ಅಂಕಣ

ಒಗ್ಗರಣೆಯಲ್ಲಿ ಕರಿಬೇವು, ರಾಜಕಾರಣದಲ್ಲಿ ಮಹಿಳೆ..

ಇದು ಚುನಾವಣಾ ವರ್ಷ. ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಪಾಲು ಎಷ್ಟಿದೆ? ಮಹಿಳೆಯರಿಗೆ ಈ ಚುನಾವಣೆಯಲ್ಲಾದರೂ ‘ಪಾಲು’ ನೀಡಲು ಪಕ್ಷಗಳಿಗೆ ಸಾಧ್ಯವಾಗುತ್ತದೆಯೇ? ಬೇರೆ ಯಾವ ಕೆಲಸಕ್ಕೆ ರಾಜಕೀಯ ಪಕ್ಷಗಳು ಮಹಿಳೆಯರನ್ನು ಬಳಸಿಕೊಳ್ಳುತ್ತವೆ ಎಂಬುದರ ಕುರಿತು ಹಿರಿಯ ರಾಜಕಾರಣಿ ಮಾಜಿ ಸಚಿವೆ ಮೋಟಮ್ಮ ಇಲ್ಲಿ ವಿವರಿಸಿದ್ದಾರೆ.

| ಮೋಟಮ್ಮ ಮಾಜಿ ಸಚಿವೆ

ಜನಸಂಖ್ಯೆಯಲ್ಲಿ ಮಹಿಳೆಯರ ಪಾಲು ಹತ್ತಿರ ಹತ್ತಿರ ಶೇ.60ರಷ್ಟು ಇದ್ದರೂ ರಾಜಕೀಯವಾಗಿ ಸೂಕ್ತ ಪ್ರಾತಿನಿಧ್ಯ ಮಾತ್ರ ಸಿಕ್ಕಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗುತ್ತಿದ್ದರೂ ಪ್ರಾತಿನಿಧ್ಯಕ್ಕಾಗಿ ಬಡಿದಾಡುತ್ತಿರುವುದು ದುರದೃಷ್ಟಕರ. ಎನ್​ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಈಗ ಆದಿವಾಸಿ ಸಮುದಾಯದ ದ್ರೌಪದಿ ಮುಮು ಅವರಿಗೆ ಅವಕಾಶ ನೀಡಲಾಗಿದೆ. ಹಿಂದೆ ಯುಪಿಎ ಸರ್ಕಾರ ಪ್ರತಿಭಾ ಪಾಟೀಲ್ ಅವರಿಗೆ ಅವಕಾಶ ನೀಡಿತ್ತು. ಈ ರೀತಿ ಅಲ್ಲೊಂದು ಇಲ್ಲೊಂದು ಸ್ಥಾನಗಳನ್ನು ಕೊಟ್ಟು ಬಿಟ್ಟರೆ ಅದು ಸಮಾನ ಅವಕಾಶ ಅಲ್ಲ. ಮಹಿಳೆ ಇಂದು ಎಲ್ಲ ರಂಗಗಳಲ್ಲಿಯೂ ಸಾಕಷ್ಟು ಪ್ರಗತಿ ಸಾಧಿಸಿದ್ದಾಳೆ. ಆದರೆ ರಾಜಕೀಯದಲ್ಲಿ ಮಾತ್ರ ಪ್ರತಿರೋಧವನ್ನು ಎದುರಿಸುತ್ತಿದ್ದಾಳೆ.

ಮಹಿಳೆ ತನ್ನ ಹಕ್ಕನ್ನು ಹೋರಾಟ ಮಾಡಿಯೇ ಪಡೆಯಬೇಕಾಗಿದೆ. ಹೋರಾಟದ ಸಂದರ್ಭದಲ್ಲಿ ದೌರ್ಜನ್ಯ, ಮಾನಸಿಕ ಹಿಂಸೆಗಳನ್ನು ಎದುರಿಸಬೇಕಾಗುತ್ತದೆ. ಹೋರಾಟ ಮಾಡುವ ಸಲುವಾಗಿಯೇ ಹಿಂದೆ ಬಿಜೆಪಿ ಮಾಜಿ ಶಾಸಕಿ ಪ್ರಮೀಳಾ ನೇಸರ್ಗಿ ಅವರ ನೇತೃತ್ವದಲ್ಲಿಯೇ ಪ್ರಯತ್ನ ಮಾಡಿದ್ದೆವು. ಎಲ್ಲ ಪಕ್ಷದ ಸದಸ್ಯರು ಒಗ್ಗೂಡಿ ಸೂಕ್ತ ಪ್ರಾತಿನಿಧ್ಯ ಎಲ್ಲ ಪಕ್ಷಗಳಲ್ಲೂ ಸಿಗಬೇಕೆಂದು ಪ್ರಯತ್ನ ಮಾಡಿದ್ದೆವು. ಅಂತಹ ಪ್ರಯತ್ನವನ್ನು ಈಗಲೂ ಎಲ್ಲ ಪಕ್ಷಗಳ ಮಹಿಳಾ ಮುಖಂಡರು ಒಗ್ಗೂಡಿ ನಡೆಸುವುದು ಅನಿವಾರ್ಯವಾಗಿದೆ. ಎಲ್ಲ ಪಕ್ಷದ ಮಹಿಳೆಯರು ಒಂದು ವೇದಿಕೆ ಮಾಡಿಕೊಂಡು ಹೋರಾಟ ನಡೆಸಿದಾಗ ಮಾತ್ರ ಸಮಾನ ಅವಕಾಶ ಗಳಿಸಲು ಸಾಧ್ಯವಾಗುತ್ತದೆ. ಪಂಚಾಯಿತಿ ಸಂಸ್ಥೆಗಳಲ್ಲಿ ಶೇ.50ರಷ್ಟು ಮೀಸಲಾತಿ ಮಹಿಳೆಯರಿಗೆ ಸಿಕ್ಕಿದೆ. ಆದರೆ ಶಾಸನಸಭೆ ಮತ್ತು ಸಂಸತ್​ನಲ್ಲಿ ಸಿಕ್ಕಿಲ್ಲ. ಕಿರಣ್ ಮಜುಂದಾರ್ ಷಾ ಹೇಗೆ ಉದ್ಯಮ ಕ್ಷೇತ್ರದಲ್ಲಿ ಮುಂದೆ ಬಂದಿದ್ದಾರೆಯೋ ಅದೇ ರೀತಿಯಲ್ಲಿ ರಾಜಕೀಯ ಸೇರಿ ಎಲ್ಲ ರಂಗಗಳಲ್ಲಿ ಮಹಿಳೆಯರು ಮುಂದೆ ಬರಬೇಕಾಗಿದೆ. ಮಹಿಳಾ ಪ್ರಾತಿನಿಧ್ಯ ಎಂಬುದು ಕೇವಲ ಬಾಯಿ ಮಾತಿನಲ್ಲಿ ಇರಬಾರದು ಅಷ್ಟೇ. ಪುರುಷರು ಏನೋ ಕರಾಮತ್ತು ಮಾಡಿ ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತಾರೆ. ಮಹಿಳೆಯರಿಗೆ ಆ ಎಲ್ಲ ತಂತ್ರಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಮಹಿಳೆಯರ ವಿರುದ್ಧ ಮಹಿಳೆಯರೇ ಸ್ಪರ್ಧಿಯಾದಾಗ ಮಾತ್ರ ಶಾಸನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ಇರುತ್ತದೆ. ಎಲ್ಲ ಪಕ್ಷಗಳಲ್ಲಿಯೂ ಮಹಿಳಾ ವಿಭಾಗಗಳಿವೆ, ಆ ವಿಭಾಗಗಳು ಮಾಡುವ ಶಿಫಾರಸುಗಳನ್ನು ಟಿಕೆಟ್ ಕೊಡುವ ಹಂತದಲ್ಲಿ ಪರಿಗಣನೆಗೆ ತೆಗೆದುಕೊಳ್ಳಬೇಕು. ಯಾವುದೇ ಹಂತದ ಆಡಳಿತದಲ್ಲಿ ಮಹಿಳಾ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದರೆ ಉತ್ತಮ ಕೆಲಸವಾಗುತ್ತದೆ, ಭ್ರಷ್ಟಾಚಾರ ನಿಯಂತ್ರಣಕ್ಕೆ ಬರುತ್ತದೆ. ಸ್ವಚ್ಛ ಆಡಳಿತ ನೀಡಲು ಸಾಧ್ಯವಾಗುತ್ತದೆ.

ಮೀಸಲಾತಿ ಅಗತ್ಯ: ಮಹಿಳಾ ಜನಸಂಖ್ಯೆಗೆ ಅನುಗುಣವಾಗಿ ಟಿಕೆಟ್ ಕೊಡುವಂತೆ ಎಷ್ಟು ಬಾಯಿ ಬಡಿದುಕೊಂಡರೂ ಯಾವ ಪಕ್ಷವೂ ತಲೆಗೆ ಹಾಕಿಕೊಳ್ಳುವುದಿಲ್ಲ. ಆದ್ದರಿಂದ ಮಹಿಳಾ ಮೀಸಲಾತಿಯನ್ನೇ ಜಾರಿಗೆ ತರುವುದು ಇಂದಿನ ತುರ್ತು ಅಗತ್ಯವೂ ಆಗಿದೆ. ಮಹಿಳಾ ನಾಯಕಿಯರಲ್ಲಿ ಈಗ ಒಗ್ಗಟ್ಟು ಇಲ್ಲ. ಮೀಸಲಾತಿ ಬಂದರೆ ಒಗ್ಗಟ್ಟು ಮೂಡುತ್ತದೆ. ಅನೇಕ ಸಮರ್ಥ ಮಹಿಳಾ ನಾಯಕಿಯರು ನಮ್ಮ ದೇಶದಲ್ಲಿ ಆಡಳಿತ ನಡೆಸಿದ್ದಾರೆ. ಇಂದಿರಾ ಗಾಂಧಿ, ಜಯಲಲಿತಾ, ಮಾಯಾವತಿ, ಮಮತಾ ಬ್ಯಾನರ್ಜಿ, ಸುಷ್ಮಾ ಸ್ವರಾಜ್, ಮೀರಾಕುಮಾರ್ ಹೀಗೆ ಅನೇಕರನ್ನು ಉದಾಹರಿಸಬಹುದಾಗಿದೆ. ಅದರಲ್ಲಿಯೂ ಮಮತಾ ಬ್ಯಾನರ್ಜಿ ಸ್ವಂತ ಪಕ್ಷವನ್ನೇ ಕಟ್ಟಿ ಬೆಳೆದಿದ್ದಾರೆ.

ಒಗ್ಗರಣೆಯ ಕರಿಬೇವು: ಎಲ್ಲ ಪಕ್ಷಗಳಲ್ಲಿಯೂ ಇಂದು ಮಹಿಳೆಯರ ಸ್ಥಿತಿ ಹೇಗಿದೆ ಎಂದರೆ ಒಗ್ಗರಣೆಯಲ್ಲಿನ ಕರಿಬೇವಿನ ಸೊಪ್ಪಿನ ರೀತಿಯಾಗಿದೆ. ಆ ರೀತಿ ಆಗಬಾರದು. ಎಲ್ಲ ಮಹಿಳೆಯರು ಇವತ್ತು ದ್ವಿಪಾತ್ರ ನಿರ್ವಹಣೆ ಮಾಡುತ್ತಿದ್ದಾರೆ. ಮನೆಯ ಜವಾಬ್ದಾರಿ ಮತ್ತು ಕೆಲಸದ ನಿರ್ವಹಣೆ. ರಾಜಕೀಯ ಎಂಬುದು ಮುಳ್ಳಿನ ಹಾಸಿಗೆಯಾಗಿದೆ. ಆದರೆ ಅದನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಮಹಿಳೆಗೆ ಇದೆ. ರಾಜಕೀಯದಲ್ಲಿ ಹೆಚ್ಚಿನ ಅವಕಾಶ ಸಿಕ್ಕರೆ ಚುರುಕಾದ ಮತ್ತು ಸಮರ್ಥವಾದ ಆಡಳಿತ ನೀಡಬಲ್ಲರು.

