More

    ಹಣ-ಝಣ ಅಂಕಣ| ಪೂರ್ತಿ ಪ್ರಯತ್ನ ಹಾಕಿ, ಅಸಾಧ್ಯ ಎಂಬುದು ಯಾವುದೂ ಇಲ್ಲ!

    ಯಶಸ್ಸು ಗಳಿಸುವುದು ಅಸಾಧ್ಯ ಅಲ್ಲ, ಕಷ್ಟಸಾಧ್ಯ. ಕೆಲವೇ ಜನರಿಗೆ ತಲುಪಲು ಸಾಧ್ಯವಾಗುವಂಥ ದಟ್ಟವಾದ ಕಾಡಿನಲ್ಲಿ ವಾಸಿಸುವ ಕಾಡುಪ್ರಾಣಿಯ ಹೆಸರೇ ಯಶಸ್ಸು. ಇದು ತುಂಬ ವಿರಳ. ಇದರ ಬೇಟೆ ತುಂಬ ಅಪಾಯಕರ, ಅತ್ಯಂತ ಪ್ರಯಾಸಕರ, ಹಣ-ಝಣ ಅಂಕಣ| ಪೂರ್ತಿ ಪ್ರಯತ್ನ ಹಾಕಿ, ಅಸಾಧ್ಯ ಎಂಬುದು ಯಾವುದೂ ಇಲ್ಲ!ದೀರ್ಘವಾದ ಪ್ರಯಾಣ. ಪ್ರಯಾಣದುದ್ದಕ್ಕೂ ನಿಮ್ಮ ಹೃದಯವನ್ನು, ಶರೀರವನ್ನು ಘಾಸಿಗೊಳಿಸಬಹುದಾದ ಭಯಾನಕ ವ್ಯಾಘ್ರ, ವಿಷದ ಹಾವುಗಳು, ಇಡಿಯಾಗಿ ನುಂಗುವ ಹೆಬ್ಬಾವುಗಳು, ಮೋಸದಿಂದ ಬೆನ್ನ ಮೇಲೆ ಎರಗುವ ನರಿಗಳು, ಇನ್ನೂ ಹಲವಾರು ವಿಷಜಂತುಗಳು ನಿಮ್ಮನ್ನು ಹೆದರಿಸುತ್ತವೆ. ನೆತ್ತಿಯ ಮೇಲಿರುವ ಸೂರ್ಯನ ಸುಡುಬಿಸಿಲಿನಿಂದ ನಿಮ್ಮ ಚರ್ಮವೆಲ್ಲ ಸುಟ್ಟು ಬೊಬ್ಬೆ ಬಂದಿರುತ್ತದೆ. ಜಿಗಣೆಗಳು ನಿಮ್ಮ ರಕ್ತ ಹೀರುತ್ತಿರುತ್ತವೆ. ಪ್ರಯಾಣದಲ್ಲಿ ಕೆಲವೊಮ್ಮೆ ಯಶಸ್ಸು ಮರೀಚಿಕೆ. ಇದನ್ನು ವಶಪಡಿಸಿಕೊಳ್ಳುವುದು ಅಸಾಧ್ಯವೆನಿಸತೊಡಗುತ್ತದೆ. ಆದರೆ ಒಮ್ಮೆ ಪ್ರಯಾಣ ಪ್ರಾರಂಭಿಸಿದ ನಂತರ ಹಿಂದಿರುಗುವ ಪ್ರಶ್ನೆಯೇ ಇಲ್ಲ. ಯಾಕೆಂದರೆ, ನೀವೀಗಾಗಲೇ ದಂಡಕಾರಣ್ಯದ ನಡುವೆ ಇದ್ದೀರಿ. ಹಿಂದೆ ಬರುವುದೂ ಅಷ್ಟೇ ಪ್ರಯಾಸ. ಅರ್ಜುನನ ಏಕಾಗ್ರತೆ, ಚಾಣಕ್ಯನ ಚಾಣಾಕ್ಷತೆ, ಅಭಿಮನ್ಯುವಿನ ಧೈರ್ಯ, ಕೃಷ್ಣನ ತಂತ್ರ, ಭೀಮನ ಬಲ- ಇವೆಲ್ಲವನ್ನೂ ಮೈಗೂಡಿಸಿಕೊಂಡಿರುವವರು ಮಾತ್ರ ಈ ಯಶಸ್ಸೆಂಬ ಪ್ರಾಣಿಯ ಬೇಟೆಯಾಡಿಯಾರು. ಇದು ಖಂಡಿತ ಉತ್ತರನ ಪೌರುಷದವರಿಗಲ್ಲ.

