ನಟಿ ಯಾಮಿ ಗೌತಮ್ 
ಬಾಲಿವುಡ್

ಪಾತ್ರಕ್ಕಾಗಿ ಕುರಾನ್​ ಓದಿದ್ದ ಯಾಮಿ ಗೌತಮ್​: ಹಕ್​ ಸಿನಿಮಾದ ತೆರೆ ಹಿಂದಿನ ಕತೆ ಬಿಚ್ಚಿಟ್ಟ ನಿರ್ದೇಶಕ ವರ್ಮಾ! Yami Gautam

ಪ್ರಮುಖ ಮುಖ್ಯಾಂಶಗಳು

  • ಸಿನಿಮಾಗಾಗಿ ಕುರಾನ್​ ಒದಿದ್ದ ನಟಿ ಯಾಮಿ ಗೌತಮ್
  • ಸಂಶೋಧನೆಯೇ ನಮ್ಮ ಹಕ್​ ಸಿನಿಮಾದ ಬೆನ್ನೆಲುಬು ಎಂದ ನಿರ್ದೇಶಕ
  • ಬಾಕ್ಸ್ ಆಫೀಸ್‌ನಲ್ಲಿ ಲೂಸರ್​; ನೆಟ್‌ಫ್ಲಿಕ್ಸ್‌ನಲ್ಲಿ ಟಾಪರ್​!
ಮುಂಬೈ: ಬಾಲಿವುಡ್‌ನ ಪ್ರತಿಭಾವಂತ ನಟಿ ಯಾಮಿ ಗೌತಮ್ (Yami Gautam) ತಮ್ಮ ಅಭಿನಯದ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ತೆರೆಕಂಡ ಅವರ ಹಕ್ (Haqq) ಚಿತ್ರದಲ್ಲಿನ ನಟನೆಗೆ ವಿಮರ್ಶಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಈ ಚಿತ್ರದ ಯಶಸ್ಸಿನ ಹಿಂದೆ ನಟಿಯ ಕಠಿಣ ಪರಿಶ್ರಮ ಮತ್ತು ಸಿನಿಮಾ ತಂಡದ ದೊಡ್ಡ ಸಂಶೋಧನೆಯೇ ಅಡಗಿದೆ ಎಂಬ ಸತ್ಯವನ್ನು ಈಗ ನಿರ್ದೇಶಕರು ಹಂಚಿಕೊಂಡಿದ್ದಾರೆ.

ಶಾಜಿಯಾ ಬಾನೋ ಪಾತ್ರಕ್ಕಾಗಿ ಕುರಾನ್ ಅಧ್ಯಯನ!

ಯಾಮಿ ಗೌತಮ್ ಈ ಸಿನಿಮಾದಲ್ಲಿ 'ಶಾಜಿಯಾ ಬಾನೋ' ಎಂಬ ಮುಸ್ಲಿಂ ಮಹಿಳೆಯ ಪಾತ್ರವನ್ನು ನಿರ್ವಹಿಸಿದ್ದರು. ಈ ಪಾತ್ರಕ್ಕೆ ನ್ಯಾಯ ಒದಗಿಸಲು ಯಾಮಿ ಎಷ್ಟರ ಮಟ್ಟಿಗೆ ತಯಾರಿ ನಡೆಸಿದ್ದರು ಎಂದರೆ, ಅವರು ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಕುರಾನ್ ಅನ್ನು ಕೂಡ ಓದಿದ್ದರು ಎಂದು ನಿರ್ದೇಶಕ ಸುಪರ್ಣ್ ವರ್ಮಾ ತಿಳಿಸಿದ್ದಾರೆ
ಇತ್ತೀಚೆಗೆ ಖಾಸಗಿ ವಾಹಿಸಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ ನಿರ್ದೇಶಕ ವರ್ಮಾ,ಯಾಮಿ ತನ್ನ ಪಾತ್ರವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ತುಂಬಾ ಸಮರ್ಪಣಾ ಮನೋಭಾವ ತೋರಿಸಿದ್ದಾರೆ. ಇಸ್ಲಾಮಿಕ್ ಕಾನೂನು ಮತ್ತು ಸಂಪ್ರದಾಯಗಳನ್ನು ಸರಿಯಾಗಿ ತಿಳಿದುಕೊಳ್ಳಲು ನಾವು ಸುಮಾರು ಒಂದೂವರೆ ವರ್ಷಗಳ ಕಾಲ ಸಂಶೋಧನೆ ಮಾಡಿದ್ದೇವೆ. ಅದರ ಭಾಗವಾಗಿ ಯಾಮಿ ಕೂಡ ಕುರಾನ್ ಅನ್ನು ಓದಿದ್ದಾರೆ ಎಂದು ತಿಳಿಸಿದ್ದಾರೆ.

