ಬಾಲಿವುಡ್​ ನಟ ಆಮೀರ್​ ಖಾನ್ 
ಬಾಲಿವುಡ್

ಹುಚ್ಚನಂತೆ 30 ವರ್ಷ ಕೆಲಸ ಮಾಡಿ ಮಕ್ಕಳ ಒಡನಾಟವನ್ನೇ ಕಳೆದುಕೊಂಡೆ ಎಂದು ಕಣ್ಣೀರಿಟ್ಟ ಆಮೀರ್​ ಖಾನ್​..! Aamir Khan

ಸಿಂಗಾಪುರ ಚಲನಚಿತ್ರೋತ್ಸವದಲ್ಲಿ ಪ್ರಸಿದ್ಧ ಹಾಂಗ್ ಕಾಂಗ್ ನಿರ್ದೇಶಕ ಪೀಟರ್ ಚಾನ್ ಅವರಿಂದ ಗೌರವಾನ್ವಿತ 'ಸ್ಕ್ರೀನ್ ಐಕಾನ್ ಪ್ರಶಸ್ತಿ' (Screen Icon Award) ಸ್ವೀಕರಿಸಿದ ಬಳಿಕ, ಸಿಂಗಾಪುರದ ಹಾಸ್ಯನಟ ರಿಷಿ ಬುಧ್ರಾನಿ ನಡೆಸಿಕೊಟ್ಟ ಸಂವಾದ ಕಾರ್ಯಕ್ರಮದಲ್ಲಿ ಆಮೀರ್ ಖಾನ್ ಭಾಗವಹಿಸಿದ್ದರು.

ಮುಂಬೈ: ಬಾಲಿವುಡ್‌ನ 'ಮಿಸ್ಟರ್ ಪರ್ಫೆಕ್ಟ್‌' ಎಂದೇ ಹೆಸರಾಗಿರುವ ಹಿರಿಯ ನಟ ಆಮೀರ್ ಖಾನ್ ( Aamir Khan ) ಅವರು ತಮ್ಮ ವೃತ್ತಿಜೀವನದ ಏಳುಬೀಳುಗಳು ಹಾಗೂ ವೈಯಕ್ತಿಕ ಜೀವನದಲ್ಲಾದ ನಷ್ಟಗಳನ್ನು ನೆನೆದು ಭಾವುಕರಾಗಿ ಎಲ್ಲರೆದುರಲ್ಲೇ ಕಣ್ಣೀರಿಟ್ಟಿದ್ದಾರೆ. ಸಿಂಗಾಪುರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ವೇಳೆ, ಸಿನಿಮಾ ರಂಗದಲ್ಲಿನ ತಮ್ಮ ಮೂರು ದಶಕಗಳ ಪಯಣ ಹಾಗೂ ಅದಕ್ಕಾಗಿ ತಾವು ಮಾಡಿದ ತ್ಯಾಗದ ಕುರಿತು ಮುಕ್ತವಾಗಿ ಮಾತನಾಡುವಾಗ ಆಮೀರ್​ ತೀವ್ರ ಭಾವುಕರಾದರು.

ಸಿಂಗಾಪುರ ಚಲನಚಿತ್ರೋತ್ಸವದಲ್ಲಿ ಪ್ರಸಿದ್ಧ ಹಾಂಗ್ ಕಾಂಗ್ ನಿರ್ದೇಶಕ ಪೀಟರ್ ಚಾನ್ ಅವರಿಂದ ಗೌರವಾನ್ವಿತ 'ಸ್ಕ್ರೀನ್ ಐಕಾನ್ ಪ್ರಶಸ್ತಿ' (Screen Icon Award) ಸ್ವೀಕರಿಸಿದ ಬಳಿಕ, ಸಿಂಗಾಪುರದ ಹಾಸ್ಯನಟ ರಿಷಿ ಬುಧ್ರಾನಿ ನಡೆಸಿಕೊಟ್ಟ ಸಂವಾದ ಕಾರ್ಯಕ್ರಮದಲ್ಲಿ ಆಮೀರ್ ಖಾನ್ ಭಾಗವಹಿಸಿದ್ದರು. ಈ ವೇಳೆ ತಮ್ಮ ವೃತ್ತಿಜೀವನದ ಅತ್ಯಂತ ದುರ್ಬಲ ಕ್ಷಣ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿದ ಆಮೀರ್, ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ತಮಗೆ ಎದುರಾದ ಮಾನಸಿಕ ಆಘಾತ ಮತ್ತು ಪಶ್ಚಾತ್ತಾಪದ ಭಾವನೆಗಳನ್ನು ಪ್ರೇಕ್ಷಕರೊಂದಿಗೆ ಹಂಚಿಕೊಂಡರು.

