ಬಿಷ್ಣೋಯ್ ಗ್ಯಾಂಗ್​ನಿಂದ ಬಾದಶಾಗೆ ಜೀವ ಬೆದರಿಕೆ 
ಬಾಲಿವುಡ್

ರ‍್ಯಾಪರ್ ಬಾದ್‌ಶಾಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಕೊಲೆ ಬೆದರಿಕೆ: ಮುಂದಿನ ಬಾರಿ ನಿನ್ನ ಹಣೆಗೆ ಗುಂಡಿಡುತ್ತೇವೆ ಎಂದು ಧಮಕಿ! Bishnoi gang Threatens Badshah

ಪ್ರಮುಖ ಮುಖ್ಯಾಂಶಗಳು

  • ರ‍್ಯಾಪರ್ ಬಾದ್​ಶಾ ತಟೀರಿ ಹಾಡಿನ ವಿವಾದ
  • ನಿನ್ನ ಹಣೆಗೆ ಗುಂಡಿಟ್ಟು ಕೊಲ್ಲುತ್ತೇವೆ
  • ಲಾರೆನ್ಸ್​ ವಿಷ್ಣೋಯಿ ಗ್ಯಾಂಗ್​ನಿಂದ ಜೀವ ಬೆದರಿಕೆ
ಬಾಲಿವುಡ್​: ಸದಾ ತನ್ನ ರ‍್ಯಾಪ್​ ಹಾಡುಗಳ ಮೂಲಕ ಯುವಕರ ಗಮನ ಸೆಳೆಯುತ್ತಿದ್ದ ಗಾಯಕ ಬಾದ್​ಶಾ, ಇತ್ತೀಚೆಗೆ ಬಿಡುಗಡೆಯಾದ ತಟೀರಿ ಎಂಬ ಹಾಡಿನಿಂದ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ.
ಈ ಹಾಡಿನಲ್ಲಿ ಮಹಿಳೆ ಮತ್ತು ಮಕ್ಕಳನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂಬ ಹಿನ್ನಲೆಯಲ್ಲಿ ಲಾರೆನ್ಸ್​​ ಬಿಷ್ಣೋಯಿ ಗ್ಯಾಂಗ್ ಬಾದ್​ಶಾ ಅವರನ್ನು ಕೊಲೆ (Bishnoi gang Threatens Badshah) ಮಾಡುವುದಾಗಿ ಬೆದರಿಕೆ ಹಾಕಿದೆ ಎಂದು ವರಿಯಾಗಿದೆ.
ಬಾದ್​ ಶಾ ನೀನು ಹರಿಯಾಣಾದ ಸಂಸ್ಕೃತಿಯನ್ನು ಹಾಳು ಮಾಡಲು ಮುಂದಾಗಿದ್ದಿಯ. 2024 ರಲ್ಲಿ ಕ್ಲಬ್​ವೊಂದರಲ್ಲಿ ನಿನ್ನ ಮೇಲೆ ಕೊಲೆ ಯತ್ನ ನಡೆದಿದ್ದು, ಆ ದಿನ ನೀನು ತಪ್ಪಿಸಿಕೊಂಡಿದ್ದೆ. ಆದರೆ ನಮ್ಮ ಮುಂದಿನ ದಾಳಿಯಲ್ಲಿ ನಿನ್ನ ಹಣೆಗೆ ಗುಂಡನ್ನು ಹೊಡೆದು ಕೊಲ್ಲುತ್ತೇವೆ ಎಂದು ಲಾರೆನ್ಸ್​​ ಬಿಷ್ಣೋಯಿ ಗ್ಯಾಂಗ್​ನ ವ್ಯಕ್ತಿಯೊಬ್ಬ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾನೆ.
2024 ರಲ್ಲಿ ಚಂಢೀಗಢದಲ್ಲಿರುವ ಬಾದ್​ಶಾ ಮಾಲೀಕತ್ವದ ಸೆವೆಲ್ಲೆ ಬಾರ್​ ಎಂಬ ಕ್ಲಬ್​ ಮುಂಭಾಗದಲ್ಲಿ ಬಾಂಬ್​ ಸ್ಪೋಟ ನಡೆದಿತ್ತು, ಈ ಘಟನೆಯ ಜವಾಬ್ದಾರಿಯನ್ನು ಅಂದು ಲಾರೆನ್ಸ್​​ ಬಿಷ್ಣೋಯಿ ಗ್ಯಾಂಗ್​ನ ಪ್ರಮುಖ ಸದಸ್ಯ ಗೋಲ್ಡಿ ಬ್ರಾರ್​ ವಹಿಸಿಕೊಂಡಿದ್ದ.

