ಪ್ರತಿಯೊಬ್ಬರೂ ನೂರು ವರ್ಷ ಬದುಕಬೇಕೆಂಬ ಭಾವ ವೇದಗಳಲ್ಲೆಲ್ಲ ತುಂಬಿ ತುಳುಕಾಡುತ್ತಿದೆ. ವೇದವಾಗಲಿ, ವೇದಾಂತವಾಗಲಿ ನಿಷ್ಕ್ರಿಯತೆಯನ್ನು ಬೋಧಿಸುವುದಿಲ್ಲ. ಅದು ಜೀವನೋತ್ಸಾಹವನ್ನೂ, ಕ್ರೀಯಾಶೀಲತೆಯನ್ನೂ ಎತ್ತಿಹಿಡಿಯುತ್ತದೆ. ಶತಾಯುಷ್ಯವನ್ನು ಸಂಭ್ರಮಿಸಿ ಬದುಕಬೇಕಾದರೆ ಮನುಷ್ಯನೊಬ್ಬ ಕ್ರಿಯಾಶೀಲನಾಗಿರಲೇಬೇಕು. ವ್ಯಕ್ತಿ ಶ್ರೀಮಂತಿಕೆಯನ್ನು ಹೊಂದಿರಬೇಕು.
ಎಲ್ಲಿಯೇ ಸ್ವಾರ್ಥದ ಆಚೆ ಒಂದು ಕ್ರಿಯೆ ನಡೆದರೆ ವೇದ ಭಾರತ ಅದಕ್ಕೆ ಹೆಸರಿಟ್ಟಿದ್ದು ‘ಯಜ್ಞ’ ಎಂದು. ಯಜ್ಞ ಎಂದರೇನೇ ಸಮಷ್ಟಿಹಿತ. ಸಾರ್ವಜನಿಕ ಹಿತ. ಇದನ್ನು ಕಂಡೇ ಭಗವಾನ್ ಬುದ್ಧ, ಯಜ್ಞ ಎಂಬ ಪ್ರಕ್ರಿಯೆಗೆ ಅದೇ ಉದ್ದೇಶವುಳ್ಳ ‘ಬಹುಜನ ಹಿತಾಯ ಬಹುಜನ ಸುಖಾಯ’ ಎಂಬ ಪರ್ಯಾಯ ವ್ರತವನ್ನು ಸೃಷ್ಟಿಸಿದ. ಈ ಹಿನ್ನೆಲೆಯಲ್ಲಿ ವೇದ ಭಾರತದ ವ್ಯಕ್ತಿ ನಿರ್ಮಾಣ ತನ್ನ ಉದ್ದೇಶವನ್ನು ಹೊಂದಿದ್ದೇ ಅದು ಬಹುಜನ ಹಿತಕ್ಕಾಗಿ ಉಪಯೋಗವಾಗಬೇಕು ಎಂದು. ಈ ಹಿನ್ನೆಲೆಯಲ್ಲೇ ಕೃಷ್ಣ ಅರ್ಜುನನಿಗೆ ‘ಧರ್ವದ್ಧಿ ಯುದ್ಧಾ ಚ್ಛೆ›ೕಯೋನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ’- ಧರ್ವೇದ್ದೇಶಕ್ಕಾಗಿ ಯುದ್ಧ ಮಾಡುವ ಪ್ರಸಂಗ ಕ್ಷತ್ರಿಯನಿಗೆ ಬಹಳ ಶ್ರೇಯಸ್ಕರವಾದದ್ದು ಎಂದಿದ್ದು. ದಧೀಚಿ ತನ್ನ ಬೆನ್ನುಮೂಳೆಯನ್ನು ವಜ್ರಾಯುಧದ ನಿರ್ವಣಕ್ಕಾಗಿ ದಾನ ಮಾಡಿ ಮೃತ್ಯುಗೈದಿದ್ದು ಈ ಕಾರಣಕ್ಕಾಗಿಯೇ. ಹಾಗೆಯೇ ಶಿಬಿ, ದಿಲೀಪ ಇತ್ಯಾದಿ ಚಕ್ರವರ್ತಿಗಳು. ಇದರ ಮುಂದುವರಿದ ಭಾಗವೇ ರಾಮನ ಸಿಂಹಾಸನ ತ್ಯಾಗ. ವೇದ, ಉಪನಿಷತ್, ಗೀತೆ, ರಾಮಾಯಣ, ಮಹಾಭಾರತ ಇತ್ಯಾದಿಗಳೆಲ್ಲ ಈ ಪರಂಪರೆಯನ್ನು ಅವಕಾಶ ಸಿಕ್ಕಾಗಲ್ಲೆಲ್ಲ ಎತ್ತಿ ಹಿಡಿದಿವೆ. ವೇದಗಳ ಕರ್ಮಕಾಂಡದುದ್ದಕ್ಕೂ ನಾವು ಕಾಣುವುದು ಸಮೃದ್ಧಿಯನ್ನು ಸಾಧಿಸುವುದು ಹೇಗೆ, ಸಾಮರ್ಥ್ಯಗಳನ್ನು ಗಳಿಸುವುದು ಹೇಗೆ ಅನ್ನುವುದಷ್ಟೇ ಅಲ್ಲ; ಗಳಿಸಿದ ಸಂಪತ್ತನ್ನು ಹೇಗೆ, ಯಾರಿಗೆ, ಎಷ್ಟೆಷ್ಟು ಪ್ರಮಾಣದಲ್ಲಿ ದಾನ ಮಾಡಬೇಕು ಎಂದು ಸಹ. ಈ ದಾನ ಮಾಡುವ ಕಾರ್ಯಕ್ರಮಗಳೇ ಯಜ್ಞದ ಇನ್ನೊಂದು ರೂಪ. ಆದರೆ ಇದಕ್ಕೂ ಮುಂಚೆ ವ್ಯಕ್ತಿ ನಿರ್ವಣಕ್ಕೆ ಕೊಟ್ಟ ಒತ್ತು ವಿಶೇಷ ಮತ್ತು ಶ್ಲಾಘನೀಯ.
ಒಂದೇ ವಿನಾಯಿತಿಯೂ ಇಲ್ಲದಂತೆ ವೇದಗಳ ಕರ್ಮಕಾಂಡವನ್ನು ಬಿಡಿ ಜ್ಞಾನಕಾಂಡವಾದ ಉಪನಿಷತ್ತುಗಳಲ್ಲೂ ಪ್ರಾರಂಭದಲ್ಲಿ ಸದ್ಗೃಸ್ಥನ ಬಗ್ಗೆ ಪ್ರಸ್ತಾಪ ಬರುತ್ತದೆ. ಗೃಹಸ್ಥನು ಯಾವ ರೀತಿ ತನ್ನ ಕರ್ತವ್ಯಗಳಲ್ಲಿ ಶ್ರದ್ಧೆಯಿಂದ ನಿರತನಾಗಬೇಕು. ಅರ್ಥ, ಕಾಮಗಳನ್ನು ಹೇಗೆ ಧರ್ಮದ ಚೌಕಟ್ಟಿನಲ್ಲೇ ಗಳಿಸಬೇಕು ಮತ್ತು ವಿನಿಯೋಗಿಸಬೇಕು, ಅಷ್ಟೇ ಅಲ್ಲ ಅದರಾಚೆಗೂ ಬ್ರಹ್ಮತ್ವದೆಡೆಗೆ ಹೇಗೆ ಪಯಣಿಸಬೇಕು ಎಂಬುದನ್ನು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಉದಾಹರಣೆಗಳ ಮೂಲಕವೋ ಅದೊಂದು ನಿಯಮವೆಂಬಂತೆ ಪಾಲಿಸಿಕೊಂಡು ಬಂದಿದೆ. ಏಕೆಂದರೆ ನೈತಿಕ ಚೌಕಟ್ಟು, ಕರ್ತವ್ಯಪ್ರಜ್ಞೆ, ಸಮೃದ್ಧಿ, ದಾನ ಬುದ್ಧಿ ಇವೇ ಸದ್ಗ ೃಸ್ಥನ ಲಕ್ಷಣಗಳು. ಈಶಾವಾಸ್ಯದ ಮೂರನೇ ಶ್ಲೋಕದಲ್ಲಿ ಇದೇ ಬಂದಿದೆ. ಮೇಲ್ನೋಟಕ್ಕೆ ಇದು ವಿವರಣಾತ್ಮಕವಲ್ಲದಿದ್ದರೂ ಇಂಥ ವಿಷಯಗಳಲ್ಲಿ ಪ್ರಶ್ನಾತೀತ ಅಧಿಕಾರವುಳ್ಳ ಆಚಾರ್ಯ ಶಂಕರರು ಇವುಗಳನ್ನು ವೇದ ಪರಂಪರೆಯ ಹಿನ್ನೆಲೆಯಲ್ಲೇ ವ್ಯಾಖ್ಯಾನಿಸಿಕೊಂಡು ಬಂದಿದ್ದಾರೆ.