ಕೋವಿಡ್ ಸಮಯದಲ್ಲಿ ಮನೆಯಲ್ಲಿ ಕುಳಿತಿದ್ದಾಗ, ನನ್ನ ವೃತ್ತಿಜೀವನದ 30 ವರ್ಷಗಳು ಹೇಗೆ ಕಳೆದುಹೋದವು ಎಂದು ಆಲೋಚಿಸಿದೆ. ಒಂದು, ಎರಡು ಅಥವಾ ಐದು ವರ್ಷಗಳ ಕಾಲ ಕೆಲಸದ ಹುಚ್ಚಿನಲ್ಲಿ ಮುಳುಗಿರುವುದು ಸರಿ. ಆದರೆ ಸುಮಾರು 30 ವರ್ಷಗಳ ಕಾಲ ಅದೇ ರೀತಿ ಹುಚ್ಚನಂತೆ ಕೆಲಸ ಮಾಡುತ್ತಾ ಹೋದರೆ, ನಿಮ್ಮ ಆಪ್ತ ಸಂಬಂಧಗಳನ್ನೇ ನೀವು ಕಳೆದುಕೊಳ್ಳುತ್ತೀರಿ. ನನ್ನ ಮಕ್ಕಳು ಬೆಳೆದು ದೊಡ್ಡವರಾಗಿದ್ದೇ ನನಗೆ ತಿಳಿಯಲಿಲ್ಲ, ಅವರೆಲ್ಲ ಈಗ ವಯಸ್ಕರಾಗಿದ್ದಾರೆ. ನನ್ನ ಬದುಕಿನ ಅತ್ಯಮೂಲ್ಯ ಸಮಯವನ್ನು ಕಳೆದುಕೊಂಡೆ ಎನ್ನುವ ತೀವ್ರ ನೋವು ನನ್ನನ್ನು ಕಾಡತೊಡಗಿತು ಎಂದು ಹೇಳುತ್ತಲೇ ಆಮೀರ್ ಕಣ್ಣೀರಿಟ್ಟರು.

