ಹಲವೆಡೆ ಮಳೆಯ ಆರ್ಭಟ ಹೆಚ್ಚಾಗಿದ್ದು, ಇನ್ನು ಕೆಲವೆಡೆ ಜಿಟಿ ಜಿಟಿ ಮಳೆ ಸುರಿಯುತ್ತಲೇ ಇದೆ. ತಂಪಾಗಿರುವ ವಾತಾವರಣದಲ್ಲಿ ದೇಹವೂ ತಣ್ಣಗಿದ್ದು, ಬಜ್ಜಿ, ಬೋಂಡಾ, ಪಕೋಡಾದಂತಹ ಬಿಸಿ ಬಿಸಿ ಹಾಗೂ ಕರಿದ ತಿನಿಸುಗಳು ಕೈಬೀಸಿ ಕರೆಯುತ್ತಿವೆ. ಮಕ್ಕಳು ಹಠ ಮಾಡಿದರೆಂದು ಕೊಟ್ಟರೆ ಅಷ್ಟೇ ಕಥೆ. ಈ ಸಮಯದಲ್ಲಿ ಮಕ್ಕಳ ಆಹಾರ ಕ್ರಮ ತುಂಬಾ ಮುಖ್ಯ. ಅವರಿಗೆ ಯಾವ ರೀತಿಯ ಆಹಾರ ಕೊಡಬೇಕು ಮತ್ತು ಯಾವುದನ್ನು ಕೊಡಬಾರದು ಎಂಬುದರ ಮಾಹಿತಿ ಇಲ್ಲಿದೆ.
| ರಮೇಶ್ಕುಮಾರ ಬಿ. ಎಡಮೋಳೆ
ಹೊರಗೆ ಮಳೆಸುರಿಯುತ್ತಿದ್ದರೆ ಕುರುಂ ಕುರುಂ ತಿನ್ನುವ ಹಂಬಲ ಆಗುತ್ತದೆಯಲ್ವಾ? ಚಳಿ ಚಳಿ ಆಗುತ್ತಿದ್ದರೂ ಐಸ್ಕ್ರೀಂ ನೋಡಿದರೆ ತಿಂದುಬಿಡೋಣ ಅನಿಸತ್ತಲ್ವಾ? ಆದ್ರೆ ಪುಟಾಣಿಗಳೇ ಇದು ಮಳೆಗಾಲ. ನೆನಪಿರಲಿ... ಸ್ವಲ್ಪ ಹೆಚ್ಚೂ ಕಡಿಮೆಯಾದರೂ ಕರೊನಾನೂ ಕಾಡಬಹುದು. ಮಳೆಗಾಲ ಮುಗಿಯುವವರೆಗಾದರೂ ಸ್ವಲ್ಪ ಸಂಯಮದಿಂದ ಇರಿ.
- ಬೆಳ್ಳುಳ್ಳಿಯು ಆಂಟಿಆಕ್ಸಿಡಂಟ್ಗಳಿಂದ ತುಂಬಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದ ಚಯಾಪಚಾಯ ಕ್ರಿಯೆಯನ್ನು ನಿಯಂತ್ರಿಸುತ್ತದೆ. ಊಟದ ನಡುವೆ ಒಂದು ಚಮಚ ಬೆಳ್ಳುಳ್ಳಿ ಚಟ್ನಿ ಸೇವಿಸಿದರೆ ಉತ್ತಮ ಆರೋಗ್ಯ ದೊರೆಯುತ್ತದೆ.
- ಅರಿಶಿಣ, ಮೆಣಸು, ಜೀರಿಗೆ ಮುಂತಾದ ಮಸಾಲೆ ಪದಾರ್ಥಗಳು ಮಕ್ಕಳ ಆಹಾರ ಕ್ರಮದಲ್ಲಿ ಕಡ್ಡಾಯವಾಗಿರಬೇಕು. ಇವುಗಳು ದೇಹದ ಪ್ರತಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿ ಸೋಂಕುಗಳ ವಿರುದ್ಧ ಹೋರಾಡಲು ಸಹಕಾರಿಯಾಗಿವೆ.
- ಹಾಗಲಕಾಯಿ ಆರೋಗ್ಯ ಕಣಜವಾಗಿದ್ದು, ಬ್ಯಾಕ್ಟೀರಿಯಾ, ಶಿಲೀಂಧ್ರ, ಉರಿಯೂತ ಸೇರಿದಂತೆ ಹಲವು ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯವಿದೆ.
- ಆಯಾ ಕಾಲಕ್ಕೆ ಅನುಗುಣವಾಗಿ ದೊರೆಯುವ ಹಣ್ಣುಗಳಲ್ಲಿಯೂ ಆಂಟಿಆಕ್ಸಿಡಂಟ್ಸ್ ತುಂಬಿರುತ್ತವೆ. ಕಾಯಿಲೆ ವಿರುದ್ಧ ಹೋರಾಡಲು ಅವು ಸಹಾಯ ಮಾಡುತ್ತವೆ. ಕಿತ್ತಳೆ, ದಾಳಿಂಬೆ, ಬಾಳೆಹಣ್ಣು, ಪರಂಗಿ ಹಣ್ಣುಗಳು ತುಂಬಾ ಉಪಯುಕ್ತ.
- ಬಿಸಿಯಾದ ಸೂಪ್ಗಳು ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇಡುತ್ತವೆ. ನಾನ್ವೆಜ್ ಪ್ರಿಯರು ಚಿಕನ್ ಸೂಪ್ ಬಳಸಬಹುದು.
- ಮೊಳಕೆ ಕಾಳುಗಳನ್ನು ತಿನ್ನುವುದರಿಂದ ದೇಹದ ಬೆಳವಣಿಗೆಯಾಗುತ್ತದೆ.ಡ್ರೖೆ ಫ್ರೂಟ್ಸ್, ಬೀಜಗಳು, ಗಿಡಮೂಲಿಕೆಗಳ ಕಷಾಯವನ್ನು ಮಳೆಗಾಲದಲ್ಲಿ ನೀಡಬಹುದು.
ಈ ಆಹಾರಗಳಿಂದ ದೂರವಿರಿ
- ಮಳೆಗಾಲದಲ್ಲಿ ಕರಿದ ಮತ್ತು ಎಣ್ಣೆ ಪದಾರ್ಥಗಳಿಂದ ಜೀರ್ಣಕ್ರಿಯೆಗೆ ತೊಂದರೆಯಾಗಿ ಬೆಳವಣಿಗೆ ಕುಂಠಿತವಾಗುತ್ತದೆ.
- ಹೆಚ್ಚು ಉಪ್ಪಿನಾಂಶ ಇರುವ ಆಹಾರ ಬೇಡ. ದೇಹದಲ್ಲಿ ನೀರು ತುಂಬಿಕೊಂಡು ಆಯಾಸ ಉಂಟಾಗುತ್ತದೆ.
- ಐಸ್ಕ್ರೀಂ ಮಳೆಗಾಲದಲ್ಲಿ ಒಳ್ಳೆಯದಲ್ಲ. ಅದರಲ್ಲೂ ಕರೊನಾ ಸಂದರ್ಭದಲ್ಲಿ ಸೂಕ್ತವಲ್ಲ.
- ಬೀದಿ ಬದಿಯಲ್ಲಿ ಸಿಗುವ ಆಹಾರಗಳಿಂದ ದೂರವಿರಿ.
- ಹೆಚ್ಚು ಉಷ್ಣಾಂಶ ಇರುವ ದೇಹವನ್ನು ಮೊಸರು ಬೇಗ ತಂಪಾಗಿಸುತ್ತದೆ. ಹೀಗಾಗಿ ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆ ಉಂಟಾಗುತ್ತದೆ.
- ಮೀನು ಮತ್ತು ಸಮುದ್ರಾಹಾರಗಳ ಸೇವನೆಗೆ ಮಿತಿಯಿರಲಿ. ಏಕೆಂದರೆ ಮಾನ್ಸೂನ್ ಹವಾ ಮಾನದಲ್ಲಿ ಮೀನುಗಳು ಕೆಟ್ಟದಾಗಿ ಬದಲಾಗುತ್ತವೆ.
- ಮಾವಿನ ಹಣ್ಣು ಕಡಿಮೆ ಬೆಲೆಗೆ ಸಿಗುತ್ತಿದೆ ಅಂತ ಸಿಕ್ಕಾಪಟ್ಟೆ ತಿನ್ನಬೇಡಿ. ಮಳೆಗಾಲದಲ್ಲಿ ಮಾವು ಸೇವನೆಯಿಂದ ಚರ್ಮ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
- ಹಾಲು, ತುಪ್ಪ, ಬೆಣ್ಣೆ ಹೊರತುಪಡಿಸಿ ಕೆಲ ಡೈರಿ ಪದಾರ್ಥಗಳು, ಸಾಫ್ಟ್ ಡ್ರಿಂಕ್ಸ್ ಮತ್ತು ಸಲಾಡ್ಗಳಿಂದ ಸದ್ಯ ದೂರವಿರಿ.
- ಪ್ಯಾಕ್ಡ್ ಮತ್ತು ಫ್ರೋಜನ್ ಆಹಾರ ಪದಾರ್ಥಗಳನ್ನು ಸೇವಿಸಬಾರದು.
ಮಳೆಗಾಲದಲ್ಲಿ ದೊರೆಯುವಂತಹ ಹಣ್ಣು-ಹಂಪಲುಗಳ ಜತೆಗೆ ಮೊಳಕೆ ಕಾಳುಗಳನ್ನು ಮಕ್ಕಳಿಗೆ ಕೊಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಇವುಗಳಲ್ಲಿ ಪ್ರೋಟಿನ್ಸ್ ಅಧಿಕವಾಗಿರುವುದರಿಂದ ಮಕ್ಕಳ ಬೆಳವಣಿಗೆಗೂ ಅನುಕೂಲವಾಗುತ್ತದೆ. ಪ್ಯಾಕೇಜಿಂಗ್ ಆಹಾರಗಳು ಮತ್ತು ಎಣ್ಣೆ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಮಕ್ಕಳಿಗೆ ಕೊಡಬಾರದು.
| ಡಾ. ನಿಜಗುಣ ಇಂದಿರಾ ಗಾಂಧಿ ಆಸ್ಪತ್ರೆ, ಬೆಂಗಳೂರು