ಕುರ್ವನ್ನೇವೇಹ ಕರ್ವಣಿ ಜಿಜೀವಿಷೇತ್ ಶತಂ ಸಮಾಃ|
ಏವಂ ತ್ವಯಿ ನಾನ್ಯಥೇತೋಸ್ತಿ ನ ಕರ್ಮ ಲಿಪ್ಯತೇ ನರೇ|| ಇದೇ ಆ ಶ್ಲೋಕ.
ಹಲವು ಅದ್ಭುತ ಸಂದೇಶಗಳನ್ನು ಇಲ್ಲಿ ನಾವು ನೋಡಲಿದ್ದೇವೆ. ಅದೇ ಮಾಡಬೇಕಾದ ಕರ್ತವ್ಯಗಳನ್ನು ಸರಿಯಾಗಿ ಪಾಲಿಸುತ್ತ ಪ್ರತಿಯೊಬ್ಬರೂ ನೂರು ವರ್ಷ ಬದುಕಲು ಇಚ್ಛಿಸಬೇಕು. ಕರ್ಮಗಳ ಬಂಧನದಿಂದ ಪಾರಾಗುವುದಕ್ಕೆ ಇರುವುದು ಇದೊಂದೇ ಮಾರ್ಗ. ಕರ್ತವ್ಯಗಳ ಮೇಲಿನ ಒತ್ತು ಕೇವಲ ಇಲ್ಲಷ್ಟೇ ಅಲ್ಲ ನೂರಾರು ಕಡೆ ಬರುತ್ತದೆ. ಚಮತ್ಕಾರವೆಂದರೆ ಹಕ್ಕುಗಳ ಪ್ರಸ್ತಾಪವೇ ಇಲ್ಲ. ಕರ್ತವ್ಯಶೀಲನಿಗೆ ಹಕ್ಕು ಹುಡುಕಿಕೊಂಡು ಬರುತ್ತದೆ ಎಂದು ಅರ್ಥ. ಪ್ರತಿಯೊಬ್ಬರೂ ನೂರು ವರ್ಷ ಬದುಕಬೇಕೆಂಬ ಭಾವ ವೇದಗಳಲ್ಲೆಲ್ಲ ತುಂಬಿ ತುಳುಕಾಡುತ್ತಿದೆ. ವೇದವಾಗಲಿ, ವೇದಾಂತವಾಗಲಿ ನಿಷ್ಕ್ರಿಯತೆಯನ್ನು ಬೋಧಿಸುವುದಿಲ್ಲ. ಅದು ಜೀವನೋತ್ಸಾಹವನ್ನೂ, ಕ್ರೀಯಾಶೀಲತೆಯನ್ನೂ ಎತ್ತಿಹಿಡಿಯುತ್ತದೆ. ಕರ್ಮಜನ್ಯ ಇತಿಮಿತಿಗಳಿಂದ ಪಾರಾಗಿ ಸಮಾಧಿಜನ್ಯ ಪೂರ್ಣತೆಯನ್ನು ಆನಂದಿಸುವುದೇ ಬೇರೆ. ಕರ್ಮಗಳಿಗೆ ಬೆನ್ನು ತಿರುಗಿಸಿ ಜಡತ್ವಕ್ಕೆ ಬಲಿಯಾಗಿ ಕರ್ಮವಿಹೀನನಾಗುವುದೇ ಬೇರೆ. ಒಂದು ವಿಕಾಸದ ಉತ್ತುಂಗ. ಇನ್ನೊಂದು ನರಕ ನಿರ್ವಣ. ಶತಾಯುಷ್ಯವನ್ನು ಸಂಭ್ರಮಿಸಿ ಬದುಕಬೇಕಾದರೆ ಮನುಷ್ಯನೊಬ್ಬ ಕ್ರಿಯಾಶೀಲನಾಗಿರಲೇಬೇಕು. ವ್ಯಕ್ತಿ ಶ್ರೀಮಂತಿಕೆಯನ್ನು ಹೊಂದಿರಬೇಕು. ಸಾಮರ್ಥ್ಯ, ಸದ್ಗುಣಗಳು ಹೇರಳವಾಗಿ ಬೆಳೆದಿರಬೇಕು. ಇಲ್ಲದಿದ್ದರೆ ‘ವಾಮಮಾರ್ಗ’ಕ್ಕೆ ಜೋತುಬೀಳಬೇಕಾದ್ದು ಅನಿವಾರ್ಯವಾದೀತು ; ವರ್ತಮಾನದ ಭಾರತದಂತೆ.