ಸಂಶೋಧನೆಯೇ ಈ ಚಿತ್ರದ ಬೆನ್ನೆಲುಬು

ಯಾವುದೇ ಒಂದು ಸೂಕ್ಷ್ಮ ವಿಷಯದ ಮೇಲೆ ಸಿನಿಮಾ ಮಾಡುವಾಗ ಸರಿಯಾದ ಮಾಹಿತಿ ಇರುವುದು ಅತಿ ಮುಖ್ಯ. ಈ ಬಗ್ಗೆ ಮಾತನಾಡಿದ ನಿರ್ದೇಶಕರು, ಇಂದಿನ ಕಾಲದಲ್ಲಿ ಎಲ್ಲರಿಗೂ ಮಾಹಿತಿ ಸಿಗುತ್ತದೆ, ಆದರೆ ಅದು ಯಾವಾಗಲೂ ಸರಿಯಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ, 'ಹಕ್' ಸಿನಿಮಾವು ನ್ಯಾಯದ ಧ್ವನಿಯಾಗಲಿ ಎಂಬುದು ನಮ್ಮ ಆಸೆಯಾಗಿತ್ತು. ನಮ್ಮ ಇಡೀ ತಂಡವು ಚಿತ್ರಕಥೆ ಸಿದ್ಧಪಡಿಸುವ ಮೊದಲು ವ್ಯಾಪಕವಾಗಿ ಸಂಶೋಧನೆ ನಡೆಸಿದ್ದೆವೆ ಎಂದಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ಲೂಸರ್​; ನೆಟ್‌ಫ್ಲಿಕ್ಸ್‌ನಲ್ಲಿ ಟಾಪರ್​!

ಇಮ್ರಾನ್ ಹಶ್ಮಿ ಮತ್ತು ಯಾಮಿ ಗೌತಮ್ ಕಾಂಬಿನೇಷನ್‌ನ ಈ ಚಿತ್ರವು ಲಿಂಗ ಸಮಾನತೆ ಮತ್ತು ನ್ಯಾಯದಂತಹ ಗಂಭೀರ ವಿಷಯಗಳನ್ನು ಒಳಗೊಂಡಿದೆ. ವಿಮರ್ಶಕರಿಂದ ಅತ್ಯುತ್ತಮ ಸಿನಿಮಾ ಎಂಬ ಸರ್ಟಿಫಿಕೇಟ್ ಪಡೆದರೂ, ಚಿತ್ರಮಂದಿರಗಳಲ್ಲಿ ಈ ಸಿನಿಮಾ ಅಷ್ಟೇನೂ ಕಮಾಲ್ ಮಾಡಲಿಲ್ಲ.
ವರದಿಗಳ ಪ್ರಕಾರ, ಸುಮಾರು 40 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಹಕ್ ಕೇವಲ 19.62 ಕೋಟಿ ರೂ.ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಆದರೆ, ಈಗ ಓಟಿಟಿ ಪ್ರಿಯರ ಮನಗೆಲ್ಲುವಲ್ಲಿ ಸಿನಿಮಾ ಯಶಸ್ವಿಯಾಗಿದೆ. ನೀವು ಒಂದು ವೇಳೆ ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ಮಿಸ್ ಮಾಡಿಕೊಂಡಿದ್ದರೆ, ಈಗಲೇ ನೆಟ್‌ಫ್ಲಿಕ್ಸ್ (Netflix) ನಲ್ಲಿ ವೀಕ್ಷಿಸಬಹುದಾಗಿದೆ,(ಏಜನ್ಸೀಸ್​).