    ದಿನಗಳು, ತಿಂಗಳುಗಳು, ವರ್ಷಗಳು ಉರುಳಿದ ನಂತರವೂ ಯಶಸ್ಸು ಕೈಗೆ ಸಿಗುವ ಲಕ್ಷಣ ಕಾಣಿಸದೇ ಹೋಗಬಹುದು. ನಿರಾಶರಾಗದಿರಿ. ಬೆಂಬಿಡದ ಭೂತದ ತರಹ ಬೆನ್ನು ಹತ್ತಿ. ಯಶಸ್ಸು ಯಾವ ಕ್ಷಣಕ್ಕೂ, ಯಾವ ರೂಪದಲ್ಲೂ ಕಾಣಿಸಬಹುದು. ಆಯಾಸದಿಂದ ಕಣ್ಣು ಮುಚ್ಚಿ ಮೈಮರೆತಿರೋ, ಮತ್ತೆ ಯಶಸ್ಸು ಕಾಣಿಸದೇ ಹೋಗಬಹುದು. ಯಶಸ್ಸೆಂಬುದು ಅತ್ಯಂತ ವಿರಳವಾದ, ವಿಶೇಷವಾದ, ಪರಿಮಳಯುಕ್ತ ಸುಂದರ ಪ್ರಾಣಿ. ಬೇರೆ ಯಾವ ಪ್ರಾಣಿಯನ್ನು ಬೇಟೆಯಾಡಲೂ ಇಷ್ಟೊಂದು ಕಷ್ಟವಿಲ್ಲ.

    ಆದರೆ ಒಮ್ಮೆ ಇದರ ಸುಳಿವು ನಿಮಗೆ ಸಿಕ್ಕಿತೋ, ಇದನ್ನೊಮ್ಮೆ ಸೆರೆ ಹಿಡಿದಿರೋ ಅನಂತರ ನಿಮಗೆ ಯಾವ ಕಷ್ಟವೂ ಇಲ್ಲ. ನಿಮ್ಮನ್ನು ಪನ್ನೀರಿನಲ್ಲಿ ಸ್ನಾನ ಮಾಡಿಸಿ, ಹಂಸತೂಲಿಕಾತಲ್ಪದ ಮೇಲೆ ಮಲಗಿಸಿ, ಕಾಲುಗಳನ್ನು ಒತ್ತುವ ದಾಸಿಯರು, ನಿಮ್ಮ ಗುಣ ವಿಶೇಷಗಳನ್ನು ಬಹುಪರಾಕು ಮಾಡುವ ಹಿಂಬಾಲಕರು, ನೀವು ಕೂತಲ್ಲಿ ಮಣೆ ಹಾಕುವ ವಂದಿಮಾಗಧರು, ಬಾಯಾರಿಕೆಯಾದಾಗಲೆಲ್ಲ ಬಾದಾಮಿ, ಗಸಗಸೆ ಪಾಯಸ, ಹಸಿವಾದಾಗಲೆಲ್ಲ ಮೃಷ್ಟಾನ್ನ ಭೋಜನ, ಸಂಘಸಂಸ್ಥೆಗಳಿಂದ ಸನ್ಮಾನ-ಹೀಗೆ ಕಾಣುವ ಕನಸುಗಳನ್ನೆಲ್ಲ ನನಸಾಗಿಸುತ್ತದೆ ನಿಮ್ಮ ಯಶಸ್ಸು. ಆ ನಂತರ ಯಾವುದೂ ಕಷ್ಟವಲ್ಲ.