ಆಸ್ಪದ ನೀಡಬಾರದು: ಮಹಿಳೆಯರಿಗೆ ಕಿರುಕುಳ, ದೌರ್ಜನ್ಯ ಇದ್ದೇ ಇರುತ್ತದೆ. ಅಮೆರಿಕದಲ್ಲಿ ಅನೇಕ ಅಧ್ಯಕ್ಷರ ಮೇಲೆ ಲೈಂಗಿಕ ಕಿರುಕುಳದ ಆರೋಪ ಬಂದಿರಲಿಲ್ಲವೇ? ಮಹಿಳೆಯಾದವಳು ಯಾವತ್ತೂ ದೌರ್ಜನ್ಯಕ್ಕೆ ಅವಕಾಶ ನೀಡಬಾರದು ಅಷ್ಟೇ.

ಅವಕಾಶ ಬೇಡ

ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರ ಪತಿಯಂದಿರೇ ಅಧಿಕಾರ ನಡೆಸುತ್ತಾರೆ ಎಂದು ಅಲ್ಲೊಂದು ಇಲ್ಲೊಂದು ಆರೋಪಗಳಿವೆ. ಅಂತಹ ದೊಡ್ಡ ಮಟ್ಟದಲ್ಲಿ ಆರೋಪಗಳಿಲ್ಲ. ಮಹಿಳೆಯರು ತಮ್ಮ ಅಧಿಕಾರದಲ್ಲಿ ಬೇರೆಯವರ ಮಧ್ಯ ಪ್ರವೇಶಕ್ಕೆ ಅವಕಾಶ ನೀಡಬಾರದು. ಸ್ಥಳೀಯ ಸಂಸ್ಥೆಗಳಿಗೆ ಗೆದ್ದಿರುವ ಎಲ್ಲ ಮಹಿಳೆಯರು ಪಕ್ಷ ಮರೆತು ಒಗ್ಗಟ್ಟಿನಿಂದ ಇದ್ದರೆ ಇಂತಹ ಆರೋಪಗಳು ಬಾರದಂತೆ ಅಧಿಕಾರ ನಡೆಸಲು ಸಾಧ್ಯತೆಗಳಿವೆ. ಅಂತಹ ಧೈರ್ಯ ಹಾಗೂ ಸ್ಥೈರ್ಯ ತೋರಿಸಬೇಕು. ನನ್ನ ಪತಿ ಕೃಷಿ ಅಧಿಕಾರಿಯಾಗಿದ್ದರು. ಅವರು ಎಂದೂ ನನ್ನ ಕರ್ತವ್ಯದಲ್ಲಿ ಮೂಗು ತೂರಿಸಲು ಬರಲಿಲ್ಲ. ಅದೇ ಮಾದರಿಯನ್ನು ಎಲ್ಲರೂ ಅನುಸರಿಸುವುದು ಒಳ್ಳೆಯದು.

ಕನಿಷ್ಠ ವಿದ್ಯಾರ್ಹತೆ ಅಗತ್ಯ

ಮೂಡಿಗೆರೆ ತಾಲೂಕಿನ ಆಲೂರು ಪಂಚಾಯಿತಿಯಲ್ಲಿ ಹಿಂದೆ ಅವಿದ್ಯಾವಂತೆಯೊಬ್ಬರು ಅಧ್ಯಕ್ಷರಾಗಿದ್ದರು. ಆದರೆ ಅವರು ತಮ್ಮ ಕರ್ತವ್ಯದ ಮೂಲಕ ಉತ್ತಮ ಅಧ್ಯಕ್ಷೆ ಎಂಬ ಪ್ರಶಸ್ತಿಗೆ ಪಾತ್ರರಾದರು. ಆ ರೀತಿ ನಡವಳಿಕೆಯನ್ನು ತೋರಲು ಅವಕಾಶ ಇದೆ. ಆದರೆ ಈಗ ಸಂಸ್ಥೆಗಳು ತುಂಬಾ ಬೆಳೆಯುತ್ತಿರುವುದರಿಂದ ಕನಿಷ್ಠ ಪ್ರಮಾಣದ ವಿದ್ಯಾರ್ಹತೆ ಅಗತ್ಯವಿದೆ. ಕೊನೆಯ ಮಾತು ರಾಜಕೀಯಕ್ಕೆ ಬರುವ ಮಹಿಳೆಯರಿಗೆ ಮನೆಯಲ್ಲಿಯೂ ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಆಕೆ ಸಮರ್ಥ ರಾಜಕಾರಣಿಯಾಗಲು ಸಾಧ್ಯವಾಗುತ್ತದೆ.