ಪಾಪರಾಜಿಗಳ ವಿರುದ್ಧ ನಟಿ ನೇಹಾ ಧೂಪಿಯಾ ಕೆಂಡಾಮಂಡಲ 
ಬಾಲಿವುಡ್

ನಟಿಯರ ಹಿಂಬದಿಯನ್ನು ಏಕೆ ಜೂಮ್​ ಮಾಡ್ತಿರಿ? ಮೊದಲು ಆ ಬ್ಯಾಕ್-ಶಾಟ್ ವಿಡಿಯೋ ಮಾಡೋದು ನಿಲ್ಲಿಸಿ; ಪಾಪಾರಾಜಿಗಳ ವಿರುದ್ಧ ಕೆಂಡಕಾರಿದ ನೇಹಾ ಧೂಪಿಯಾ! Neha Dhupia on Paparazzi

ಪ್ರಮುಖ ಮುಖ್ಯಾಂಶಗಳು

  • ಪಾಪರಾಜಿಗಳ ವಿರುದ್ಧ ನಟಿ ನೇಹಾ ಧೂಪಿಯಾ ಕೆಂಡಾಮಂಡಲ
  • ನಟಿಯರ ಹಿಂಬದಿಯನ್ನು ಏಕೆ ಜೂಮ್​ ಮಾಡ್ತಿರಿ?
  • ಬ್ಯಾಕ್-ಶಾಟ್ ವಿಡಿಯೋ ಮಾಡೋದು ನಿಲ್ಲಿಸಿ: ನೇಹಾ ಧೂಪಿಯಾ
ಮುಂಬೈ: ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಪಾಪರಾಜಿಗಳ ನಡುವಿನ ಬಾಂಧವ್ಯ ಇತ್ತೀಚಿನ ದಿನಗಳಲ್ಲಿ ಸಖತ್ ಚರ್ಚೆಗೆ ಗ್ರಾಸವಾಗುತ್ತಿದೆ.
ಅದರಲ್ಲೂ ನಟಿಯರನ್ನು ಹಿಂಬದಿಯಿಂದ ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ವ್ಯೂಸ್ ಹಾಗೂ ಲೈಕ್ಸ್‌ಗಾಗಿ ಪೋಸ್ಟ್ ಮಾಡುವ ಬ್ಯಾಕ್-ಶಾಟ್ ಸಂಸ್ಕೃತಿಯ ವಿರುದ್ಧ ಈಗ ಮತ್ತೊಬ್ಬ ಬಾಲಿವುಡ್ ನಟಿ ನೇಹಾ ಧೂಪಿಯಾ (Neha Dhupia on Paparazzi) ಸಿಡಿದೆದ್ದಿದ್ದಾರೆ.
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನೇಹಾ, ಪಾಪಾರಾಜಿಗಳನ್ನು ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಅಸಲಿಗೆ ಅಲ್ಲಿ ನಡೆದಿದ್ದೇನು?

ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಟಿ ನೇಹಾ ಧೂಪಿಯಾ, ತಾನು ನಡೆಯುತ್ತಾ ಹೋಗುವಾಗ ಕೆಲವು ಕ್ಯಾಮೆರಾಮೆನ್‌ಗಳು ಬೇಕಂತಲೇ ತನ್ನ ಹಿಂದಿನಿಂದ ವಿಡಿಯೋ ರೆಕಾರ್ಡ್ ಮಾಡುತ್ತಿರುವುದನ್ನು ಗಮನಿಸಿದ್ದಾರೆ. ಇದರಿಂದ ತೀವ್ರ ಅಸಮಾಧಾನಗೊಂಡ ನಟಿ, ಅಲ್ಲಿಂದಲೇ ವಾಪಸ್ ಬಂದು ನೇರವಾಗಿ ಪಾಪರಾಜಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಿಮ್ಮಲ್ಲಿ ಇಂತಹ ಅಸಭ್ಯ ರೀತಿಯ ಬ್ಯಾಕ್‌ಶಾಟ್‌ಗಳನ್ನು ತಗೆಯುವವರು ಯಾರು? ಯಾರು ಆ ಕೆಲಸ ಮಾಡ್ತಿರೋದು? ಮೊದಲು ಇದನ್ನೆಲ್ಲಾ ಬಂದ್ ಮಾಡಿ!" ಎಂದು ಗರಂ ಆಗಿ ಕೇಳಿದ್ದಾರೆ. ಅಷ್ಟಕ್ಕೇ ನಿಲ್ಲಿಸದ ನಟಿ, ನನ್ನದಷ್ಟೇ ಅಲ್ಲ, ಬೇರೆ ಯಾವುದೇ ನಟಿಯರದ್ದೂ ಈ ತರಹ ವಿಡಿಯೋ ಮಾಡಬೇಡಿ. ಬ್ಯಾಗ್ ಹಿಡಿದುಕೊಂಡು, ಬುಕ್ ಹಿಡಿದುಕೊಂಡು, ರಿವರ್ಸ್ ವಾಕಿಂಗ್ ಮಾಡ್ತಾ ವಿಡಿಯೋ ತೆಗೆಯಬೇಡಿ ಅಂತ ಹೇಳಿ ಹೇಳಿ ಸಾಕಾಗಿದೆ. ಇನ್ಮೇಲೆ ಇದೆಲ್ಲಾ ನಡೆಯಲ್ಲ, ನಿಲ್ಲಿಸಿಬಿಡಿ ಎಂದು ಖಡಕ್ ಆಗಿ ವಾರ್ನಿಂಗ್ ನೀಡಿದ್ದಾರೆ.