ಏನಿದು ತಟೀರಿ ವಿವಾದ?

ತಟೀರಿ (Tateeree) ಎಂಬುದು ಜನಪ್ರಿಯ ರ‍್ಯಾಪರ್ ಮತ್ತು ಗಾಯಕ ಬಾದ್‌ಶಾ ಅವರು ಮಾರ್ಚ್ 1, 2026 ರಂದು ಬಿಡುಗಡೆ ಮಾಡಿದ ಹರಿಯಾಣ್ವಿ ಭಾಷೆಯ ಹಿಪ್-ಹಾಪ್ ಹಾಡಾಗಿದೆ. ಈ ಹಾಡು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ತೀವ್ರ ವಿವಾದಕ್ಕೆ ಕಾರಣವಾಯಿತು.
ಹಾಡಿನ ದೃಶ್ಯಗಳಲ್ಲಿ ಶಾಲಾ ಸಮವಸ್ತ್ರ ಧರಿಸಿದ ಅಪ್ರಾಪ್ತ ಬಾಲಕಿಯರು ಶಾಲೆಗೆ ಹೋಗುವ ಬದಲು ಬೇರೆ ಕಡೆ ಗಮನ ಹರಿಸುವುದು ಮತ್ತು ಆಕ್ಷೇಪಾರ್ಹ ಸನ್ನೆಗಳನ್ನು ಮಾಡುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಯಿತು. ಅಲ್ಲದೆ, ಹಾಡಿನ ಸಾಹಿತ್ಯವು ಮಹಿಳೆಯರನ್ನು ಮತ್ತು ಅಪ್ರಾಪ್ತರನ್ನು ಅವಹೇಳನ ಮಾಡುವಂತಿದೆ ಎಂಬ ಆರೋಪಗಳು ಕೇಳಿಬಂದವು.

ಕ್ಷಮೆ ಕೇಳಿರುವ ರ‍್ಯಾಪರ್

ಬಿಡುಗಡೆಯಾದ ಹಾಡಿಗೆ ಭಾರಿ ವಿರೋಧದ ಜೊತೆಗೆ ಪೊಲೀಸ್​ ದೂರು ದಾಖಲಾದ ನಂತರ ಬಾದ್​ಶಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸಾಮೂಹಿಕವಾಗಿ ಕ್ಷಮೆ ಕೇಳಿದ್ದಾರೆ.
ನನ್ನ ಈ ಹಾಡಿನಿಂದ ಬಹಳ ಜನಕ್ಕೆ ಅದರಲ್ಲೂ ಹರಿಯಾಣಾದ ಜನರಿಗೆ ನೋವಾಗಿದೆ ಎಂದು ನನಗೆ ತಿಳಿದು ಬಂದಿದೆ. ಆದರೆ ಯಾರಿಗೂ ನೋವುಂಟು ಮಾಡುವ ಉದ್ದೇಶ ನನ್ನದಾಗಿರಲಿಲ್ಲ. ಆದರೂ ನನ್ನ ಅಭಿಮಾನಿಗಳಿಗೆ ಬೇಸರವಾದ ಹಿನ್ನಲೆಯಲ್ಲಿ ಈ ಹಾಡನ್ನು ಎಲ್ಲಾ ವೇದಿಕೆಗಳಿಂದ ತೆಗೆದು ಹಾಕಿದ್ದೇನೆ ಎಂದು ಬಾದ್​ಶಾ ಹೇಳಿದ್ದಾರೆ.
ನಾನೂ ಮೂಲತಃ ಹರಿಯಾಣಾದವನಾಗಿದ್ದು, ನನಗೂ ಅಲ್ಲಿಯ ಊಟ, ಆಚರಣೆ ಮತ್ತು ಸಂಪ್ರದಾಯಗಳ ಬಗ್ಗೆ ತಿಳುವಳಿಕೆಯಿದೆ. ಅಲ್ಲಿಯ ಮಹಿಳೆಯರ ಮತ್ತು ಮಕ್ಕಳ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಅವರನ್ನು ಅವಮಾನಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಆದರೂ ನನ್ನ ಈ ಹಾಡಿಂದ ನಿಮಗೆ ನೋವಾಗಿದ್ದರೆ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೆನೆ ಎಂದು ಅವರು ಹೇಳಿದ್ದಾರೆ,(ಏಜನ್ಸೀಸ್​).