ಶಂಕರರು ತಮ್ಮ ಭಾಷ್ಯದಲ್ಲಿ ಈ ವ್ಯಕ್ತಿ ಶ್ರೀಮಂತಿಕೆಯು 5 ರೀತಿಯ ತರಬೇತುಗಳಿಂದ ಬರುತ್ತದೆ ಎಂದು ಹೇಳುತ್ತಾರೆ. ಮೊದಲನೆಯ ತರಬೇತಿಯೇ ಸ್ವಭಾವತಃ ತಾನು ಮಿತಿಯಿಲ್ಲದ ವ್ಯಕ್ತಿ, ಅರ್ಥಾತ್ ತಾನು ದೇವನೇ ಎಂಬ ದೃಢವಿಶ್ವಾಸದಲ್ಲಿ ನೆಲೆಸುವುದು. ಈ ಚರಾಚರ ಜಗತ್ತಿನಲ್ಲಿ ಎಲ್ಲವೂ ದೇವನೇ ಎಂತಲೇ ಈಶೋಪನಿಷತ್ ಪ್ರಾರಂಭವಾಗುವುದು. ಇದರ ಆಧುನಿಕ, ವೈಜ್ಞಾನಿಕ ರೂಪಾಂತರವೇ ‘ಈ ಜಗತ್ತಿನಲ್ಲಿ ಎಲ್ಲವೂ ಪ್ರಜ್ಞೆ’ ಎಂಬುದು. ಜಡವಸ್ತು, ಕಲ್ಲು, ಮಣ್ಣುಗಳೆಲ್ಲ ಮಿತಿಯಲ್ಲಿ ಸಿಕ್ಕಿಕೊಂಡ ಪ್ರಜ್ಞೆಗಳು. ಈ ಮಿತಿಯನ್ನು ಒಡೆದು ಸೀಳಿ ತನ್ನ ದೈವತ್ವದ ಪೂರ್ಣ ವೈಭವ ಕೈಗೆಟಕುವಂತೆ ಮಾಡಿಕೊಳ್ಳುವ ಸಾಮರ್ಥ್ಯವಿರುವುದು ಮನುಷ್ಯನಿಗೆ ಮಾತ್ರ. ಈ ಭಾಗ್ಯ ಇನ್ನಾರಿಗೂ ಇಲ್ಲ. ದೇವತೆಗಳಿಗೂ ಇಲ್ಲ. ದೇವತೆಗಳೂ ಅಮಿತಶಕ್ತಿ, ಅಮಿತಜ್ಞಾನ ಅನುಭವಿಸಬೇಕಾದರೆ ಮನುಷ್ಯಜನ್ಮವನ್ನೇ ಮತ್ತೆ ಪಡೆದು ಬರಬೇಕು. ಆದ್ದರಿಂದ ಇದೇ ಶಂಕರರೇ ಮನುಷ್ಯನಾಗಿ ಹುಟ್ಟಿ ಯದ್ವಾತದ್ವಾ ಬದುಕಿದರೆ ಅದೊಂದು ಆತ್ಮಹತ್ಯೆಯೇ ಸರಿ ಎಂದು ಎಚ್ಚರಿಸುತ್ತಾರೆ.
ಭಾರತೀಯ ಸಂಸ್ಕೃತಿಯಲ್ಲಿ ಮನುಷ್ಯ ಜನ್ಮವನ್ನು ಪ್ರಶಂಸಿಸದ ದರ್ಶನಶಾಸ್ತ್ರವೇ ಇಲ್ಲ. ಈ ದೇವನಾಗುವ ಪ್ರಕ್ರಿಯೆಯಲ್ಲಿ ಎರಡನೇ ತರಬೇತಿ ಋಷಿ ಜೀವನಕ್ಕೆ ಶರಣಾಗುವುದು ಅರ್ಥಾತ್ ‘ಏಳಿ ಎದ್ದೇಳಿ ಗುರಿಮುಟ್ಟುವವರೆಗೆ ನಿಲ್ಲದಿರಿ’ ಎಂಬ ಸಂದೇಶಕ್ಕೆ ತಮ್ಮನ್ನು ನೂರಕ್ಕೆ ನೂರು ಒಡ್ಡಿಕೊಳ್ಳುವುದು. ಈಶಾವಾಸ್ಯ ಉಪನಿಷತ್ ಬರುವ ವೇಳೆಗೆ ಸಹಸ್ರಾರು ಋಷಿಗಳು ಭಾರತದಲ್ಲಿ ಆಗಿ ಹೋಗಿದ್ದಾರೆ. ಎಷ್ಟೋ ಸ್ತ್ರೀಯರೂ ಆ ವೇಳೆಗೆ ಬ್ರಹ್ಮತ್ವಕ್ಕೆ ಏರಿದ್ದರು. ಋಗ್ವೇದದ ವಾಗಾಂಭೃಣಿ ಅಂಥ ಒಬ್ಬ ಬ್ರಹ್ಮಜ್ಞಾನಿ. ಇಂಥವರ ಜೀವನಕ್ರಮ, ಅವರ ಸಲಹೆ, ಸೂಚನೆಯಂತೆ ಜೀವನವನ್ನು ತಿದ್ದಿಕೊಳ್ಳುವುದು ಅವರ ಉಪದೇಶಗಳನ್ನು ಪಾಲಿಸುವುದೇ ‘ಋಷಿಯಜ್ಞ’. ಈ ಋಷಿಯಜ್ಞ ಬ್ರಹ್ಮಚರ್ಯಾಶ್ರಮದ ರೂಪಾಂತರ. ಇಂಥ ಮಹಾನ್ ಋಷಿಯಾಗಿ ಉಳಿದು ಮುಂದಿನ ಹಲವಾರು ಆಸಕ್ತ ಆಕಾಂಕ್ಷಿಗಳನ್ನು ತನ್ನತ್ತ ಸೆಳೆದು, ಋಷ್ಯಾಶ್ರಮವನ್ನೋ ಗುರುಕುಲವನ್ನೋ ಸ್ಥಾಪಿಸಿ ಮುಂದೆ ಬೃಹತ್ ರೀತಿಯ ತಪಸ್ಸಿನಲ್ಲಿ ತೊಡಗಿ ಮಂತ್ರಗಳನ್ನು ಕಂಡು ಹಿಡಿದು ವೇದರಾಶಿಯನ್ನು ಸಮೃದ್ಧಗೊಳಸಿ ಹೊರಪ್ರಕೃತಿ, ಒಳಪ್ರಕೃತಿಯ ಬೇರೆ ಬೇರೆ ಆಯಾಮಗಳನ್ನು ಜಗತ್ತಿಗೆ ಪರಿಚಯಿಸಿ ತಪೋನಿರತರಾದವರು ಕೆಲವರಾದರೆ ಮೇಲಿನ ಜೀವನವನ್ನೇ ಅಷ್ಟೇ ತೀವ್ರತೆ, ಶ್ರದ್ಧೆಯಿಂದ ನಡೆಸುತ್ತ ವಿವಾಹಕ್ಕೆ ಒಳಗಾದವರು ಮತ್ತೆ ಕೆಲವರು. ಇಂಥ ತಪೋನಿಷ್ಠರಿಂದಲೇ ಈ ದೇಶ ‘ಭಾರತ’ವಾಗಿದ್ದು. ಬೆಳಕಿನ, ಜ್ಞಾನದ ತವರುಮನೆ ಎಂದು ಪೈಥಾಗೊರಸ್, ಅರಿಸ್ಟಾಟಲ್, ವಾಲ್ಟೇರ್, ಹೆಗೆಲ್, ಕಾರ್ಲೆಲ್, ಎಮರ್ಸನ್, ಥೋರೋ, ಶೆಲೆಗಲ್ ಸೋದರರು, ಮಾರ್ಕಟ್ವೆ ೖನ್, ರಾಬರ್ಟ್ ಒಪನೀಮರ್, ಬರ್ನಾಡ್ ಶಾ, ಕಾರ್ಲ್ ಯೂಂಗ್, ಗಯಟೆ ಮುಂತಾದ ನೂರಾರು, ಸಾವಿರಾರು ಮಹಾನ್ ಚಿಂತಕರಿಂದ ಅದ್ಭುತ ಪ್ರಶಂಸೆಗೊಳಗಾಗಿರುವುದು. ಇವರಿಂದಲೇ ಇಂದು ವೇದಾಂಗಗಳು, ಷಡ್ದರ್ಶನಗಳು, ಸಹಸ್ರಾರು ಸಂಖ್ಯೆಯ ಸದ್ಗ›ಂಥಗಳು, ಉದ್ಗ›ಂಥಗಳನ್ನೊಳಗೊಂಡ ಸಾಹಿತ್ಯ ಹಿಮಾಲಯವೇ ನಿರ್ವಣವಾಗಿರುವುದು. ಈ ಸಾಹಿತ್ಯ ರಾಶಿಯ ಪರಿಮಾಣವೇನೆಂಬುದನ್ನು ವಿಲಿಯಂ ಜೋನ್ಸ್ರ ಮಾತಿನಲ್ಲಿಯೇ ಕೇಳಬೇಕು. ಅವರೆನ್ನುತ್ತಾರೆ, ‘ಸಂಸ್ಕೃತ ಸಾಹಿತ್ಯದ ಯಾವುದೇ ಒಂದು ಭಾಗವನ್ನು ಅರಿಯಲೂ ಒಂದು ಇಡೀ ಜನ್ಮವೇ ಸಾಕಾಗದು’. ಇದು ಭಾರತೀಯ ಒಳಗಾಗಬೇಕಿದ್ದ ಎರಡನೇ ತರಬೇತಿ.
ಮೂರನೆಯದ್ದೇ ಇಂಥ ಧೀಮಂತ ವ್ಯಕ್ತಿಯನ್ನೇ ಹೋಲುವ ಅವನ ಸಾಮರ್ಥ್ಯಗಳನ್ನೇ ಹೊತ್ತು ತರುವ, ಆ ಪರಂಪರೆಯ ಮೊದಲ ಕೊಂಡಿಯಾದ ಒಬ್ಬನನ್ನಾದರೂ- ಮಗನನ್ನೋ ಮಗಳನ್ನೋ- ಪಡೆಯಬೇಕೆನ್ನುವುದು. ತೈತ್ತರೀಯ ಉಪನಿಷತ್ತಿನ ‘ಪ್ರಜಾತಂತುಂ ಮಾವ್ಯವಚ್ಛೇತ್ಸೀ ಹಿ’ ಎನ್ನುವಲ್ಲಿ ಪುತ್ರರನ್ನೇ ಪಡೆ ಎಂತೇನಿಲ್ಲ ಪುತ್ರಿಯರಾದರು ಸರಿಯೇ ಎಂದೇ ಅರ್ಥ. ಜೊತೆಗೆ ಗೃಹಸ್ಥನಾಗಿ ತನ್ನ ಬಾಧ್ಯತೆಗಳೇನು, ಅದನ್ನೆಲ್ಲ ಅನುಸರಿಸಿ ಸಮಾಜಕ್ಕೆ ಹೇಗೆ ಆದರ್ಶವಾಗಬೇಕು ಎನ್ನುವುದನ್ನು ಇದೇ ಉಪನಿಷತ್ ಹೇಳಿದರೆ ಅದಕ್ಕೇನಾದರೂ ಲೋಪ ಬಂದರೆ ಅವನ ಮಗನೂ ಅವನನ್ನು ಗೌರವಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ಕಠೋಪನಿಷತ್ ನೀಡುತ್ತದೆ.
