ಬಾಡಿ ಶೇಮಿಂಗ್ ಮಾಡುವವರಿಗೆ ಸ್ವರಾ ಭಾಸ್ಕರ್ ಖಡಕ್ ಆನ್ಸರ್!
- ನನ್ನ ದೇಹ ಗ್ಲಾಮರ್‌ಗೆ ಇರುವ ಹ್ಯಾಂಗರ್ ಅಲ್ಲ
- ನನ್ನ ದೇಹ ನನ್ನ ಆಯ್ಕೆ
- ಬಾಡಿ ಶೇಮಿಂಗ್ ಮಾಡುವವರಿಗೆ ಸ್ವರಾ ಭಾಸ್ಕರ್ ಖಡಕ್ ಆನ್ಸರ್!
ಮುಂಬೈ: ಬಾಲಿವುಡ್‌ನ ನೇರನುಡಿಯ ನಟಿ ಸ್ವರಾ ಭಾಸ್ಕರ್ (Swara Bhasker on Body Shaming) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸಿನಿಮಾದಿಂದಲ್ಲ, ಬದಲಾಗಿ ಹೆರಿಗೆಯ ನಂತರ ಮಹಿಳೆಯರ ದೇಹದ ಬಗ್ಗೆ ಸಮಾಜಕ್ಕಿರುವ ಅತಿರೇಕದ ನಿರೀಕ್ಷೆ ಮತ್ತು ಬಾಡಿ ಶೇಮಿಂಗ್ ವಿರುದ್ಧ ಅವರು ಸಿಡಿದೆದ್ದಿದ್ದಾರೆ.
2023 ರಲ್ಲಿ ಮಗಳು ರಾಬಿಯಾಳನ್ನು ಬರಮಾಡಿಕೊಂಡ ಸ್ವರಾ, ಅಂದಿನಿಂದ ಇಂದಿನವರೆಗೂ ತಮ್ಮ ತೂಕದ ಬಗ್ಗೆ ಟ್ರೋಲ್ ಮಾಡುತ್ತಿರುವವರಿಗೆ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ತಕ್ಕ ಶಾಸ್ತಿ ಮಾಡಿದ್ದಾರೆ.
ಟ್ರೋಲ್‌ಗಳಿಗೆ ಕಾರಣವಾಗಿದ್ದು ಒಂದು ಫೋಟೋ ಕೊಲಾಜ್!
ಇತ್ತೀಚೆಗೆ ಸ್ವರಾ ಅವರು 2018 ರ ತಮ್ಮ ಸ್ಲಿಮ್ ಫೋಟೋ ಮತ್ತು ಈಗ ಮಗು ರಾಬಿಯಾಳನ್ನು ಎತ್ತಿಕೊಂಡಿರುವ ಫೋಟೋವನ್ನು ಒಟ್ಟಿಗೆ ಸೇರಿಸಿ ಹಂಚಿಕೊಂಡಿದ್ದರು. ಇದನ್ನು ನೋಡಿದ ನೆಟ್ಟಿಗರು, ನೀವು ಎಲ್ಲಿಂದ ಎಲ್ಲಿಗೆ ಬಂದುಬಿಟ್ಟಿದ್ದೀರಿ? ಅಷ್ಟು ಒಳ್ಳೆ ನಟಿಯಾಗಿದ್ದವರು ಹೀಗಾದ್ರೆ ಹೇಗೆ? ಎಂದು ಕಮೆಂಟ್ ಮಾಡಿದ್ದರು. ಇಂತಹ ಬಾಡಿ ಶೇಮಿಂಗ್ ಕಮೆಂಟ್‌ಗಳ ಸ್ಕ್ರೀನ್‌ಶಾಟ್ ಹಂಚಿಕೊಂಡಿರುವ ಸ್ವರಾ, ಜನರ ಈ ಕೀಳು ಮನಸ್ಥಿತಿಗೆ ಬೇಸರ ವ್ಯಕ್ತಪಡಿಸಿದ್ದಾರೆ.