ನೆಟ್ಟಿಗರ ಸಪೋರ್ಟ್!

ನೇಹಾ ಧೂಪಿಯಾ ಫೋಟೋಗ್ರಾಫರ್‌ಗಳಿಗೆ ಕ್ಲಾಸ್ ತಗೊಂಡ ಈ ವಿಡಿಯೋ ಹೊರಬೀಳುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಆದರೆ ಬಹುತೇಕ ಜನ ನೇಹಾ ಧೂಪಿಯಾ ಪರವಾಗಿಯೇ ಬ್ಯಾಟ್ ಬೀಸಿದ್ದಾರೆ. ನಟಿಯರಿಗೂ ಪ್ರೈವೆಸಿ ಇರುತ್ತದೆ, ಪ್ರತಿಯೊಂದಕ್ಕೂ ಒಂದು ಲಿಮಿಟ್ ಇರಬೇಕು.
ಹಿಂಬದಿಯಿಂದ ಜೂಮ್ ಮಾಡಿ ವಿಡಿಯೋ ಮಾಡುವುದು ನಿಜಕ್ಕೂ ಅಸಭ್ಯ ನಡವಳಿಕೆ. ನೇಹಾ ಧೂಪಿಯಾ ಸರಿಯಾಗಿಯೇ ಧ್ವನಿ ಎತ್ತಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು, ಸೆಲೆಬ್ರಿಟಿ ಆದ್ಮೇಲೆ ಇದೆಲ್ಲಾ ಕಾಮನ್, ಪ್ರಚಾರ ಬೇಕಾದಾಗ ಪಾಪರಾಜಿಗಳು ಬೇಕು, ಈಗ ಬೇಡವೇ? ಎಂದು ನಟಿಯ ಕಾಲೆಳೆದಿದ್ದಾರೆ.

ಇದು ಕೇವಲ ನೇಹಾ ಕಥೆಯಲ್ಲ!

ಬಾಲಿವುಡ್‌ನಲ್ಲಿ ನಟಿಯರ ಬ್ಯಾಕ್-ಶಾಟ್ ವಿಡಿಯೋಗಳ ವಿರುದ್ಧ ಧ್ವನಿ ಎತ್ತುತ್ತಿರುವುದು ಕೇವಲ ನೇಹಾ ಧೂಪಿಯಾ ಮಾತ್ರವಲ್ಲ. ಈ ಹಿಂದೆ ಜಾನ್ವಿ ಕಪೂರ್, ಮಾನುಷಿ ಛಿಲ್ಲರ್, ರಶ್ಮಿ ದೇಸಾಯಿ, ಶನಯಾ ಕಪೂರ್ ಮತ್ತು ಆಯೇಶಾ ಖಾನ್ ಸೇರಿದಂತೆ ಹಲವು ನಟಿಯರು ಪಾಪರಾಜಿಗಳ ಇಂತಹ ಅಗೌರವದ ಅಭ್ಯಾಸವನ್ನು ತೀವ್ರವಾಗಿ ವಿರೋಧಿಸಿದ್ದರು.
ಕೇವಲ ವ್ಯೂಸ್ ಮತ್ತು ಲೈಕ್ಸ್‌ಗಾಗಿ ನಟಿಯರ ದೇಹದ ಭಾಗಗಳನ್ನು ಜೂಮ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಇದಕ್ಕೆ ಬ್ರೇಕ್ ಬೀಳಬೇಕಿದೆ ಎಂಬುದು ಸದ್ಯ ಎಲ್ಲರ ಅಭಿಪ್ರಾಯವಾಗಿದೆ, (ಏಜನ್ಸೀಸ್​).