ಅನಿರೀಕ್ಷಿತವಾಗಿ ಕಣ್ಣೀರಾಕಿದ ಆಮೀರ್ ಖಾನ್ ತಕ್ಷಣವೇ ಪ್ರೇಕ್ಷಕರಲ್ಲಿ ಕ್ಷಮೆ ಯಾಚಿಸಿದರು. ಈ ವೇಳೆ ಸಭಾಂಗಣದಲ್ಲಿದ್ದ ಜನಸ್ತೋಮ ಚಪ್ಪಾಳೆ ತಟ್ಟುವ ಮೂಲಕ ಅವರಿಗೆ ಧೈರ್ಯ ತುಂಬಿತು. ಬಳಿಕ ಕಣ್ಣೀರು ಒರೆಸಿಕೊಳ್ಳುತ್ತಾ ಮಾತು ಮುಂದುವರಿಸಿದ ಅವರು, ನನಗೆ 56 ವರ್ಷವಿರುವಾಗಲೇ ಈ ಸತ್ಯದ ಅರಿವಾಗಿದ್ದು ನನ್ನ ಅದೃಷ್ಟ, ಅದೇ 86 ವರ್ಷದ ವಯಸ್ಸಿನಲ್ಲಿ ಈ ಆಲೋಚನೆ ಬಂದಿದ್ದರೆ ಏನನ್ನೂ ಸರಿಪಡಿಸಲು ಸಾಧ್ಯವಾಗುತ್ತಿರಲಿಲ್ಲ. ಕಳೆದ ನಾಲ್ಕು ವರ್ಷಗಳಿಂದ ನಾನು ನನ್ನ ಕುಟುಂಬ ಮತ್ತು ನಿಕಟ ಸ್ನೇಹಿತರಿಗಾಗಿ ಮುಕ್ತವಾಗಿ ಸಮಯವನ್ನು ಮೀಸಲಿಡಲು ನಿರ್ಧರಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಇದೇ ಸಂವಾದದಲ್ಲಿ ತಮ್ಮ ಆರಂಭಿಕ ದಿನಗಳ ಸೋಲುಗಳನ್ನು ಸ್ಮರಿಸಿದ ಆಮೀರ್, 1988ರ ಬ್ಲಾಕ್‌ಬಸ್ಟರ್ 'ಕಯಾಮತ್ ಸೇ ಕಯಾಮತ್ ತಕ್' ಚಿತ್ರದ ಯಶಸ್ಸಿನ ನಂತರ ಕೇವಲ ಆರು ತಿಂಗಳಲ್ಲಿ ಒಂಬತ್ತು ಸಿನಿಮಾಗಳಿಗೆ ಸಹಿ ಹಾಕಿದ್ದಾಗಿ ಹೇಳಿದರು. ಆದರೆ, ಶೂಟಿಂಗ್ ಆರಂಭವಾದ ಮೇಲೆಯೇ ತಾವು ಮಾಡಿದ ತಪ್ಪಿನ ಅರಿವಾಯಿತು. ಪ್ರತಿದಿನ ಮನೆಗೆ ಬಂದು ತಮ್ಮ ಅಂದಿನ ಪತ್ನಿ ರೀನಾ ಅವರ ಬಳಿ ಅಳುತ್ತಿದ್ದಾಗಿ ಹೇಳಿದ ಆಮೀರ್, ಆ ಸಾಲು ಸಾಲು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸೋತಾಗ ಚಿತ್ರರಂಗ ತಮ್ಮನ್ನು 'ಒಂದು ಸಿನಿಮಾದ ಅದೃಷ್ಟ' ಎಂದು ಕರೆದಿತ್ತು ಎಂದರು. ಆ ಸಮಯದಲ್ಲಿ ತಾವು ಮುಳುಗುತ್ತಿರುವ ಕೆಸರಿನಲ್ಲಿ ಸಿಲುಕಿಕೊಂಡಂತೆ ಭಾಸವಾಗುತ್ತಿತ್ತು ಎಂದು ಆ ದಿನಗಳ ಕಟು ಸತ್ಯವನ್ನು ತೆರೆದಿಟ್ಟರು.

ಇನ್ನು ಪ್ರಶಸ್ತಿ ಸ್ವೀಕಾರ ಮಾಡಿದ ಸಂಭ್ರಮದಲ್ಲಿ ತಮ್ಮ ನಿರ್ಮಾಣದ ಮೊದಲ ಹಾಗೂ ಐಕಾನಿಕ್ ಸಿನಿಮಾ 'ಲಗಾನ್' ಪ್ರದರ್ಶನದ 25ನೇ ವರ್ಷದ ಸಂಭ್ರಮವನ್ನೂ ಆಮೀರ್ ಆಚರಿಸಲಿದ್ದಾರೆ. ಚಲನಚಿತ್ರೋತ್ಸವದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಸಿನಿಮಾ ನಿರ್ಮಾಣ ಎಂಬುದು ಪ್ರತಿಯೊಬ್ಬರ ಒಟ್ಟು ಶ್ರಮ ಮತ್ತು ಕಲಾತ್ಮಕ ಕೊಡುಗೆಯಾಗಿದೆ ಎಂದು ತಿಳಿಸಿ, ಪ್ರಶಸ್ತಿ ನೀಡಿದ ಆಯೋಜಕರಿಗೆ ಹಾಗೂ ನಿರ್ದೇಶಕ ಪೀಟರ್ ಚಾನ್ ಅವರಿಗೆ ಕೃತಜ್ಞತೆ ಸಲ್ಲಿಸಿದರು, (ಏಜೆನ್ಸೀಸ್​).