್ಷಿಕೆಯು ಪೂರಕವಾಗಿದೆ ಎನ್ನುತ್ತಾರೆ. ಇನ್ನು, ಚಿತ್ರದ ಹೆಸರು ನೆಗೆಟಿವ್ ಆದರೂ, ಸಿನಿಮಾ ಪೂರ್ತಿ ಪಾಸಿಟಿವ್ ಆಗಿದೆ ಎನ್ನುತ್ತಾರೆ ಶ್ರುತಿ. ಇದೇ ಮೊದಲ ಬಾರಿಗೆ ಅವರು ಮುಸ್ಲಿಂ ಹೆಣ್ಣು ಮಗಳ ಪಾತ್ರ ಮಾಡಿದ್ದಾರಂತೆ. ನಿರ್ದೇಶಕರು ಈ ಪಾತ್ರದ ಬಗ್ಗೆ ಹೇಳಿದಾಗ ತುಂಬಾ ಹೆದರಿದ್ದರಂತೆ ಶ್ರುತಿ. 'ನಾನು ಮಾಡುವ ಪಾತ್ರ ಯಾರಿಗೂ ನೋವುಂಟು ಮಾಡಬಾರದು ಎಂಬುದು ನನ್ನ ಉದ್ದೇಶ. ಸ್ವಲ್ಪ ಲೋಪದೋಷ ಆದರೂ ತಂಡಕ್ಕೆ ಅಲ್ಲದೆ ವೈಯಕ್ತಿಕವಾಗಿ ನಮಗೂ ತೊಂದರೆ ಆಗುತ್ತದೆ. ಆದರೆ, ನನ್ನ ಪಾತ್ರವನ್ನು ಬಹಳ ಸೂಕ್ಷ್ಮವಾಗಿ ಸೆರೆಹಿಡಿಯಲಾಗಿದೆ' ಎನ್ನುತ್ತಾರೆ ಶ್ರುತಿ.
ಇದನ್ನೂ ಓದಿ: ಬಘೀರ ಸಿನಿಮಾ ಶೂಟಿಂಗ್ ವೇಳೆ ರೋರಿಂಗ್ ಸ್ಟಾರ್ ಶ್ರೀ ಮುರಳಿ ಕಾಲಿಗೆ ಗಾಯ; ಶೀಘ್ರದಲ್ಲೇ ಶಸ್ತ್ರಚಿಕಿತ್ಸೆ
ಪ್ರಮೋದ್ ಶೆಟ್ಟಿ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಮಂಜುನಾಥ್ ನಾಯ್ಡು ಅವರ ಛಾಯಾಗ್ರಹಣ ಹಾಗೂ ಸೋಹನ್ ಬಾಬು ಅವರ ಸಂಗೀತ ಈ ಚಿತ್ರಕ್ಕಿದೆ. ಈ ಚಿತ್ರವನ್ನು ಸಂಪತ್ ಕುಮಾರ್, ಮಂಜುನಾಥ್, ಮಂಜುನಾಥಗೌಡ ಸೇರಿ ಯುವಿ ಪ್ರೊಡಕ್ಷನ್ಸ್ನಡಿ ನಿರ್ಮಿಸಿದ್ದಾರೆ.