ಸೀತೆ ಪಾತ್ರದ ಬಗ್ಗೆ ನಟಿ ಸಾಯಿ ಪಲ್ಲವಿ ಭಾವುಕ ನುಡಿ
- ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ
- ಸೀತೆ ಪಾತ್ರದ ಬಗ್ಗೆ ನಟಿ ಸಾಯಿ ಪಲ್ಲವಿ ಭಾವುಕ ನುಡಿ
- ಈ ಪಾತ್ರ ನನ್ನ ಆಯ್ಕೆ ಮಾಡಿದ್ದಕ್ಕಾಗಿ ಧನ್ಯ ಎಂದ ಸೌತ್ ಬ್ಯೂಟಿ
ಮುಂಬೈ: ಸದ್ಯ ಭಾರತದ ಸಿನಿಲೋಕ ಬಿಡುಗಡೆಗೆ ತುದಿಗಾಲಿನಲ್ಲಿ ಕಾದು ಕುಳಿತಿರುವ ಸಿನಿಮಾ ಎಂದರೆ ಅದು ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಎಂದು ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಪ್ರಭು ಶ್ರೀರಾಮನ ಪಾತ್ರವನ್ನು ನಿರ್ವಹಿಸಲಿದ್ದರೆ, ಸೌತ್ ಬ್ಯೂಟಿ ಸಾಯಿ ಪಲ್ಲವಿ ಸೀತಾ ಮಾತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಈ ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆ ಕಾಣಲಿದ್ದು, ಮೊದಲ ಭಾಗವು 2026 ರ ದೀಪಾವಳಿಗೆ ಬಿಡುಗಡೆಯಾದರೆ, ಎರಡನೇ ಭಾಗವು 2027 ರ ದೀಪಾವಳಿಗೆ ತೆರೆಕಾಣಲಿದೆ ಎಂದು ಸಿನಿಮಾ ತಂಡ ತಿಳಿಸಿದೆ. ಇತ್ತೀಚೆಗೆ ನಡೆದ ಸಿನಿಮಾ ಟ್ರೇಲರ್ ಲಾಂಚ್ ಇವೆಂಟ್ನಲ್ಲಿ ಸಾಯಿ ಪಲ್ಲವಿ (Sai Pallavi on Sita Mata) ತಾವು ನಿರ್ವಹಿಸಲಿರುವ ಸೀತಾ ಮಾತೆಯ ಪಾತ್ರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಈ ಪಾತ್ರ ನನ್ನನ್ನು ಹುಡುಕಿ ಬಂದಿದೆ!
ಒಬ್ಬ ಕಲಾವಿದೆಯಾಗಿ ದೇವರ ಪಾತ್ರವನ್ನು, ಅದರಲ್ಲೂ ಸೀತಾ ಮಾತೆಯ ಪಾತ್ರ ನಿರ್ವಹಿಸುವುದು ನನಗೆ ತುಂಬಾ ಸವಾಲಾಗಿತ್ತು. ಆದರೆ ನನ್ನ ಚಿತ್ರತಂಡ, ಅವರ ಪ್ರೊತ್ಸಾಹದಿಂದ ಈ ಮಾತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.
ನಿಜ ಹೇಳಬೇಕೆಂದರೆ ನಾನು ಈ ಪಾತ್ರವನ್ನು ಆಯ್ಕೆ ಮಾಡಿಕೊಂಡಿಲ್ಲ, ಆದರೆ ಈ ಪಾತ್ರ ನನ್ನನ್ನು ಆರಿಸಿ ಬಂದಿದ್ದಕ್ಕಾಗಿ ಧನ್ಯಳಾಗಿದ್ದೆನೆಂದು ನಟಿ ಹೇಳಿದ್ದಾರೆ. ಹಾಗೆಯೇ ಈ ಪಾತ್ರವನ್ನು ಒಂದೇ ಸಮನೆ ಅಭಿನಯಿಸಲು ಸಾಧ್ಯವಿರಲಿಲ್ಲ, ಹೀಗಾಗಿ ನಾನು ಪ್ರತಿದಿನ ಧ್ಯಾನ ಹಾಗೂ ಸೀತಾ ದೇವಿಯನ್ನು ಪೂಜಿಸುತ್ತಿದೆ ಎಂದು ತಿಳಿಸಿದ್ದಾರೆ.
ನನಗೆ ಆಕೆ ಕಣ್ಣಲ್ಲಿ ಸೀತೆ ಕಂಡಳು!
ಈ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ನಿತೇಶ್ ತಿವಾರಿ, ನಟರು ಸುಮ್ಮನೆ ನಟಿಸಬಹುದು ಆದರೆ ಅವರ ಕಣ್ಣುಗಳು ಸುಳ್ಳನ್ನು ಹೇಳುವುದಿಲ್ಲ. ನನಗೆ ರಣಬೀರ್ನ ಕಣ್ಣಲ್ಲಿ ಶ್ರೀರಾಮನನ್ನು ಹಾಗು ಸಾಯಿ ಕಣ್ಣಲ್ಲಿ ಸೀತೆಯನ್ನು ಕಂಡಿದ್ದೆನೆ.
ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಇದೇ ಜುಲೈ 24 ರಂದು ಟ್ರೇಲರ್ ಬಿಡುಗಡೆಯಾಗಲಿದೆ, ಹಾಗೆಯೇ ದೀಪಾವಳಿಗೆ ಸಿನಿಮಾ ತೆರೆಕಾಣುತ್ತೆ. ಪ್ರತಿತೊಬ್ಬ ಭಾರತೀಯರು ಈ ಸಿನಿಮಾವನ್ನು ಗೆಲ್ಲಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಅವರು ಹೇಳಿದರು.
ಸಿನಿಮಾದಲ್ಲಿ ಭಾರಿ ತಾರಾಗಣ!
ನಿತೇಶ್ ತಿವಾರಿ ನಿರ್ದೇಶಿಸುತ್ತಿರುವ ಈ ರಾಮಾಣ ಸಿನಿಮಾದಲ್ಲಿ, ರಾಮನ ಪಾತ್ರಧಾರಿಯಾಗಿ ರಣಬೀರ್ ಕಪೂರ್ ಕಾಣಿಸಿಕೊಂಡರೆ, ರಾವಣನಾಗಿ ಕನ್ನಡಿಗ ರಾಕಿಂಗ್ಸ್ಟಾರ್ ಯಶ್ ಮಿಂಚಲಿದ್ದಾರೆ. ಸೀತೆಯಾಗಿ ಸಾಯಿ ಪಲ್ಲವಿ, ಮಂಡೋದರಿಯಾಗಿ ಕಾಜಲ್ ಅರ್ಗವಾಲ್, ಹನುಮನಾಗಿ ಸನ್ನಿ ಡಿಯೋಲ್ ಹಾಗೂ ಲಕ್ಷ್ಮಣನಾಗಿ ರವಿ ದುಭೆ ಕಾಣಿಸಿಕೊಳ್ಳುತ್ತಿದ್ದು, ಇನ್ನೂ ಅನೇಕ ಖ್ಯಾತನಾಮರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ, (ಏಜನ್ಸೀಸ್).