    ಇಂಥ ಸ್ಥಿತಿ ನಿಮ್ಮದಾಗಬೇಕೆ? ಹಾಗಾದರೆ ಗಟ್ಟಿ ಮನಸ್ಸು ಮಾಡಿ ಹೊರಡಿ. ಮೇಲೆ ತಿಳಿಸಿದ ಎಲ್ಲ ಗುಣಗಳನ್ನು ಹೇಗೆ ವಶಪಡಿಸಿಕೊಳ್ಳಬೇಕು, ಪ್ರಯಾಣದ ಸಿದ್ಧತೆ ಏನು? ನಾನು ಹೇಗೆ ಆ ಪ್ರಾಣಿಯ ಬೇಟೆಯಾಡಿದೆ, ನೀವು ಹೇಗೆ ಬೇಟೆಯಾಡಬಹುದು-ಎಲ್ಲವನ್ನೂ, ಯಾವ ರಹಸ್ಯವನ್ನೂ ಮುಚ್ಚಿಡದೆ ಹೇಳುತ್ತೇನೆ. ಏಕಾಗ್ರತೆಯಿಂದ ಕೇಳಿಸಿಕೊಳ್ಳಿ. ಯಶಸ್ಸಿನ ಬೇಟೆಯಲ್ಲಿ ನಿಮಗಾಗುವ ಅನುಭವ ಅಪಾರ, ಅಪೂರ್ವ. ಒಮ್ಮೆ ಮನಸ್ಸು ಮಾಡಿದಿರೋ ನಂತರ ಮನಸ್ಸು ಬದಲಿಸುವಂತಿಲ್ಲ. ಇದು ಒನ್​ವೇ. ನಾನು ಹೇಳುತ್ತ ಹೋಗುವ ವಿಷಯಗಳನ್ನೆಲ್ಲ ನೋಟ್ ಮಾಡಿಡುತ್ತ ಬನ್ನಿ.

    ಒಂದಾನೊಂದು ಕಾಲವಿತ್ತು. ಆಗ ಅವತ್ತವತ್ತಿನ ಕೆಲಸವನ್ನು ಅವತ್ತವತ್ತು ಮಾಡುತ್ತ, ಬಂದ ದುಡ್ಡಿನಲ್ಲಿ ಒಂದಿಷ್ಟನ್ನು ದೇವರಿಗೆ, ಮಗದೊಂದಿಷ್ಟನ್ನು ಧರ್ಮಕಾರ್ಯಗಳಿಗೆ ವಿನಿಯೋಗಿಸಿ ಉಳಿದ ಹಣವನ್ನು ಮಿತವಾಗಿ ಖರ್ಚು ಮಾಡಿ ಕಾಸುಕಾಸನ್ನೂ ಜೋಪಾನವಾಗಿಡುತ್ತ ಬಂದಲ್ಲಿ ಕೊನೆಗಾಲಕ್ಕೆ ಒಂದಷ್ಟು ಗಂಟು ಉಳಿಯುತ್ತದೆಂದು ನಂಬಲಾಗಿತ್ತು. ಈ ಮಾತಲ್ಲಿ ಅಷ್ಟಿಷ್ಟು ಸತ್ಯವಿದೆಯೆಂಬುದನ್ನು ಒಪ್ಪೋಣ. ಆದರೆ, ಅದೆಲ್ಲ ಈಗಿನ ಬಹುರಾಷ್ಟ್ರೀಯ ಕಂಪನಿಗಳ ದಿಢೀರ್ ಗಳಿಕೆ, ದಿಢೀರ್ ವೆಚ್ಚದ ಕಾಲಕ್ಕೆ ಅಷ್ಟೇನೂ ಹೊಂದಲಾರದು. ನಿಮಗೆ ಬೇಕಾದುದು ನಾಳೆಯೇ ಅಲ್ಲದಿದ್ದರೂ ಕನಿಷ್ಠ ಪಕ್ಷ ಏರುಯೌವನ ಇನ್ನೂ ಒಂದಷ್ಟಿದೆಯೆನ್ನುವಾಗಲೇ ಥೈಲಿಗಟ್ಟಲೆ ಹಣ. ಆದರೇನು ಮಾಡೋಣ? ಕೋಟ್ಯಧೀಶನಾಗೋದು ಅಂದ್ರೆ ಅದೇನೂ ರಸ್ತೆ ಮಾರ್ಗಸೂಚಿ ನಕ್ಷೆಯನ್ನು ಹಿಡ್ಕೊಂಡು ಬೆಂಗಳೂರಿಂದ ಮೈಸೂರಿಗೆ ಝುಂ ಎಂದು ಕಾರಲ್ಲಿ ಹೋದಂತಲ್ಲ. ಅದಕ್ಕೆ ಅದರದೇ ಆದ ನಿಯಮ, ಮನೋದೈಹಿಕ ಪ್ರವೃತ್ತಿ ಇವೆ.

