ಲಖನೌ: ವಿಧಾನಸಭಾ ಚುನಾವಣೆಗೆ ಇನ್ನು ನಾಲ್ಕೈದು ತಿಂಗಳು ಸಮಯವಿರುವಾಗಲೇ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ಗೆ ಭಾರಿ ದೊಡ್ಡ ಹಿನ್ನಡೆಯಾಗಿದ್ದು, ಮೂವರು ಎಸ್ಪಿ ಶಾಸಕರು ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ರಾಕೇಶ್ ಅವರು ಅಮೇಥಿಯ ಗೌರಿಗಂಜ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದರೆ, ಅಭಯ್ ಸಿಂಗ್ ಅಯೋಧ್ಯೆಯ ಗೋಸಾಯಿಗಂಜ್ ಅನ್ನು ಪ್ರತಿನಿಧಿಸುತ್ತಾರೆ ಮತ್ತು ವಿನೋದ್ ಚತುರ್ವೇದಿ ಅವರು ಜಾಲೌನ್ ಜಿಲ್ಲೆಯ ಕಲ್ಪಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. 2022ರ ಸಾರ್ವತ್ರಿಕ ಚುನಾವಣೆಯಲ್ಲಿ ಎಸ್ಪಿ ಪಕ್ಷದಿಂದ ಗೆದ್ದಿದ್ದ ಈ ಮೂವರು, 2024ರಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸುವ ಮೂಲಕ ಮೊಟ್ಟ ಮೊದಲ ಬಾರಿಗೆ ಪಕ್ಷಕ್ಕೆ ಬಹಿರಂಗವಾಗಿ ಸೆಡ್ಡು ಹೊಡೆದಿದ್ದರು.
ರಾಕೇಶ್ ಪ್ರತಾಪ್ ಸಿಂಗ್ ಅವರು ಸಮಾಜವಾದಿ ಪಕ್ಷದ ಟಿಕೆಟ್ನಲ್ಲಿ 2012, 2017 ಮತ್ತು 2022ರಲ್ಲಿ ಸತತ ಮೂರು ಬಾರಿ ಗೌರಿಗಂಜ್ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ. 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿ ಚಂದ್ರ ಪ್ರಕಾಶ್ ಮಿಶ್ರಾ ಮಾತಿಯಾರಿ ಅವರನ್ನು 6,963 ಮತಗಳ ಅಂತರದಿಂದ ಸೋಲಿಸಿದರು. 2024ರ ರಾಜ್ಯಸಭಾ ಚುನಾವಣೆಯಲ್ಲಿ ಎಸ್ಪಿ ವಿರುದ್ಧ ಬಂಡಾಯವೆದ್ದು ಬಿಜೆಪಿಗೆ ಮತ ಹಾಕಿದರು.
ಪಕ್ಷ ಸೇರ್ಪಡೆಯ ವಿಷಯವಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಕೇಶ್ ಸಿಂಗ್, ಇಂದಿನ ದಿನ (ಅಕ್ಟೋಬರ್ 14) ನನ್ನ ರಾಜಕೀಯ ಜೀವನದ ಅತ್ಯಂತ ಮಹತ್ವದ ಮತ್ತು ಭಾವನಾತ್ಮಕ ದಿನವಾಗಿದೆ. ನನಗೆ ಇದು ಕೇವಲ ಬಿಜೆಪಿಯ ಸದಸ್ಯತ್ವವನ್ನು ಪಡೆಯುವ ಅವಕಾಶವಲ್ಲ, ಬದಲಿಗೆ ನನ್ನ ನಂಬಿಕೆ, ನನ್ನ ಮೌಲ್ಯಗಳು ಮತ್ತು ನನ್ನ ತತ್ವಗಳಿಗೆ ಅನುಗುಣವಾಗಿ ಸನಾತನದ ರಕ್ಷಣೆಗಾಗಿ ಹೊಸ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸುವ ಅಮೂಲ್ಯ ದಿನವಾಗಿದೆ ಎಂದು ಬರೆದುಕೊಂಡಿದ್ದಾರೆ.
ಅಯೋಧ್ಯೆ ಜಿಲ್ಲೆಯ ಗೋಸಾಯಿಗಂಜ್ ಕ್ಷೇತ್ರದ ಶಾಸಕರಾಗಿರುವ ಅಭಯ್ ಸಿಂಗ್ ಕೂಡ ಸಮಾಜವಾದಿ ಪಕ್ಷದ ಪ್ರಮುಖ ನಾಯಕರಾಗಿದ್ದಾರೆ. ಪಕ್ಷದ ಹಿರಿಯ ನಾಯಕರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಅವರ ಹೆಸರು ಸುದ್ದಿಯಲ್ಲಿತ್ತು. ಅಭಯ್ ಸಿಂಗ್ ಸಹ ಸಮಾಜವಾದಿ ಪಕ್ಷದ ಟಿಕೆಟ್ನಲ್ಲಿ 2012 ಮತ್ತು 2022ರಲ್ಲಿ ಎರಡು ಬಾರಿ ಗೋಸಾಯಿಗಂಜ್ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಇಂದ್ರ ಪ್ರತಾಪ್ ಅಲಿಯಾಸ್ ಖಬ್ಬು ತಿವಾರಿ ವಿರುದ್ಧ ಸೋತಿದ್ದರು. 2022ರಲ್ಲಿ ಸಿಂಗ್ ಅವರು ಬಿಜೆಪಿ ಅಭ್ಯರ್ಥಿ ಆರತಿ ತಿವಾರಿ ಅವರನ್ನು 13,079 ಮತಗಳ ಅಂತರದಿಂದ ಸೋಲಿಸಿದರು.
ಜಾಲೌನ್ ಜಿಲ್ಲೆಯ ಕಲ್ಪಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ವಿನೋದ್ ಚತುರ್ವೇದಿ ಸಹ ಕೇಸರಿ ಧ್ವಜ ಹಿಡಿದಿದ್ದು, 2022ರಲ್ಲಿ ಸಮಾಜವಾದಿ ಪಕ್ಷದ ಟಿಕೆಟ್ನಲ್ಲಿ ಕಲ್ಪಿ ವಿಧಾನಸಭಾ ಕ್ಷೇತ್ರದಿಂದ ನಿಷಾದ್ (NISHAD) ಪಕ್ಷದ ಅಭ್ಯರ್ಥಿ ಛೋಟೆ ಸಿಂಗ್ ಅವರನ್ನು 2,816 ಮತಗಳಿಂದ ಸೋಲಿಸುವ ಮೂಲಕ ಗೆದ್ದಿದ್ದರು. ಕಲ್ಪಿ ಕ್ಷೇತ್ರವನ್ನು ಪ್ರತಿನಿಧಿಸುವ ಮೊದಲು, ಚತುರ್ವೇದಿ ಅವರು 2007 ರಲ್ಲಿ ಉತ್ತರ ಪ್ರದೇಶದ ಜಾಲೌನ್ ಜಿಲ್ಲೆಯ ಒರೈ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ನಿಂದ ಪ್ರತಿನಿಧಿಸಿದ್ದರು(ಏಜೆನ್ಸೀಸ್).