ಕೆಲವರು ಜೀವನದಲ್ಲಿ ಏನನ್ನೂ ಮಾಡದೆ ಸುಮ್ಮನೆ ಕಾಲಹರಣ ಮಾಡುವುದನ್ನು ನೋಡಿರುತ್ತೀರಿ. ಅದೃಷ್ಟ ಇದ್ದ ಹಾಗೆ ಆಗುತ್ತದೆ ಅಂತ ಅದೃಷ್ಟದ ಮೇಲೆ ಭಾರ ಹಾಕಿ ಕೊನೆಯಲ್ಲಿ ದುಃಖದಿಂದ ನರಳುತ್ತಾರೆ. ಅವರಲ್ಲಿ ಗೆಲ್ಲಲು ಬೇಕಾದ ಛಲವಾಗಲಿ, ಗುರಿಯಾಗಲಿ ಇರೋಲ್ಲ. ಈ ಲೇಖನ ಅವರಿಗಾಗಿ ಅಲ್ಲ. ಇದು ನಿಮಗಾಗಿಯೇ. ಯಾಕೆಂದರೆ ನೀವು ಇದನ್ನು ಓದುತ್ತಿರುವುದೇ ಅದಕ್ಕೆ ಸಾಕ್ಷಿ.
ವ್ಯಾಪಾರದಲ್ಲಿ ಹಲವಾರು ಬಗೆಯ ಜನರೊಡನೆ ವ್ಯವಹರಿಸಬೇಕಾಗುತ್ತೆ. ಇವರೆಲ್ಲರೊಡನೆ ವಿಶ್ವಾಸ ಬೆಳೆಸಿಕೊಳ್ಳೋದು ಬಹಳ ಮುಖ್ಯ. ಮೊದಲನೆಯದಾಗಿ, ಸಮಯ ಪಾಲನೆ- ಅಂದರೆ ಹೇಳಿದ ಸಮಯಕ್ಕಿಂತ ಸ್ವಲ್ಪ ಮೊದಲೇ ಆ ಜಾಗದಲ್ಲಿರೋದು ಒಳ್ಳೆಯದು. ಸಮಯಕ್ಕೆ ಸರಿಯಾಗಿ ಹೋಗದಿದ್ದಲ್ಲಿ ಮುಂದಿನ ಎಲ್ಲ ವ್ಯವಹಾರಗಳಲ್ಲೂ ವಿಳಂಬ ಆಗಬಹುದೆಂದು ಗ್ರಾಹಕರು ಭಾವಿಸುತ್ತಾರೆ!
ನನಗೆ ಗೊತ್ತಿದ್ದಂತೆ ಜರ್ಮನಿಯಲ್ಲಿ ನಡೆದ ಘಟನೆಯಿದು. ನನ್ನ ಸಂಬಂಧಿಕನೊಬ್ಬ ದೊಡ್ಡಮೊತ್ತದ ಆರ್ಡರೊಂದನ್ನು ತರಲು ಒಂದು ಕಂಪನಿಯನ್ನು ಸಂದರ್ಶಿಸಬೇಕಾಯ್ತು. ಆದರೆ ವಿಪರೀತ ಮಳೆಯ ಕಾರಣ 15 ನಿಮಿಷ ತಡವಾಗಿ ಆ ಕಂಪನಿಗೆ ಹೋದ. ತಡವಾದುದಕ್ಕೆ ಕಾರಣ ಹೇಳಿದ. ಬರಿಯ ಮಳೆಯ ಕಾರಣದಿಂದ ತಡವಾಯಿತೆಂದು ಹೇಳೋದಾದ್ರೆ ಮುಂದೆ ಇನ್ಯಾವುದೋ ಕಾರಣದಿಂದ ಪೂರೈಕೆ ಕೂಡ ತಡವಾಗಬಹುದೆಂದು ಹೇಳುವ ಸಾಧ್ಯತೆಯಿದೆ ಎಂದು ಅಭಿಪ್ರಾಯ ಪಟ್ಟ ಕಂಪನಿ ತನ್ನ ಆರ್ಡರನ್ನೇ ರದ್ದುಮಾಡಿತು. ನಿಗದಿತ ಸಮಯಕ್ಕೆ ಪೂರೈಕೆಯಾದರೆ ಮಾತ್ರ ಆ ವಸ್ತು ಉಪಯೋಗಕ್ಕೆ ಬರುತ್ತೆ. ಉದಾಹರಣೆಗೆ, ಚಳಿಗಾಲದಲ್ಲಿ ಪೂರೈಕೆ ಮಾಡಬೇಕಾದ ಉಣ್ಣೆಯ ಬಟ್ಟೆಗಳನ್ನು ಬೇಸಿಗೆಯಲ್ಲಿ ಪೂರೈಕೆ ಮಾಡಿದ್ರೆ ಏನು ಲಾಭ? ಖರೀದಿಸಿದಾತ ಇನ್ನೊಂದು ಚಳಿಗಾಲದವರೆಗೆ ಅವುಗಳನ್ನು ಇಟ್ಟುಕೊಂಡು ಕಾಯಬೇಕಾಗುತ್ತೆ. ಇದರ ಮೇಲೆ ಸುರಿದ ಬಂಡವಾಳ ಪ್ರಯೋಜನಕ್ಕೆ ಸಿಗದೆ ಇದೊಂದು ‘ಡೆಡ್ ಇನ್ವೆಸ್ಟ್ಮೆಂಟ್’ ಆಗುತ್ತದೆ. ಅಲ್ಲದೆ ವಿದೇಶಗಳಲ್ಲಿ ದಾಸ್ತಾನು ಕೋಣೆ ತೀರಾ ದುಬಾರಿ. ಆದ್ದರಿಂದ ಯಾವುದೇ ಆರ್ಡರ್ ತೆಗೆದುಕೊಳ್ಳುವಾಗ ಸರಿಯಾಗಿ ಲೆಕ್ಕ ಹಾಕಿ ಒಪ್ಪಿಕೊಳ್ಳಿ. ಎಷ್ಟೇ ಲೆಕ್ಕ ಹಾಕಿದರೂ ನಮ್ಮ ಲೆಕ್ಕ ತಪ್ಪಿಹೋಗಲು ಕಾರಣ ನಮ್ಮ ದೇಶದಲ್ಲಿ ಆಗಾಗ ಹೋಗುವ ಕರೆಂಟು, ಇದ್ದಕ್ಕಿದ್ದಂತೆ ಬರುವ ಹಬ್ಬ ಹರಿದಿನಗಳು, ಹೇಳದೇ ಕೇಳದೇ ರಜಾ ಹಾಕುವ ನಮ್ಮ ಕೆಲಸಗಾರರು. ಆದ್ದರಿಂದ ನಾನು ನನಗೆ ಬೇಕಾದ ಸಮಯಕ್ಕಿಂತ ಎರಡರಷ್ಟು ಜಾಸ್ತಿ ಸಮಯ ತೆಗೆದುಕೊಳ್ಳುತ್ತೇನೆ. ಹಾಗೆ ತೆಗೆದುಕೊಂಡರೂ ಜೀವನದಲ್ಲಿ ಈ ಸಲ ಹೇಳಿದ ಸಮಯಕ್ಕೆ ಕೊಡಲಾಗಲಿಲ್ಲ. ಅದಕ್ಕೆ ಕಾರಣ ಕೋವಿಡ್-19. ಸದ್ಯ ಅವರಿಗೂ ಅದೇ ಸಮಸ್ಯೆ ಇದ್ದುದರಿಂದ ನಾನು ವಿವರಿಸಿ ಹೇಳಬೇಕಾದ ಅವಶ್ಯಕತೆ ಬೀಳಲಿಲ್ಲ.