    ನೆಪೋಲಿಯನ್ ಹಿಲ್ ಹೇಳುವಂತೆ ‘ಬರ್ನಿಂಗ್ ಡಿಜೈರ್’ ಇರಬೇಕು (ಇದರ ಬಗ್ಗೆ ಮುಂದೆ ಹೇಳುತ್ತೇನೆ). ‘ಬಲಿಷ್ಠ ಬಯಕೆ’ ಜೊತೆಗೆ ಅಚಲ ವಿಶ್ವಾಸ ಇರಬೇಕು. ಮಾನವ ನಾಗರಿಕತೆಯ ಇಷ್ಟು ವರ್ಷಗಳಲ್ಲಿ, ಅದರಲ್ಲೂ ವೈಜ್ಞಾನಿಕ, ತಾಂತ್ರಿಕ ಪ್ರಗತಿಯ ಈ ನೂರಾರು ವರ್ಷಗಳಲ್ಲಿ ಯಾವುದೇ ಕಾರ್ಯವನ್ನಾದ್ರೂ ಯಾರೇ ಮನುಷ್ಯನಾದ್ರೂ ‘ಇದು ಸಾಧ್ಯವಿಲ್ಲ’ ಎಂದು ಹೇಳಿ ಸಾಧಿಸಿದ್ದಾನೆಯೇ ಹೇಳಿ. ಉಗಿಬಂಡಿ, ರೇಡಿಯೋ, ಟೆಲಿಫೋನಿನಿಂದ ಹಿಡಿದು ಅಪೊಲೋವರೆಗೆ ಎಲ್ಲ ಕೆಲಸಗಳನ್ನೂ ಸಾಧಿಸಿರುವವರು ‘ಇದು ಸಾಧ್ಯ’ ಎಂಬ ನಂಬಿಕೆಯಿಂದ ಹೊರಟವರೇ. ಆದರೆ, ಅವರು ಇದು ಸಾಧ್ಯವೆಂದಷ್ಟೇ ಹೇಳಿ ಸುಮ್ಮನೆ ಕೂರಲಿಲ್ಲ. ನಿರಂತರವಾಗಿ ಅದರ ಸಾಧ್ಯಾಸಾಧ್ಯತೆಗಳ ಬಗ್ಗೆ ಯೋಚಿಸ್ತಿದ್ರು. ಒಂದರ ನಂತರ ಒಂದರಂತೆ ಹೊಸ ಮಾರ್ಗಗಳನ್ನು ಹುಡುಕ್ತಿದ್ರು. ಅಷ್ಟೇಕೆ, ಇಂದಿನ ಜೆಟ್ ವಿಮಾನದಲ್ಲಿ ಸಹ ಕಂಪ್ಯೂಟರ್ ಸಾಧನ ಅದರ ಮಾರ್ಗ ನಿರೀಕ್ಷಣೆಯನ್ನು ಸತತವಾಗಿ ಮಾಡುತ್ತೆ ಮತ್ತು ಪ್ರತಿಕ್ಷಣವೂ ಹವಾಮಾನ ಇತ್ಯಾದಿಗಳಿಗೆ ಅನುಗುಣವಾಗಿ ಸೂಕ್ತ ಮಾರ್ಪಾಟು ಮಾಡುತ್ತಿರುತ್ತೆ. ಅದೆಂದೂ ಇನ್ನು ನನ್ನ ಕೈಲಿ ಈ ಕೆಲಸ ಆಗೋಲ್ಲಾಂತ ಒಂದು ಕ್ಷಣಾನೂ ಸುಮ್ಮನೆ ಕೂರುವಂತಿಲ್ಲ. ಹಾಗೇ ಕೋಟ್ಯಧಿಪತಿ ಸ್ಥಾನ ತಲುಪಬೇಕಾದ ನಿಮ್ಮ ವಿಮಾನ ಸಹ ಮೊದಲೇ ತನ್ನ ಗುರಿಯನ್ನು ನಿಶ್ಚಯಿಸಿಕೊಂಡು ಒಮ್ಮೆ ಮೇಲೇರಿತೆಂದರೆ ಮತ್ತೆ ಗುರಿ ತಲಪುವವರೆಗೂ ಇಳಿಯುವ ಪ್ರಶ್ನೇನೇ ಇರ್ಬಾರ್ದು. ಮಧ್ಯೆ ಅಡೆತಡೆಗಳು ಬಂದರೆ ಅವನ್ನು ನಿವಾರಿಸಿಕೊಂಡು ಹೋಗ್ತಾ ಇರಿ. ನೀವು ಯಶಸ್ವಿಯಾಗೇ ಆಗುತ್ತೀರ. ಇದರಲ್ಲಿ ದೂಸರಾ ಮಾತೇ ಇಲ್ಲ. ಆಲ್ ದಿ ಬೆಸ್ಟ್.

    ಸಾವಿರ ಮೈಲುಗಳ ಪ್ರಯಾಣವಾದರೂ ಮೊದಲ ಹೆಜ್ಜೆಯಿಂದಲೇ ಪ್ರಾರಂಭವಾಗಬೇಕಲ್ಲ? ಆ ಮೊದಲ ಹೆಜ್ಜೆಯೇ ಬೆಳಗ್ಗೆ ಬೇಗ ಏಳುವುದು. ಯಶಸ್ಸಿನ ಶತ್ರು ಸೋಮಾರಿತನ. ಬೆಳಗ್ಗೆ ಐದಕ್ಕೆ ಏಳಬೇಕೆಂದು ನಿರ್ಧರಿಸಿ. ಅಲಾರಾಂ ಇಟ್ಟು ಮಲಗಿ. ಬೆಳಗ್ಗೆ ಐದು ಗಂಟೆ ಹೊಡೆದಾಗ ನೀವು ಎಷ್ಟು ಸಲ ಇನ್ನು ‘ಐದೇಐದು ನಿಮಿಷ ಮಲಗುತ್ತೇನೆ’ ಎಂದು ಅಲಾರಾಂ ಗಡಿಯಾರದ ತಲೆಯ ಮೇಲೆ ಕುಕ್ಕಿ, ಮಲಗಿ ನಂತರ ಬಹಳ ತಡವಾಗಿ ಎದ್ದಿಲ್ಲ? ನಾಳೆ ಹಾಗಾಗದಿರಲಿ-ಅಲಾರಾಮನ್ನು ನಿಮ್ಮ ಗಡಿಯಾರದಲ್ಲೂ, ಮೊಬೈಲ್​ನಲ್ಲೂ ಇಡಿ. ಮಾತ್ರವಲ್ಲ, ನಿಮ್ಮ ಮನೆಯವರೆಲ್ಲರಿಗೂ ಎಬ್ಬಿಸಲು ಹೇಳಿ ಮಲಗಿ ಹಾಗೂ ಗಟ್ಟಿ ಮನಸ್ಸಿನಿಂದ ಎದ್ದುಬಿಡಿ. ಎದ್ದು ಮತ್ತೆ ಮಲಗಬೇಡಿ. ಹಾಗೆ ಮಲಗಿ ನಿಗದಿತ ಸಮಯಕ್ಕೆ ಎದ್ದವರು ಬಹುಶಃ ಯಾರೂ ಇರಲಿಕ್ಕಿಲ್ಲ. ನನ್ನ ಪುಣ್ಯಕ್ಕೆ ಅಲಾರಾಂ ಇಲ್ಲದೆ ನಾನು ಬೇಕಾದ ಸಮಯಕ್ಕೆ ಏಳಬಲ್ಲೆ. ಇದು ಅಭ್ಯಾಸದಿಂದ ನಿಮಗೂ ಬರುತ್ತದೆ. ದೇಹದೊಳಗೆ ಒಂದು ಅಲಾರಾಂ (ಬಯಲಾಜಿಕಲ್ ಕ್ಲಾಕ್) ಇರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

    ಬೆಳಿಗ್ಗೆ 5-30ಕ್ಕೆ ಎದ್ದಿರಲ್ಲವೆ? ಹಾಂ, ಹಾಸಿಗೆಯಿಂದ ಎದ್ದ ಕೂಡಲೆ ಮೊದಲು ಶೌಚಕ್ರಿಯಾದಿಗಳನ್ನು ಮುಗಿಸಿ. ನಂತರ 10-15 ನಿಮಿಷಗಳಲ್ಲಿ ಅಂದು ಏನೇನು ಮಾಡಬೇಕೆಂದು