ಬಾಲಿವುಡ್​ನಿಂದ ರಣವೀರ್​ಗೆ ಬಹಿಷ್ಕಾರ 
ಬಾಲಿವುಡ್

ರಣವೀರ್ ಸಿಂಗ್‌ಗೆ ಬಾಲಿವುಡ್ ಬಹಿಷ್ಕಾರ: ಫರ್ಹಾನ್ ಅಖ್ತರ್​ಗೆ ಕೈಕೊಟ್ಟ ನಟ; ಹೀರೊ ವಿರುದ್ಧ ತಿರುಗಿಬಿದ್ದ ಚಲನಚಿತ್ರ ಕಾರ್ಮಿಕರ ಒಕ್ಕೂಟ! Bollywood Bans Ranveer Singh

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್​ನಿಂದ ರಣವೀರ್​ಗೆ ಬಹಿಷ್ಕಾರ
  • ಡಾನ್​ 3 ಸಿನಿಮಾವನ್ನು ಅರ್ಧಕ್ಕೆ ಬಿಟ್ಟಿದ್ದ ರಣವೀರ್​
  • ನಟನ ಜೊತೆ ನಟಿಸದಿರಲು ಮುಂದಾದ ಚಲನಚಿತ್ರ ಕಾರ್ಮಿಕರ ಒಕ್ಕೂಟ
ಮುಂಬೈ: ಬಾಲಿವುಡ್‌ನ ಬಹುನಿರೀಕ್ಷಿತ ಆ್ಯಕ್ಷನ್ ಸಿನಿಮಾ ಡಾನ್ 3 ಸಿನಿಮಾದಿಂದ ಚಿತ್ರದ ನಾಯಕ ನಟ ರಣವೀರ್ ಸಿಂಗ್ ಕೊನೆ ಕ್ಷಣದಲ್ಲಿ ಸಿನಿಮಾದಿಂದ ಹೊರನಡೆದ ಕಾರಣ, ಈಗ ಅವರ ವಿರುದ್ಧ ಬಾಲಿವುಡ್‌ನ ಚಲನಚಿತ್ರ ಕಾರ್ಮಿಕರ ಒಕ್ಕೂಟ ಅಸಹಕಾರ ನಿರ್ದೇಶನ (Bollywood Bans Ranveer Singh) ಪ್ರಕಟಿಸಿದೆ.
ಇದರ ಪ್ರಕಾರ ಇನ್ಮುಂದೆ ರಣವೀರ್​ ನಟಿಸುವ ಸಿನಿಮಾಗಳಲ್ಲಿ ಒಕ್ಕೂಟದ ಯಾವುದೇ ಸದಸ್ಯ ಕೆಲಸ ಮಾಡುವುದಿಲ್ಲ ಎಂಬ ನಿರ್ಧಾರವನ್ನು ಸ್ಪಷ್ಟ ಪಡಿಸಿದೆ.

ಮೂರೇ ವಾರ ಬಾಕಿ ಇರುವಾಗ ಕೈಕೊಟ್ಟರೇ ರಣವೀರ್ ಸಿಂಗ್?

ನಿರ್ದೇಶಕ ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಡಾನ್ 3 ಸಿನಿಮಾ ಅನೌನ್ಸ್ ಆದಾಗಿನಿಂದಲೂ ಭಾರಿ ಕುತೂಹಲ ಇತ್ತು. ಆದರೆ, ಶೂಟಿಂಗ್ ತಂಡ ವಿದೇಶಕ್ಕೆ ಹೊರಡಲು ಕೇವಲ 3 ವಾರಗಳು ಬಾಕಿ ಇರುವಾಗ ರಣವೀರ್ ಸಿಂಗ್ ದಿಢೀರನೆ ಚಿತ್ರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಇದರಿಂದ ನಿರ್ಮಾಪಕರಿಗೆ ಕೋಟಿ ಕೋಟಿ ನಷ್ಟ ಉಂಟಾಗಿದೆ ಎಂದು ಹೇಳಲಾಗುತ್ತಿದೆ.
ಇದರಿಂದ ಬೇಸತ್ತ ಫರ್ಹಾನ್ ಅಖ್ತರ್, ಕಳೆದ ಏಪ್ರಿಲ್ 11 ರಂದು ಫೆಡರೇಶನ್‌ಗೆ (FWICE) ರಣವೀರ್ ಸಿಂಗ್ ವಿರುದ್ಧ ಲಿಖಿತ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ರಣವೀರ್​ ಸಿಂಗ್​ನ್ನು ಈಗ ಬಹಿಷ್ಕಾರ ಹಾಕಲಾಗಿದೆ.

ನೋಟಿಸ್​ ಕೊಟ್ಟರು ಕ್ಯಾರೆ ಎನ್ನದ ರಣವೀರ್!