ನಿಮಗೋಸ್ಕರ ಯಾರೂ ಕಾಯುವಂತೆ ಮಾಡಬೇಡಿ. ಉದಾಹರಣೆಗೆ, 100 ಜನರ ಗುಂಪಿಗೆ ನೀವು ಯಾವುದೋ ಭಾಷಣ ಮಾಡಬೇಕಾಗಿರುತ್ತದೆ. ಜನರೆಲ್ಲ ನಿಮ್ಮ ನಿರೀಕ್ಷೆಯಲ್ಲಿ ಇರುತ್ತಾರೆ. ಹತ್ತು ನಿಮಿಷ ತಡವಾಗಿ ಹೋಗುತ್ತೀರಿ. ಇದರ ಪರಿಣಾಮ ಏನೆಂದು ಯೋಚಿಸಿ. ಹತ್ತು ನಿಮಿಷದ ವಿಳಂಬದಿಂದಾಗಿ 100 ಜನರ ತಲಾ ಹತ್ತು ನಿಮಿಷ ಅಂದರೆ ಒಟ್ಟು 1000 ನಿಮಿಷ ವೃಥಾ ವ್ಯಯವಾಗಿರುತ್ತದೆ. ಗೊತ್ತಿದೆಯಲ್ಲ- ಕಳೆದುಹೋದ ವಸ್ತು ಮರಳಿ ಸಿಗಬಹುದು. ಆದರೆ, ಕಳೆದುಹೋದ ಕಾಲ ಮತ್ತು ಅವಕಾಶ ಮರಳಿ ಬರುವುದಿಲ್ಲ. ಆದ್ದರಿಂದ ನೀವೂ ಯಾರನ್ನೂ ಕಾಯಿಸಬೇಡಿ ಮತ್ತು ಕಾಯುತ್ತ ಕೂರಬೇಡಿ. ಇದನ್ನೂ ಓದಿ: ಹಣ-ಝಣ ಅಂಕಣ: ಎಲ್ಲರೂ ನಂಬಿ ಕೆಟ್ಟವರೇ ಆದರೂ ಧೃತಿಗೆಡಬೇಡಿ!
ಕೆಲವರಿಗೆ ಏನು ಮಾಡಿದರೂ ಹೇಳಿದ ಸಮಯಕ್ಕೆ ಗುರಿ ಮುಟ್ಟಲು ಸಾಧ್ಯವಾಗೋದೇ ಇಲ್ಲ. ಅದಕ್ಕೆ ಕಾರಣ ಅವರಿಗೆ ಗಮ್ಯ ತಲುಪಲು ಎಷ್ಟು ಸಮಯ ಬೇಕು ಎಂದು ಲೆಕ್ಕ ಹಾಕಲು ಬರುವುದಿಲ್ಲ. ಆ ಥರದವರು ಎಷ್ಟು ಸಮಯ ಬೇಕಾಗುತ್ತೆ ಅನ್ನಿಸುತ್ತದೋ ಅದರ ಎರಡರಷ್ಟು ಅಥವಾ ಮೂರರಷ್ಟು ಸಮಯ ತೆಗೆದುಕೊಳ್ಳಬೇಕು. ಉದಾಹರಣೆಗೆ, ಹತ್ತು ನಿಮಿಷ ತಡವಾಗುತ್ತದೆ ಅನ್ನಿಸಿದರೆ ಇಪ್ಪತ್ತು ಅಥವಾ ಮೂವತ್ತು ನಿಮಿಷ ಎಂದು ಹೇಳಿ. ಆಗ ಯಾರೂ ಸುಮ್ಮನೆ ಕಾಯುವ ಪ್ರಮೇಯವಿಲ್ಲ.
ಯಾರೋ ಒಬ್ಬ ಪ್ರಮುಖ ವ್ಯಕ್ತಿಯನ್ನು ಕಾಣಲು ನಿಮ್ಮ ಸ್ನೇಹಿತರ ಜತೆ ಹೋಗಬೇಕಾಗುತ್ತದೆ. ಬೆಳಗ್ಗೆ ಹತ್ತು ಗಂಟೆಗೆ ಭೇಟಿಯ ಸಮಯ ನಿಗದಿ ಆಗಿರುತ್ತದೆ. ಮನೆಯಿಂದ ಅಲ್ಲಿಗೆ ಅರ್ಧಗಂಟೆಯ ದಾರಿ. ಆದರೂ ಮುಂಜಾಗ್ರತಾ ಕ್ರಮವಾಗಿ ಬೆಳಗ್ಗೆ ಒಂಬತ್ತು ಗಂಟೆಗೆ ಹೊರಡುವುದೆಂದು ಯೋಜನೆ ಹಾಕಿಕೊಂಡಿರುತ್ತೀರಿ. ಅಂತೆಯೇ ಸ್ನೇಹಿತನಿಗೆ ಒಂಬತ್ತು ಗಂಟೆಗೆ ಸರಿಯಾಗಿ ಮನೆಗೆ ಬರುವಂತೆ ಹೇಳಿರುತ್ತೀರಿ. ಆದರೆ ಸ್ನೇಹಿತ ಯಾವುದೋ ಕಾರಣದಿಂದ ಅರ್ಧ ಗಂಟೆ ತಡವಾಗಿ ಬರುತ್ತಾನೆ. ಈ ಮಧ್ಯೆ ಆತನನ್ನು ಸಂರ್ಪಸಲೂ ನಿಮಗೆ ಸಾಧ್ಯವಾಗುವುದಿಲ್ಲ. ಕಾಯುತ್ತಿರುತ್ತೀರಿ. ಆತ ಬಂದ ತಕ್ಷಣ ಗಡಿಬಿಡಿಯಿಂದ ಹೊರಡುತ್ತೀರಿ. ವಿಪರೀತ ವಾಹನ ದಟ್ಟಣೆ ಇದ್ದುದರಿಂದ ತಡವಾಗಿ ಗಮ್ಯ ಸ್ಥಾನವನ್ನು ತಲಪುತ್ತೀರಿ. ಅಷ್ಟು ಹೊತ್ತಿಗೆ ಆ ವ್ಯಕ್ತಿ ಅಲ್ಲಿಂದ ಹೊರಟುಹೋಗಿರುತ್ತಾನೆ. ಇಂಥ ಸಂದರ್ಭಗಳಲ್ಲಿ ಅವಶ್ಯಕ ವ್ಯಕ್ತಿಗಳನ್ನು ಅವರವರ ಪಾಡಿಗೆ ಗಮ್ಯಸ್ಥಾನಕ್ಕೆ ನಿಗದಿತ ವೇಳೆಯಲ್ಲಿ ಬರಲು ತಿಳಿಸಬೇಕು. ಎಲ್ಲರೂ ಅವರವರ ಪ್ರಯಾಣದ ಜಾಗ್ರತೆಯನ್ನು ಮಾಡಿಕೊಂಡಲ್ಲಿ ಕೆಲಸ ಕೆಡುವುದಿಲ್ಲ. ಒಮ್ಮೆ ಸರಿಯಾದ ಸಮಯಕ್ಕೆ ತಲುಪುವುದು ಅಭ್ಯಾಸವಾದರೆ ಯಾವಾಗಲೂ ಸಮಯಕ್ಕೆ ಸರಿಯಾಗಿ ತಲುಪುತ್ತೀರಿ. ‘ನಾನು ಸಿಕ್ಕಾಪಟ್ಟೆ ಪಂಕ್ಚ್ಯುವಲ್’ ಅಂತ ಕೊಚ್ಚಿಕೊಳ್ಳುತ್ತ ಇರಿ. ಹೀಗೆ ಮಾಡುವುದರಿಂದ ಜವಾಬ್ದಾರಿ ಹೆಚ್ಚಾಗಿ, ಸಮಯಕ್ಕೆ ಸರಿಯಾಗಿ ತಲುಪುತ್ತೀರಿ. ಇದನ್ನೂ ಓದಿ: ಹಣ-ಝಣ ಅಂಕಣ| ಪೂರ್ತಿ ಪ್ರಯತ್ನ ಹಾಕಿ, ಅಸಾಧ್ಯ ಎಂಬುದು ಯಾವುದೂ ಇಲ್ಲ!
ನಾನು ಎಂದೂ ತಡವಾಗಿ ಎಲ್ಲಿಯೂ ತಲುಪಿದ್ದಿಲ್ಲ. ಸಮಯಕ್ಕಿಂತ ಮೊದಲೇ ಕಾರ್ಯಕ್ರಮಗಳಿಗೆ ಹೋಗಿ ಗಂಟೆ ಗಟ್ಲೆ ಕಾದಾಗ ಇನ್ನು ಲೈಫ್ನಲ್ಲೇ ಸರಿಯಾದ ಸಮಯಕ್ಕಿಂತ ಮೊದಲೇ ಹೋಗುವುದಿಲ್ಲ ಎಂದು ಶಪಥ ಮಾಡಿ ಕೂಡ ಬೇಗ ತಲುಪಿದ್ದೇ ಆಗಿದೆ. ಗ್ರಾಹಕರಿಗೆ ಸರಬರಾಜು ತಡವಾದರೆ ಆಗುವ ತೊಂದರೆ ಏನೆಂಬುದನ್ನು ಸ್ವಂತ ಅನುಭವದ ಮೂಲಕ ವಿವರಿಸುತ್ತೇನೆ. ಡೇವಿಡ್ ಸೂಟ್ ಎನ್ನುವ ಅಮೆರಿಕದ ಗ್ರಾಹಕ 20 ಲಕ್ಷ ರೂಪಾಯಿ ಸಾಮಗ್ರಿಗಳಿಗೆ ಆರ್ಡರನ್ನು ಮುಂಗಡ ಪೂರ್ತಿ ಹಣದೊಂದಿಗೆ ಕೊಟ್ಟ. ಒಂದು ತಿಂಗಳಿನೊಳಗೆ ವಸ್ತುಗಳನ್ನು ಕಳುಹಿಸುತ್ತೇನೆಂದು ಒಪ್ಪಿಕೊಂಡೆ. ಕಾರಣಾಂತರಗಳಿಂದ ಅದು ಒಂದು ತಿಂಗಳು ತಡವಾಯ್ತು.
