ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್ ಮತ್ತು ಆಮೀರ್ ಖಾನ್​ ಮೇಲೆ ನೆಟ್ಟಿತ್ತು ಶೂಟರ್​ಗಳ ಕಣ್ಣು 
ಬಾಲಿವುಡ್

ಅಮಿತಾಭ್, ಅಕ್ಷಯ್, ಆಮೀರ್... ತನಿಖೆ ವೇಳೆ ಆಘಾತಕಾರಿ ಸಂಗತಿ ಬಿಚ್ಚಿಟ್ಟ ನಟ ಟೈಗರ್ ಶ್ರಾಫ್ ಪ್ರಕರಣದ ದಾಳಿಕೋರರು! Tiger Shroff Firing

ಮುಂಬೈ ಕ್ರೈಂ ಬ್ರಾಂಚ್ ಮೂಲಗಳ ಪ್ರಕಾರ, ಗುಂಡಿನ ದಾಳಿ ನಡೆಸಿದ ಮೂವರು ಆರೋಪಿಗಳು ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸುವ ಮೊದಲು ಬಾಲಿವುಡ್‌ನ ದಿಗ್ಗಜ ನಟರಾದ ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್ ಮತ್ತು ಆಮೀರ್ ಖಾನ್​ ಅವರ ನಿವಾಸಗಳ ಭದ್ರತಾ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದರು.

ನವದೆಹಲಿ: ಹಿಂದಿ ಸಿನಿಮಾ ರಂಗದ ಜನಪ್ರಿಯ ಯುವ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ( Tiger Shroff Firing ) ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರ ತನಿಖೆಯಲ್ಲಿ ಅತ್ಯಂತ ಸ್ಫೋಟಕ ಹಾಗೂ ಆಘಾತಕಾರಿ ಸಂಗತಿಗಳು ಹೊರಬಂದಿವೆ. ಶೂಟರ್‌ಗಳ ಅಸಲಿ ಟಾರ್ಗೆಟ್ ಟೈಗರ್ ಶ್ರಾಫ್ ಆಗಿರಲಿಲ್ಲ ಎಂಬ ಶಾಕಿಂಗ್​ ಸತ್ಯ ಬಯಲಾಗಿದೆ. ದುಷ್ಕರ್ಮಿಗಳ ಹಿಂದೆ ದೊಡ್ಡದೊಂದು ಮಾಸ್ಟರ್‌ಪ್ಲಾನ್ ಇತ್ತು ಎಂಬುದು ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ.

ಮುಂಬೈ ಕ್ರೈಂ ಬ್ರಾಂಚ್ ಮೂಲಗಳ ಪ್ರಕಾರ, ಗುಂಡಿನ ದಾಳಿ ನಡೆಸಿದ ಮೂವರು ಆರೋಪಿಗಳು ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸುವ ಮೊದಲು ಬಾಲಿವುಡ್‌ನ ದಿಗ್ಗಜ ನಟರಾದ ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್ ಮತ್ತು ಆಮೀರ್ ಖಾನ್​ ಅವರ ನಿವಾಸಗಳ ಭದ್ರತಾ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದರು. ಆದರೆ, ಈ ಮೂವರ ಮನೆಗಳ ಬಳಿ ಇದ್ದ ಅತಿ ಕಟ್ಟುನಿಟ್ಟಾದ ಮತ್ತು ಬಿಗಿಯಾದ ಭದ್ರತಾ ವ್ಯವಸ್ಥೆಯನ್ನು ಕಂಡು ಕಿಡಿಗೇಡಿಗಳು ತಮ್ಮ ಯೋಜನೆಯನ್ನು ಬದಲಾವಣೆ ಮಾಡಿಕೊಂಡಿದ್ದಾರೆ ಎಂಬ ಸಂಗತಿ ತನಿಖೆಯಿಂದ ತಿಳಿದುಬಂದಿದೆ.

ದಿಗ್ಗಜ ನಟರ ನಿವಾಸಗಳ ಸುತ್ತಲಿನ ಬಿಗಿ ಭದ್ರತೆಯನ್ನು ಭೇದಿಸುವುದು ಅಸಾಧ್ಯವೆಂದು ಅರಿತ ಆರೋಪಿಗಳು, ಆ ದೊಡ್ಡ ಸೆಲೆಬ್ರಿಟಿಗಳ ಮೇಲಿನ ದಾಳಿಯ ಯೋಚನೆಯನ್ನೇ ಕೈಬಿಟ್ಟರು. ನಂತರ ಅವರು ಸುಲಭವಾಗಿ ಟಾರ್ಗೆಟ್​ ಮಾಡಬಹುದು ಎಂಬ ಕಾರಣಕ್ಕೆ ಟೈಗರ್ ಶ್ರಾಫ್ ಅವರ ಚಲನವಲನಗಳು ಹಾಗೂ ಭದ್ರತಾ ವ್ಯವಸ್ಥೆಗಳನ್ನು ಮೌಲ್ಯಮಾಪನ ಮಾಡಿ, ಅಂತಿಮವಾಗಿ ಅವರ ಮೇಲೆಯೇ ದಾಳಿ ನಡೆಸಲು ನಿರ್ಧರಿಸಿದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಕೋಟಾದಲ್ಲಿ ಬಂಧಿಸಲ್ಪಟ್ಟ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬುಧವಾರ ಮುಂಬೈಗೆ ಕರೆತಂದಿದ್ದಾರೆ. ಬಿಹಾರದ ಬೇಗುಸರಾಯ್ ಮೂಲದ ರಿತಿಕ್ ಅಲಿಯಾಸ್ ರೋಷನ್ ಮತ್ತು ಹರಿಯಾಣದ ಸೋನಿಪತ್‌ನ ರೆಹಾನ್ ಸೇರಿದಂತೆ ಪ್ರಮುಖ ಆರೋಪಿಗಳನ್ನು ರೈಲಿನಲ್ಲಿ ಬಂಧಿಸಲಾಗಿದ್ದು, ನ್ಯಾಯಾಲಯವು ಅವರಿಗೆ 48 ಗಂಟೆಗಳ ಟ್ರಾನ್ಸಿಟ್ ರಿಮಾಂಡ್ ನೀಡಿತ್ತು.

ಮುಂಬೈಗೆ ತಲುಪಿದ ತಕ್ಷಣ ಆರೋಪಿಗಳಿಗೆ ಕಡ್ಡಾಯ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ಬಳಿಕ ಹೆಚ್ಚಿನ ವಿಚಾರಣೆಗಾಗಿ ಅವರನ್ನು ಮುಂಬೈ ಕ್ರೈಂ ಬ್ರಾಂಚ್‌ನ ಸುಲಿಗೆ ನಿಗ್ರಹ ದಳದ (Anti-Extortion Cell) ಕಚೇರಿಗೆ ಕರೆದೊಯ್ಯಲಾಗಿದೆ. ಆರೋಪಿಗಳ ಪರ ವಕೀಲ ಅಜಿಂಕ್ಯ ಮಿರ್ಗಲ್ ಮಧುಕರ್ ಮಾತನಾಡಿ, ಪೊಲೀಸರು ರಾಜಸ್ಥಾನದಿಂದ ನೇರವಾಗಿ ಕೋರ್ಟ್ ಪ್ರಕ್ರಿಯೆಗಾಗಿ ಆರೋಪಿಗಳನ್ನು ಕರೆತಂದಿದ್ದು, ಗುರುವಾರ ಬೆಳಗ್ಗೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಮುಂಬೈನ ಜುಹು ಪ್ರದೇಶದಲ್ಲಿರುವ ಫುಟ್‌ಬಾಲ್ ಕ್ಲಬ್‌ನಿಂದ ಭಾನುವಾರ ಸಂಜೆ 7 ಗಂಟೆಯ ಸುಮಾರಿಗೆ ಟೈಗರ್ ಶ್ರಾಫ್ ಹೊರಬರುತ್ತಿದ್ದ ವೇಳೆ ಈ ಗುಂಡಿನ ದಾಳಿ ನಡೆದಿತ್ತು. ಅದೃಷ್ಟವಶಾತ್ ನಟ ಪ್ರಾಣಾಪಾಯದಿಂದ ಪಾರಾಗಿದ್ದು, ಅವರ ಕಾರಿನ ಚಾಲಕ ಗಾಯಗೊಂಡಿದ್ದಾರೆ. ಈ ಕೃತ್ಯದ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಾಮಾಜಿಕ ಜಾಲತಾಣದ ಮೂಲಕ ಹೊತ್ತುಕೊಂಡಿದೆ ಎನ್ನಲಾಗಿದ್ದು, ಪೊಲೀಸರು ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಒಟ್ಟಾರೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ, (ಏಜೆನ್ಸೀಸ್​).