ಮುಂದಿನ ತರಬೇತಿಯೇ ಆಧುನಿಕ ಭಾರತಕ್ಕೆ ಪ್ರಸ್ತುತವಾದದ್ದು ಅದೇ ಪೌರ ಪ್ರಜ್ಞೆ. ಇದನ್ನು ಉಪನಿಷತ್ತಿನ ಭಾಷೆಯಲ್ಲಿಯೇ ಹೇಳಬೇಕೆಂದರೆ ‘ನೃ ಯಜ್ಞ ’. ‘ಸುತ್ತಲಿನ ಜನರೆಡೆಗೆ ಗಮನ ಕೊಡು’ ಎಂದರ್ಥ. ಸಮಾಜದಲ್ಲಿ ವ್ಯವಸ್ಥೆ (ಟ್ಟಛಛ್ಟಿ) ನೆಲೆಸಬೇಕಾದರೆ ಒಬ್ಬ ತನ್ನ ಪೌರ ಪ್ರಜ್ಞೆಯನ್ನು ನಿರಂತರ ಎಚ್ಚರದಲ್ಲಿ ಇಟ್ಟುಕೊಂಡಿರಬೇಕು ಎಂದರ್ಥ. ಉಪನಿಷತ್ ಅಲ್ಲದೆ ಪ್ರತಿ ಪ್ರತಿಷ್ಠಿತ ಭಾರತೀಯ ಚಿಂತನೆಯೂ ಇದನ್ನು ಎತ್ತಿ ಹಿಡಿಯುತ್ತದೆ. ಭಾಗವತದಲ್ಲಿ ಬರುವ ಕಪಿಲ ದೇವಹೂತಿಯರ ಸಂವಾದ, ರಂತಿದೇವ ತನ್ನ ತಪಸ್ಸಿನ ಫಲವಾಗಿ ‘ಜೀವಿಗಳ ದುಃಖ ನಶಿಸಲಿ’ ಎಂದು ವರ ಕೇಳಿದ್ದು, ಚಕ್ರವರ್ತಿ ರಘುವಿನ ವಿಶ್ವಜಿತ್ ಯಾಗ ಅಷ್ಟೇಕೆ ರಾಜನೊಬ್ಬ ತನ್ನ ಪ್ರಜೆಗಳಿಂದ ಎತ್ತಬೇಕಾದ ತೆರಿಗೆ ಜೇನುಹುಳು ಹೂವಿನಿಂದ ಮಧುವನ್ನು ಹೀರುವಂತಿರಬೇಕು, ಸೂರ್ಯ ಭೂಮಿಯಿಂದ ತೇವವನ್ನು ಹೀರಿದಂತಿರಬೇಕು ಮತ್ತು ರಘುವಂಶದ ಅರಸರು ಹಾಗೆಯೇ ಬದುಕಿದ್ದರೆಂಬ ಕಾಳಿದಾಸನ ಉಲ್ಲೇಖ ಈ ವಿಷಯದಲ್ಲಿ ವೇದಕಾಲೀನ ಸಮಷ್ಟಿ ಪ್ರಜ್ಞೆಯನ್ನು ಎತ್ತಿ ಹಿಡಿಯುತ್ತದೆ. ‘ನಾನು ಗಳಿಸಿದ ಯಾವುದೂ ನನ್ನದಷ್ಟೇ ಅಲ್ಲ’ ಎಂಬ ಧೋರಣೆ ಎಲ್ಲೆಲ್ಲಿ ಕಂಡುಬರುತ್ತೋ ಅದೆಲ್ಲ ಯಜ್ಞವೇ ಎಂದು ಶ್ರೀಕೃಷ್ಣ ಸ್ಪಷ್ಟವಾಗಿ ಹೇಳುತ್ತಾನೆ. ಇನ್ನು ಕೊನೆಯ ತರಬೇತಿ ದೇಶಕ್ಕೆ ಸೇರಿದ ಸಂಪನ್ಮೂಲಗಳನ್ನು ರಕ್ಷಿಸಿಡುವ ಕುರಿತು. ಇಲ್ಲೆಲ್ಲೂ ಆಧುನಿಕ ಪಾಶ್ಚಾತ್ಯ ಪ್ರಣೀತ ಇಟ್ಞಠ್ಠಞಛ್ಟಿಜಿಠಞ ಅಥವಾ ಕೊಳ್ಳುಬಾಕ ಸಂಸ್ಕೃತಿ ಅರ್ಥಾತ್ ಇರುವುದನ್ನೆಲ್ಲ ಖಾಲಿ ಮಾಡು ಮುಂದಿನ ಜನ್ಮವನ್ನು ನೋಡಿದವರಾರು ಎಂಬ ಅಜ್ಞಾನಜನ್ಯ, ಬೇಜವಾಬ್ದಾರಿ ಧೋರಣೆ ಇಲ್ಲ. ಅಲ್ಲಿರುವುದು ಸಂಪತ್ತಿನ ಮೂಲಕ್ಕೆ ಧಕ್ಕೆಯಾಗದಂತೆ ಸವಲತ್ತನ್ನು ಅನುಭವಿಸು ಎಂಬ ಜಾಣ್ಮೆ. ಭೂಮಿಯ ಫಲವತ್ತತೆಗೆ ಧಕ್ಕೆಯಾಗದಂತೆ ನೀರು, ಗೊಬ್ಬರಗಳನ್ನು ಬಳಸು, ಬೆಳೆಸು. ಹಿಮಾಲಯದ ನೀರ್ಗಲ್ಲು ಕರಗದಂತೆ ಅಲ್ಲಿಯ ಕಾಡುಗಳನ್ನು, ವಾತಾವರಣವನ್ನು ಬಳಸು. ಶರೀರವೇ ಕೆಟ್ಟು ಹೋಗುವಂತೆ ಭೋಗವನ್ನು ಅನುಭವಿಸಬೇಡ. ಹೊಟ್ಟೆಯೇ ಕೆಟ್ಟು ಹೋಗುವಷ್ಟು ತಿನ್ನಬೇಡ. ಪ್ರಕೃತಿಯಲ್ಲಿನ ಕ್ಷಯ ಮತ್ತು ಅಕ್ಷಯ ಸಂಪತ್ತುಗಳ ನಡುವಿನ ವ್ಯತ್ಯಾಸವನ್ನು ತಿಳಿದು ಕ್ಷಯವೂ ಅಕ್ಷಯವಾಗುವಂತೆ ಎಚ್ಚರವಹಿಸಿ, ಕ್ರಮವಹಿಸಿ ಪಂಚಭೂತಗಳನ್ನು ಅನುಭವಿಸಬೇಕು ಅವುಗಳನ್ನು ರಕ್ಷಿಸಬೇಕು ಎಂಬ ಚಿಂತನೆ.
‘ವೇದಕಾಲದ ಭಾರತವೇ ಈ ದೇಶದ ಅತ್ಯಂತ ಉಚ್ಛಾ›ಯ ಸ್ಥಿತಿ’ ಎಂದು ಸ್ವಾಮಿ ವಿವೇಕಾನಂದರು ಒಂದೆಡೆ ಹೇಳುತ್ತಾರೆ. ಅದಕ್ಕೆ ಕಾರಣವನ್ನು ಸ್ಪಷ್ಟವಾಗಿ ನೋಡಿದೆವು. ಪ್ರಜ್ಞಾವಂತ ಪ್ರಜೆಯೇ ಒಂದು ದೇಶದ ಶ್ರೇಷ್ಠ ಸಂಪನ್ಮೂಲ. ಇದರೆಡೆಗೆ ನಾವಿನ್ನೂ ಗಮನ ಹರಿಸದಿರುವುದು ಶೋಚನೀಯ.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)