ಕಾರ್ಯಕ್ರಮ ನಿಗದಿಪಡಿಸಿಕೊಳ್ಳಿ. ಅವತ್ತಿನ ಭೇಟಿಯ ಬಗ್ಗೆಯೋ, ಬರೆಯಬೇಕಾದ ಪತ್ರದ ಬಗ್ಗೆಯೋ, ಕೊಂಡುಕೊಳ್ಳಬೇಕಾದ ಸಾಮಗ್ರಿ ಬಗ್ಗೆಯೋ ಯೋಚಿಸಿ. ಅದನ್ನೆಲ್ಲ ಮೊಬೈಲಿನ ನೋಟ್​ಪ್ಯಾಡಿನಲ್ಲಿ ಬರೆಯಿರಿ. ಯಾವುದನ್ನೂ ತಲೆಯಲ್ಲಿ ಇಟ್ಟುಕೊಳ್ಳಬೇಡಿ. ತಲೆಯಲ್ಲಿ ಇಟ್ಟುಕೊಂಡರೆ ಯೋಚಿಸಲು ಮಿದುಳಿನಲ್ಲಿ ಜಾಗ ಕಮ್ಮಿ ಆಗುತ್ತೆ. ಹಾರ್ಡ್ ಡಿಸ್ಕ್ ಸ್ಕ್ರಾಚ್, ಡಿಸ್ಕ್ ಫುಲ್ ಅಂತ ಕಂಪ್ಯೂಟರ್​ನಲ್ಲಿ ಆಗುತ್ತಲ್ಲ ಹಾಗೆ ಆಗುತ್ತೆ. ಆಮೇಲೆ 3 ನಿಮಿಷದಲ್ಲಿ ಮುಖ ತೊಳೆದು, 1 ಗಂಟೆ ವಾಕಿಂಗ್ ಮಾಡಿ, ನಂತರ 10 ನಿಮಿಷದಲ್ಲಿ ಸ್ನಾನ ಮುಗಿಸಿ ರೆಡಿಯಾಗಬೇಕು. ಈಗ ನಿಮ್ಮ ಮನಸ್ಸು ಪ್ರಫುಲ್ಲವಾಗಿರಲಿ, ಆಲೋಚನೆಗಳು ತಾವಾಗಿಯೇ ಏನು ಬರುತ್ತವೋ ಅವು ಬರಲಿ. ಮನಸ್ಸು ಗುರಿಯನ್ನು ನಿಶ್ಚಯಪಡಿಸಿಕೊಂಡಿದ್ದರೆ ಅದಕ್ಕೆ ಪೂರಕವಾದ ಆಲೋಚನೆಗಳು ತಾವಾಗಿಯೇ ಇಂಥ ಸಮಯದಲ್ಲಿ ಬರುತ್ತವೆ. ಬಿಡದೆ ಅವುಗಳ ಬೆನ್ನುಹತ್ತಿ. ರಾತ್ರಿ ಮಲಗುವ ಮುಂಚೆ ಏನೇನು ಮಾಡಿದ್ರಿ, ಅದನ್ನೆಲ್ಲ ಟಿಕ್ ಮಾಡಿಕೊಳ್ಳಿ, ಉಳಿದಿದ್ದನ್ನು ನಾಳೆಯ ಕೆಲಸದೊಂದಿಗೆ ಬರೆದುಕೊಂಡು ಮುಂದುವರಿಸಿ. ಮುಂದೆ…? ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ.

    (ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts