1998 ರಲ್ಲಿ ದಾಖಲಾಗಿದ್ದ ಕೃಷ್ಣಮೃಗ ಬೇಟೆ ಪ್ರಕರಣ
- 1998 ರಲ್ಲಿ ದಾಖಲಾಗಿದ್ದ ಕೃಷ್ಣಮೃಗ ಬೇಟೆ ಪ್ರಕರಣ
- ನಟ ಸಲ್ಮಾನ್ ಖಾನ್ ಮೇಲೆ ಕೇಳಿಬಂದಿದ್ದ ಆರೋಪ
- ಈ ಘಟನೆ ಆದರಿಸಿ ನಿರ್ಮಾಣವಾಗಿರುವ ಕಾಲಾ ಹಿರಣ್ ಸಿನಿಮಾ
ಮುಂಬೈ: ಬಾಲಿವುಡ್ನಲ್ಲಿ ಭಾಯ್ಜಾನ್, ಬ್ಯಾಡ್ಬಾಯ್ ಮೊದಲಾದ ಹೆಸರುಗಳಿಂದ ಖ್ಯಾತನಾಗಿರುವ ನಟನೆಂದರೆ ಅದು ಸಲ್ಮಾನ್ ಖಾನ್. ಸಲ್ಲುವಿನ ಒಂದು ಸಿನಿಮಾ ತೆರೆ ಮೇಲೆ ಬರುತ್ತದೆ ಎಂದರೆ ಸಾಕು ಅಭಿಮಾನಿಗಳು ಆ ಸಿನಿಮಾವನ್ನು ಯಶಸ್ವಿಯಾಗಿಸೇ ಬಿಡುತ್ತಿದ್ದ ಕಾಲವೊಂದಿತ್ತು.
ಇತ್ತೀಚಿನ ದಿನಗಳಲ್ಲಿ ಸಲ್ಮಾನ್ ನಟನೆಯನ್ನು ಸಹ ಕಡಿಮೆ ಮಾಡಿದ್ದು ಹಾಗೂ ಪ್ರೇಕ್ಷಕರು ಸಹ ಶಿಕ್ಷಿತರಾಗುತ್ತಿರುವ ಹಿನ್ನಲೆ ಸಲ್ಮಾನ್ ಖಾನ್ಗೆ ಮೊದಲಿದ್ದ ಮಾರುಕಟ್ಟೆ ಬೆಲೆ ಇಗಿಲ್ಲ ಎಂದರೆ ಸುಳ್ಳಲ್ಲ.
ನಟ ಸಲ್ಮಾನ್ ತನ್ನ ಸಿನಿಮಾಗಳಿಗಿಂತ ವಿವಾದಗಳಿಂದಲೇ ಚಿತ್ರರಂಗ ಹಾಗೂ ಖಾಸಗಿ ಜೀವನದಲ್ಲಿ ಖ್ಯಾತಿಗಳಿಸಿದವರಾಗಿದ್ದಾರೆ. ಸಲ್ಲು ಜೀವನದಲ್ಲಿ ಎಂದಿಗೂ ಮರೆಯದ ಘಟನೆ ಎಂದರೆ ಅದು ಕೃಷ್ಣ ಮೃಗ (Kala Hiran) ಬೇಟೆ ಪ್ರಕರಣ. ಈಗ ಈ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ಬಾಲಿವುಡ್ನಲ್ಲಿ ಒಂದು ಸಿನಿಮಾ ತಯಾರಾಗಲು ಹೊರಟಿದೆ ಎಂದರೆ ನೀವು ನಂಬಲೇ ಬೇಕು.
ಕಾಲಾ ಹಿರಣ್: ದಿ ಬ್ಯಾಟಲ್ ಫಾರ್ ಲೆಗಸಿ!
ಉದಯ್ಪುರ್ ಫೈಲ್ಸ್ ಎಂಬ ವಿವಾದಾತ್ಮಕ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ನಿರ್ಮಾಪಕ ಅಮಿತ್ ಜಾನಿ ಈಗ ಕಾಲಾ ಹಿರಣ್: ದಿ ಬ್ಯಾಟಲ್ ಫಾರ್ ಲೆಗಸಿ ಎಂಬ ಸಿನಿಮಾವನ್ನು ನಿರ್ಮಿಸುವುದಾಗಿ ಹೇಳಿದ್ದಾರೆ.
ಸದ್ಯ ಈ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಈ ಸಿನಿಮಾದ ಟೀಸರ್ ಜೂನ್ 20 ಕ್ಕೆ ಬಿಡುಗಡೆಯಾಗಲಿದೆ ಎಂದು ತಿಳಿಸಲಾಗಿದೆ. 1998 ರಲ್ಲಿ ನಡೆದಿದ್ದ ಕೃಷ್ಣ ಮೃಗ ಬೇಟೆ ಪ್ರಕರಣವನ್ನು ಆಧರಿಸಿ ಸಿನಿಮಾ ತಯಾರಾಗಿರುವುದು ಬಹುತೇಕ ಖಚಿತವಾಗಿದೆ.
ಬಿಡುಗಡೆಯಾಗಿರುವ ಪೋಸ್ಟರ್ನಲ್ಲಿ ವ್ಯಕ್ತಿಯೊಬ್ಬ ಸ್ನೈಪರ್ ರೈಫಲ್ ಹಿಡಿದುಕೊಂಡಿದ್ದು, ಹಿನ್ನಲೆಯಲ್ಲಿ ಕಾಡಿನ ದೃಶ್ಯವನ್ನು ನೋಡ ಬಹುದಾಗಿದೆ. ಈ ಕಾಲಾ ಹಿರಣ್ ಸಿನಿಮಾವನ್ನು ಭರತ್ಶ್ರೀನೇತ್ ನಿರ್ದೇಶಿಸಲಿದ್ದಾರೆ.
ಏನಿದು ಬ್ಲಾಕ್ ಬಗ್ ಪ್ರಕರಣ?
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಜೀವನದಲ್ಲಿ ಅತ್ಯಂತ ವಿವಾದಾತ್ಮಕ ಮತ್ತು ಸುದೀರ್ಘ ಕಾನೂನು ಹೋರಾಟಕ್ಕೆ ಕಾರಣವಾದ ಘಟನೆಯೆಂದರೆ ಅದು 1998ರ ಕೃಷ್ಣಮೃಗ ಬೇಟೆ ಪ್ರಕರಣ. 1998ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ರಾಜಸ್ಥಾನದ ಜೋಧ್‌ಪುರದಲ್ಲಿ ಹಮ್ ಸಾಥ್ ಸಾಥ್ ಹೈ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದಾಗ, ಸಲ್ಮಾನ್ ಖಾನ್ ಮತ್ತು ಅವರ ಸಹ ನಟರಾದ ಸೈಫ್ ಅಲಿ ಖಾನ್, ತಬು, ಸೋನಾಲಿ ಬೇಂದ್ರೆ ಹಾಗೂ ನೀಲಂ ಕಣ್ಗಾವಲು ಪ್ರದೇಶದಲ್ಲಿ ಕಾನೂನುಬಾಹಿರವಾಗಿ ಕೃಷ್ಣಮೃಗಗಳನ್ನು ಬೇಟೆಯಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ಕೃಷ್ಣಮೃಗಗಳನ್ನು ದೇವರೆಂದು ಪೂಜಿಸುವ ಮತ್ತು ವನ್ಯಜೀವಿ ರಕ್ಷಣೆಗೆ ಬದ್ಧವಾಗಿರುವ ಅಲ್ಲಿನ ಸ್ಥಳೀಯ ಬಿಷ್ಣೋಯ್ ಸಮುದಾಯದ ಜನರು ಈ ಬೇಟೆಯನ್ನು ಖಂಡಿಸಿ, ಸಲ್ಮಾನ್ ಖಾನ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಲ್ಮಾನ್ ಖಾನ್ ಅವರ ವಿರುದ್ಧ ಸುದೀರ್ಘ ತನಿಖೆ ನಡೆದು, ಅವರು ಹಲವು ಬಾರಿ ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಗಿ ಬಂತು.
ಸುದೀರ್ಘ 20 ವರ್ಷಗಳ ಕಾನೂನು ಪ್ರಕ್ರಿಯೆಯ ನಂತರ, 2018ರಲ್ಲಿ ಜೋಧ್‌ಪುರ ನ್ಯಾಯಾಲಯವು ಸಲ್ಮಾನ್ ಖಾನ್ ಅವರಿಗೆ 5 ವರ್ಷಗಳ ಜೈಲು ಶಿಕ್ಷೆ ಮತ್ತು 10,000 ರೂಪಾಯಿ ದಂಡ ವಿಧಿಸಿತು, ಆದರೆ ಅದೇ ಪ್ರಕರಣದಲ್ಲಿದ್ದ ಇತರ ಸಹ-ನಟರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಯಿತು.
ಸದ್ಯ ಸಲ್ಮಾನ್ ಖಾನ್ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ ಜಾಮೀನಿನ ಮೇಲೆ ಹೊರಗಿದ್ದರೂ, ಈ ಪ್ರಕರಣವು ಇಂದಿಗೂ ಬಿಷ್ಣೋಯ್ ಸಮುದಾಯದ ಕೋಪಕ್ಕೆ ಕಾರಣವಾಗಿದೆ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಸಲ್ಮಾನ್ ಖಾನ್ ಅವರಿಗೆ ಬರುತ್ತಿರುವ ಪ್ರಾಣ ಬೆದರಿಕೆಗಳಿಗೂ ಇದೇ 1998ರ ಕೃಷ್ಣಮೃಗ ಬೇಟೆಯೇ ಕಾರಣ ಎಂದು ಹೇಳಲಾಗುತ್ತದೆ, (ಏಜನ್ಸೀಸ್).