ಈ ದೂರಿನ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಿರ್ದೇಶಕರ ಸಂಘದ ಅಧ್ಯಕ್ಷ ಅಶೋಕ್ ಪಂಡಿತ್, ಫೆಡರೇಶನ್ ತೆಗೆದುಕೊಂಡ ಕಠಿಣ ನಿರ್ಧಾರದ ಹಿಂದಿನ ಸತ್ಯ ಬಿಚ್ಚಿಟ್ಟಿದ್ದಾರೆ.
ಫರ್ಹಾನ್ ಅಖ್ತರ್ ದೂರು ಕೊಟ್ಟ ನಂತರ ನಾವು ರಣವೀರ್ ಸಿಂಗ್‌ ಅವರಿಗೆ ತಮ್ಮ ವಾದ ಮಂಡಿಸಲು ಪ್ರತಿ 10-15 ದಿನಗಳಿಗೊಮ್ಮೆ ರಿಮೈಂಡರ್ ಕಳುಹಿಸಿದೆವು. ಒಟ್ಟು 3 ಅಧಿಕೃತ ನೋಟಿಸ್‌ ನೀಡಿದರೂ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆದರೆ, ನಾವು ಪತ್ರಿಕಾಗೋಷ್ಠಿ ಮಾಡುವುದಾಗಿ ಅನೌನ್ಸ್ ಮಾಡಿದ ತಕ್ಷಣ ರಣವೀರ್ ಟೀಮ್‌ನಿಂದ ಒಂದು ಇಮೇಲ್ ಬಂತು. ಅದರಲ್ಲಿ ಅವರು, ಈ ವಿಷಯದಲ್ಲಿ ತಲೆಹಾಕಲು ಫೆಡರೇಶನ್‌ಗೆ ಯಾವುದೇ ಹಕ್ಕಿಲ್ಲ ಎಂದು ಉದ್ಧಟತನದ ಉತ್ತರ ನೀಡಿದ್ದಾರೆ ಎಂದು ಹೇಳಿದ್ದಾರೆ.

ಸೂಪರ್‌ಸ್ಟಾರ್ ಆದ್ರೆ ನಿಯಮಗಳಿಗಿಂತ ಮೇಲಲ್ಲ!

ಇನ್ನು ಈ ಕುರಿತು ಮಾತನಾಡಿದ FWICE ಅಧ್ಯಕ್ಷ ಬಿ.ಎನ್. ತಿವಾರಿ, ಈ ವಿವಾದ ಕೇವಲ ಒಬ್ಬ ನಟ ಮತ್ತು ನಿರ್ಮಾಪಕನ ನಡುವಿನ ಜಗಳವಲ್ಲ, ಇದು ಸಾವಿರಾರು ಬಡ ಕಾರ್ಮಿಕರ ಹೊಟ್ಟೆಪಾಡಿನ ಪ್ರಶ್ನೆ ಎಂದಿದ್ದಾರೆ.
ಒಂದು ದೊಡ್ಡ ಸಿನಿಮಾ ಬಿಡುಗಡೆಯಾದರೆ ಅದರ ಹಿಂದೆ ಸಾವಿರಾರು ಜೂನಿಯರ್ ಆರ್ಟಿಸ್ಟ್‌ಗಳು, ದಿನಗೂಲಿ ಕಾರ್ಮಿಕರು, ಲೈಟ್ ಬಾಯ್ಸ್ ಬದುಕು ಸಾಗುತ್ತದೆ. ಹೀಗೆ ಸ್ಟಾರ್ ನಟರು ಕೊನೆ ಕ್ಷಣದಲ್ಲಿ ಸಿನಿಮಾ ನಿಲ್ಲಿಸಿದರೆ ಆ ಬಡ ಕಾರ್ಮಿಕರ ಜೀವನ ಏನಾಗಬೇಕು? ಯಾರೇ ದೊಡ್ಡ ಸೂಪರ್‌ಸ್ಟಾರ್ ಆಗಿದ್ದರೂ ಅವರು ಉದ್ಯಮದ ನಿಯಮಗಳಿಗಿಂತ ಮೇಲಲ್ಲ ಎಂದು ತಿವಾರಿ ಖಡಕ್ ಆಗಿ ಹೇಳಿದ್ದಾರೆ.

ಇನ್ಮುಂದೆ ರಣವೀರ್ ಸಿಂಗ್‌ಗೆ ನೋ ಎಂಟ್ರಿ?

ಸದ್ಯದ ಪರಿಸ್ಥಿತಿಯಲ್ಲಿ ರಣವೀರ್ ಸಿಂಗ್ ವಿರುದ್ಧ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಸಹಕಾರ ನಿರ್ದೇಶನ ಹೊರಡಿಸಲಾಗಿದೆ. ಅಂದರೆ, ಈ ವಿವಾದ ಅಧಿಕೃತವಾಗಿ ಬಗೆಹರಿಯುವವರೆಗೂ ಬಾಲಿವುಡ್‌ನ ಯಾವುದೇ ತಂತ್ರಜ್ಞರು, ಮೇಕಪ್ ಆರ್ಟಿಸ್ಟ್‌ಗಳು ಅಥವಾ ನಿರ್ಮಾಣ ಸಂಸ್ಥೆಗಳು ರಣವೀರ್ ಸಿಂಗ್ ಜೊತೆ ಕೆಲಸ ಮಾಡುವಂತಿಲ್ಲ ಎಂದು ಒಕ್ಕೂಟ ತಿಳಿಸಿದೆ, (ಏಜನ್ಸೀಸ್​).