ನಂತರದ ಸರದಿ ಡೇವಿಡ್ನದ್ದು. 8 ಲಕ್ಷ ರೂಪಾಯಿ ಆರ್ಡರ್ ಕೊಟ್ಟು, ಹಣವನ್ನು ವಸ್ತುಗಳು ತಲಪಿದ ನಂತರ ಕೊಡುವುದಾಗಿ ಹೇಳಿದ. ಮೊದಲ ಬಾರಿ ನನ್ನಿಂದ ಆದ ತಪ್ಪಿಗಾಗಿ ಈ ಒಪ್ಪಂದಕ್ಕೆ ಒಪ್ಪಿದೆ ಹಾಗೂ ವಸ್ತುಗಳನ್ನು ಕಳುಹಿಸಿದೆ. ಆದರೆ ಹತ್ತು ವರ್ಷಗಳ ಹಿಂದೆ ನಡೆದ ಈ ವ್ಯವಹಾರದಲ್ಲಿ ಒಂದು ನಯಾ ಪೈಸೆಯಷ್ಟು ಹಣವನ್ನು ಕೂಡ ಆತ ಈವರೆಗೆ ಪಾವತಿಸಿಲ್ಲ! ಇದರಿಂದ ನಾನು ಕಲಿತ ಪಾಠ ಎಂದರೆ ತಪು್ಪ ನಮ್ಮಿಂದ ಆಗದ ಹಾಗೆ ನೋಡಿಕೊಳ್ಳಬೇಕು. ತಪ್ಪಾದರೆ ಎದುರಿನವರು ಅದರ ಫಾಯಿದೆ ಪಡೆದು ಮೋಸ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಸರಬರಾಜನ್ನು ಒಪ್ಪಿಕೊಂಡ ಸಮಯಕ್ಕೇ ಮಾಡಿ.
ಜೋಕು: ಒಮ್ಮೆ ಹರಿದುಹೋದ ಚಪ್ಪಲಿಯನ್ನು ರಿಪೇರಿ ಮಾಡಲು ಕೊಟ್ಟೆ. ಅರ್ಜೆಂಟ್ ಬೇಕು ಅಂದರೂ ಐದು ನಿಮಿಷದಲ್ಲಿ ಆಗೋ ಕೆಲಸಕ್ಕೆ ಮೋಚಿ, ‘ನಾಳೆ ಬನ್ನಿ ಖಂಡಿತ ಮಾಡಿ ಇಡುತ್ತೇನೆ’ ಎಂದ. ಸರಿ ಎಂದು ಚಪ್ಪಲಿ ಅಂಗಡಿಗೆ ಹೋಗಿ ಹೊಸ ಚಪ್ಪಲಿ ಖರೀದಿಸಿದೆ. ಚಪ್ಪಲಿ ರಿಪೇರಿಗೆ ಕೊಟ್ಟದ್ದು ಒಂದು ವರ್ಷದ ನಂತರ ನೆನಪಾಗಿ ಮೋಚಿಯಲ್ಲಿಗೆ ಹೋಗಿ ಅವನಲ್ಲಿ ಮಾರನೇ ದಿನ ನಾನು ಹೋಗದಿದ್ದಕ್ಕೆ ಕ್ಷಮೆ ಯಾಚಿಸಿ ಚಪ್ಪಲಿ ಕೊಡಲು ಹೇಳಿದೆ. ಆತ ತನ್ನಲ್ಲಿದ್ದ ಎಲ್ಲ ಚಪ್ಪಲಿಗಳ ರಾಶಿಯಿಂದ ನನ್ನ ಚಪ್ಪಲಿ ಹುಡುಕಿ ತೆಗೆದು, ‘ನಾಳೆ ಬನ್ನಿ, ಖಂಡಿತ ಮಾಡಿ ಇಡುತ್ತೇನೆ’ ಎಂದ.
(ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)