ದೇಹ ಕೇವಲ ಪ್ರದರ್ಶನದ ವಸ್ತುವಲ್ಲ
ತಮ್ಮ ಪೋಸ್ಟ್‌ನಲ್ಲಿ ಬಹಳ ಗಂಭೀರವಾಗಿ ಮಾತನಾಡಿರುವ ಸ್ವರಾ, ನನ್ನ ದೇಹ ಬದಲಾಗಿರುವುದು ಮತ್ತು ನಾನು ತೂಕ ಇಳಿಸಿಕೊಳ್ಳಲು ಹಠ ಹಿಡಿಯದಿರುವುದು ಇಂಟರ್ನೆಟ್‌ನಲ್ಲಿರುವ ಕೆಲವು ಅಪರಿಚಿತರಿಗೆ ಯಾಕೆ ಇಷ್ಟೊಂದು ಕೋಪ ತರಿಸುತ್ತಿದೆ ಎಂಬುದು ಆಶ್ಚರ್ಯದ ಸಂಗತಿ ಎಂದು ತಿವಿದಿದ್ದಾರೆ. ನಾನು ಇದನ್ನು ಪದೇ ಪದೇ ಹೇಳುತ್ತೇನೆ, ಮಹಿಳೆಯರ ದೇಹ ಕೇವಲ ಲೈಂಗಿಕತೆ ಅಥವಾ ಗ್ಲಾಮರ್ ತೋರಿಸುವ ಹ್ಯಾಂಗರ್ ಅಲ್ಲ. ಅದಕ್ಕಿಂತ ಹೆಚ್ಚಿನ ಕೆಲಸಗಳು ನಮ್ಮ ದೇಹಕ್ಕಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಯಾಕೀ ಬೌನ್ಸ್ ಬ್ಯಾಕ್ ಕ್ರೌರ್ಯ?
ಹೆರಿಗೆಯಾದ ತಕ್ಷಣ ನಟಿಯರು ಅಥವಾ ಮಹಿಳೆಯರು ಮತ್ತೆ ಮೊದಲಿನಂತೆಯೇ ಸಣ್ಣಗಾಗಬೇಕು ಎಂಬ ಒತ್ತಡದ ಬಗ್ಗೆ ಸ್ವರಾ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಮಗುವಿನ ತಾಯಿಯಾದ ನಂತರ ಮತ್ತೆ ಮೊದಲಿನ ತೆಳ್ಳನೆಯ ರೂಪಕ್ಕೆ ಮರಳಲು ನಿರ್ಧರಿಸಿಲ್ಲ. ಒಬ್ಬ ಮನುಷ್ಯನಿಗೆ ಜನ್ಮ ನೀಡಿದ ಮೇಲೆ ಜೀವನ ಮತ್ತು ದೇಹ ಎರಡೂ ಬದಲಾಗುತ್ತದೆ. ಅದು ಸಹಜ ಕೂಡ. ನಮ್ಮ ಹಳೆಯ ಜೀವನ, ತೆಳುವಾದ ದೇಹವನ್ನು ನಾವು ಮಿಸ್ ಮಾಡಿಕೊಳ್ಳಬಹುದು.
ಆದರೆ ಮತ್ತೆ ಅದೇ ದೇಹ ಬೇಕೆಂದು ನಮ್ಮ ಮೇಲೆ ನಾವೇ ಒತ್ತಡ ಹೇರುವುದು ಒಂದು ರೀತಿಯ ಕ್ರೌರ್ಯ. ನಮ್ಮ ದೇಹವು ಮತ್ತೊಂದು ಜೀವಕ್ಕೆ ಜನ್ಮ ನೀಡಿದೆ, ಪೋಷಿಸಿದೆ. ಅಂದ ಮೇಲೆ ಬದಲಾವಣೆಗಳು ಆಗಿಯೇ ಆಗುತ್ತವೆ, ಅದನ್ನು ಒಪ್ಪಿಕೊಳ್ಳಬೇಕು ಎಂದು ಸ್ವರಾ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ತೂಕಕ್ಕೂ ನಟನೆಗೂ ಸಂಬಂಧವಿಲ್ಲ!
ನೀವು ಒಬ್ಬ ನಟಿ, ನೀವು ಚೆನ್ನಾಗಿ ಕಾಣಿಸಿಕೊಳ್ಳಬೇಕು ಎಂದು ವಾದಿಸುವವರಿಗೆ ಸ್ವರಾ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ತೂಕ ಹೆಚ್ಚಾಗುವುದಕ್ಕೂ ನಟನಾ ಸಾಮರ್ಥ್ಯಕ್ಕೂ ಯಾವುದೇ ಸಂಬಂಧವಿಲ್ಲ. ಕೇವಲ ಚೆನ್ನಾಗಿ ಕಾಣುವುದು ಮಾತ್ರ ನಟನೆಯಲ್ಲ. ಅದಕ್ಕೆ ಬೇಕಾಗಿರುವುದು ಕೌಶಲ್ಯ ಮತ್ತು ಸಾಮರ್ಥ್ಯ. ಭಾರತದ ಶ್ರೇಷ್ಠ ನಟರಲ್ಲಿ ಅನೇಕರು ಸಾಂಪ್ರದಾಯಿಕ ಸೌಂದರ್ಯವನ್ನು ಹೊಂದಿರಲಿಲ್ಲ, ಆದರೂ ಅವರು ಜನರ ಮನಸ್ಸನ್ನು ಗೆದ್ದಿದ್ದಾರೆ ಎಂದು ಹೇಳುವ ಮೂಲಕ ಟ್ರೋಲ್‌ಗಳ ಬಾಯಿ ಮುಚ್ಚಿಸಿದ್ದಾರೆ,(ಏಜನ್ಸೀಸ್).